- ತೀರ್ಥಹಳ್ಳಿ ಬಳಿ ಸುರಾನಿಯಲ್ಲಿ ಹೊಂಡಕ್ಕೆ ಬಿದ್ದ ಕಾರು
- ತಾಯಿ ಸಾವಿನ ಸುದ್ದಿ ಅಮೇರಿಕಾದಲ್ಲಿರುವ ಮಗನಿಗೆ ತಿಳಿಸಲು ಪರದಾಟ!
- ಮಾನವೀಯತೆ ಮೆರೆದ ಬಾಂದ್ಯಾ ರಾಘು..!
NAMMUR EXPRESS
ತೀರ್ಥಹಳ್ಳಿ: ಮಗನೆದುರೇ ತಾಯಿ ಅಪಘಾತದಲ್ಲಿ ಮೃತಪಟ್ಟ ಘಟನೆ ತೀರ್ಥಹಳ್ಳಿ ಪಟ್ಟಣದ ಸುರಾನಿ ಬಳಿ ಸಂಭವಿಸಿದೆ.
ಕೋಣಂದೂರು ಸಮೀಪದ ಶಂಕ್ರಳ್ಳಿಯ ದರ್ಶನ್ ಚಾಲನೆ ಮಾಡುತ್ತಿದ್ದ ಕಾರು ಸುರಾನಿ ಸಮೀಪದ ಭೂತರಾಯ ಸ್ವಾಮಿ ದೇಗುಲದ ಬಳಿ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಕಾರಣ ಕೋಣಂದೂರು ಸಮೀಪದ ಶಂಕರಹಳ್ಳಿಯ ಸದಾಶಿವ ಎಂಬುವರ ಪತ್ನಿ ಸುಂದರಮಾಲಾ(63) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಂದರಮಾಲಾ ಅವರ ಮಗ ದರ್ಶನ್ ಗಾಯಗೊಂದು ಜೆಸಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ. ಇವರ ಇನ್ನೊರ್ವ ಪುತ್ರ ಅಮೇರಿಕಾದಲ್ಲಿದ್ದಾರೆ.
ತೀರ್ಥಹಳ್ಳಿ ಖಾಸಗಿ ಆಸ್ಪತ್ರೆಗೆ ತಮ್ಮ ಕಾರಿನಲ್ಲಿ ಬಂದು ಮನೆಗೆ ಮರಳುವಾಗ ಈ ಘಟನೆ ನಡೆದಿದೆ.
ಕಾರು ಚಾಲನೆ ಮಾಡುತ್ತಿದ್ದ ಮಗ ಸೀಟ್ ಬೆಲ್ಟ್ ಹಾಕಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತಾಯಿ ಸೀಟ್ ಬೆಲ್ಟ್ ಹಾಕದ ಕಾರಣ ತಲೆ ಹೊಡೆದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಇನ್ನೊರ್ವ ಮಗ ಅಮೇರಿಕಾದಲ್ಲಿದ್ದು ತಾಯಿ ಸಾವಿನ ಸುದ್ದಿ ತಿಳಿಸಲು ಸಾಧ್ಯವಾಗದ ಪರಿಸ್ಥಿತಿ ಮನಕಲಕುವಂತಿತ್ತು. ಅಲ್ಲಿ ರಾತ್ರಿಯಾಗಿದ್ದರಿಂದ ಆತ ಕರೆ ಸ್ವೀಕರಿಸಿಲ್ಲ ಎಂದು ತಿಳಿದು ಬಂದಿದ್ದು ಇದೀಗ ಗೊತ್ತಾಗಿದೆ.
ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪದೇ ಪದೇ ಅಪಘಾತ: ಸುರಾನಿ ಭೂತರಾಯ ಸ್ವಾಮಿ ದೇಗುಲದ ಸಮೀಪ ಪದೇ ಪದೇ ಅದೇ ಜಾಗದಲ್ಲಿ ಅಪಘಾತ ಸಂಭವಿಸುತ್ತಿದೆ. ಕಳೆದ ತಿಂಗಳು ಅದೇ ಜಾಗದಲ್ಲಿ ಪಿಕ್ ಅಪ್ ಪಲ್ಟಿ ಹೊಡೆದಿತ್ತು. ಇನ್ನು ಎರಡು ತಿಂಗಳು ಹಿಂದೆ ಗುತ್ತಿಗೆದಾರರೊಬ್ಬರ ಫೋರ್ಡ್ ಎಂಡವರ್ ಕಾರು ಅಪಘಾತ ಆಗಿತ್ತು. ರಸ್ತೆ ಪರಿಶೀಲಿಸಿ ತಡೆಗೋಡೆ ಹಾಕಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಶಾಸಕರ ಭೇಟಿ: ಘಟನಾ ಸ್ಥಳಕ್ಕೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿದ್ದು ಆಸ್ಪತ್ರೆಗೂ ತೆರಳಿ ಪುತ್ರನಿಗೆ ಸಾಂತ್ವನ ಹೇಳಿದ್ದಾರೆ.
ಅಪಘಾತವಾಗಿ ಇಬ್ಬರು ಬಿದ್ದಾಗ ಅನೇಕ ಜನ ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ಕರೆ ತರಲು ಹೆದರಿದರು. ಆದರೆ ಈ ವೇಳೆ ಅದೇ ಮಾರ್ಗ ಬರುತ್ತಿದ್ದ ಯುವ ಮುಖಂಡ ಬಾಂದ್ಯಾ ರಾಘು ಅವರನ್ನು ಆಸ್ಪತ್ರೆಗೆ ಕರೆ ತಂದಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದಿದ್ದಾರೆ.