ಅರಸೀಕೆರೆ: ಭಯ ಹುಟ್ಟಿಸಿದ್ದ ಚಿರತೆ ಸೆರೆ!
– ಬೇಲೂರು ತಾಲೂಕಿನಲ್ಲಿ ಕಡೆಮೆಯಾಗದ ಗಜಪಡೆ ಗಲಾಟೆ
– ಹಾಸನ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ: ಜನರಿಗೆ ಸಂಕಷ್ಟ
NAMMUR EXPRESS NEWS
ಹಾಸನ: ಹಾಸನ ಜಿಲ್ಲೆಯಲ್ಲಿ ಒಂದಲ್ಲ ಒಂದು ಕಡೆ ಕಾಡಾನೆ ಹಾಗೂ
ಇತರೆ ವನ್ಯಜೀವಿಗಳ ಕಾಟ ಮಗ್ಗುಲ ಮುಳ್ಳಾಗಿ ಕಾಡುತ್ತಲೇ ಇದೆ.
ಹೌದು; ಮಲೆನಾಡು ಭಾಗದಲ್ಲಿ ಕಾಡಾನೆ ಕಾಟ ಮಿರಿ ಮೀರಿದ್ದರೆ,
ಉಳಿದ ಕಡೆಗಳಲ್ಲಿ ಚಿರತೆ ಹಾವಳಿ ಜನರಿಗೆ ತೊಂದರೆ ಕೊಡುತ್ತಿದೆ.
ಇದೇ ಕಾರಣಕ್ಕೆ ಅರಸೀಕೆರೆ ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ರೈತರು, ಸ್ಥಳೀಯರಿಗೆ ತೊಂದರೆ, ಸಾಕುಪ್ರಾಣಿಗಳ ಜೀವಕ್ಕೆ ಕಂಟಕ ಆಗಿದ್ದ ಚಿರತೆ ಕಡೆಗೂ ಬೋನಿಗೆ ಬಿದ್ದಿದೆ. ಇದರಿಂದ ಚಿರತೆ ಆತಂಕದಿಂದ ಭಯಗೊಂಡಿದ್ದ ಗ್ರಾಮಸ್ಥರು ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಭಯ ಹುಟ್ಟಿಸಿರುವ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅದರಂತೆ ಇಟ್ಟಿದ್ದ ಬೋನಿನಲ್ಲಿ ಎರಡು ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ.
ಈ ಚಿರತೆ ಹಲವು ದಿನಗಳಿಂದ ರಾಮಸಾಗರ ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ರಾತ್ರಿ ಹಾಗೂ ಮುಂಜಾನೆ ಎಂಟ್ರಿಕೊಡುತ್ತಿತ್ತು.
ಈ ವೇಳೆ ಸಿಕ್ಕ ಕುರಿ, ಕೋಳಿ, ನಾಯಿಗಳನ್ನು ಹೊತ್ತೊಯ್ದು ತಿಂದು ಹಾಕುತ್ತಿತ್ತು.
ಹಗಲು ವೇಳೆಯಲ್ಲಿ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ, ರೈತರ ಜಮೀನಿನಲ್ಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು. ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದರು.
ಇದಕ್ಕೆ ಸ್ಪಂದಿಸಿ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇಟ್ಟಿದ್ದರು. ಇಂದು ಆಹಾರ ಅರಸಿ ಬಂದ ಎರಡು ವರ್ಷದ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ. ಚಿರತೆ ಸೆರೆಯಿಂದ ಸ್ಥಳೀಯರು ಹಾಗೂ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದಿಢೀರ್ ಎಂಟ್ರಿ: ಕಾರ್ಮಿಕರು ಕಂಗಾಲು!
ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವಾಗಲೇ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಕಂಡು ಕಾರ್ಮಿಕರು ಎದ್ದೆವೋ, ಬಿದ್ದೆವೋ ಎಂದು ಓಡಿ ಹೋದ ಘಟನೆ ಬೇಲೂರು ತಾಲೂಕು ಲಕ್ಕುಂದ ಗ್ರಾಮದ ಕೋಡಗನಹಳ್ಳಿ ಬಳಿ ನಡೆದಿದೆ.
ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಹತ್ತಾರು ಕಾರ್ಮಿಕರು ಕೆಲಸ ನಿಲ್ಲಿಸಿ ಗಿಡದ ಮರೆಯಲ್ಲಿ ನಿಂತು ರಕ್ಷಣೆ ಪಡೆದುಕೊಳ್ಳುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ವೇಳೆ ಪಟಾಕಿ ಸಿಡಿಸಿದ್ದರಿಂದ ಬೀಟಮ್ಮ ಗುಂಪಿನಿಂದ ಕಾಡಾನೆಗಳ ಒಂದು ತಂಡ ಬೇರೆಯಾಗಿದ್ದು, ಸಿಕ್ಕ ಸಿಕ್ಕಲ್ಲಿ ಸಂಚರಿಸುತ್ತಿವೆ.
ಒಂದು ತಂಡ ಏಕಾಏಕಿ ಕಾಫಿ ತೋಟದೊಳಗೆ ಒಂದು ಕಡೆಯಿಂದ ಎಂಟ್ರಿಕೊಟ್ಟು ಮತ್ತೊಂದು ಕಡೆಗೆ ದಾಟಿ ಹೋಗಿ ಬೀಡುಬಿಟ್ಟಿವೆ.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ, ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲೇ ಮೊಕ್ಕಾಂ ಹೂಡಿದ್ದಾರೆ.
ಕಾಡಾನೆಗಳ ಚಲನವಲನದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡುತ್ತಿದ್ದಾರೆ. ಇನ್ನೊಂದೆಡೆ ಆತಂಕದಲ್ಲೇ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಾಡಾನೆ ಹಾವಳಿಯಿಂದ ರೈತರು ಹಾಗೂ ಕಾಫಿ ಬೆಳೆಗಾರರು ರೋಸಿ ಹೋಗಿದ್ದು, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.