ನೂತನ ಸಂಸದರ ಕಛೇರಿ ಆರಂಭಿಸಿ ಸಂಸದ ಕೋಟಾ
* ಜನರ ಕಷ್ಟಗಳಿಗೆ ಸ್ಪಂದಿಸಲು ಕಛೇರಿ ಆರಂಭ
* ವಾರದಲ್ಲಿ ಎರಡು ದಿನ ಜನರ ಅಹವಾಲು ಸ್ವೀಕಾರ
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ನಗರಸಭೆ ಆವರಣದಲ್ಲಿ ಸಂಸದರ ನೂತನ ಕಛೇರಿ ಉದ್ಘಾಟಿಸಿದ ಸಂಸದ ಕೋಟಾ ಶ್ರೀನಿವಾಸ ಪೂಜಾರಿಯವರು ಜಿಲ್ಲೆಯ ಎಲ್ಲ ಪರಿವಾರದ ಜನರ ಭಾವನೆಗಳನ್ನು ಅರ್ಥಮಾಡಿಕೊಂಡು ಸಂಸದರ ಕಛೇರಿ ಆರಂಭಿಸಿದ್ದಾರೆ.
ಜನಸಾಮಾನ್ಯರು ಮತ್ತು ಬಡವರ ಸಮಸ್ಯೆಗಳನ್ನು ಪರಿಹರಿಸಲು ಕಛೇರಿ ಸಹಾಯಕವಾಗಿದೆ,ಸಂಸದರ ಕಛೇರಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸುವ ಕಛೇರಿಯಾಗಲಿ ಎಂಬ ಉದ್ದೇಶದಿಂದ ನೂತನ ಕಛೇರಿಗೆ ಚಾಲನೆ ನೀಡಲಾಗಿದೆ ಎಂದರು.
ಸರ್ಕಾರಿ ಕಛೇರಿಗಳ ಸಮಯದಂತೆ ರಜಾ ದಿನಗಳನ್ನು ಹೊರತುಪಡಿಸಿ, ಅಗತ್ಯ ಸಿಬ್ಬಂದಿ ಈ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ನಾನು ವಾರದಲ್ಲಿ ಎರಡು ದಿನ ಕಚೇರಿಯಲ್ಲಿದ್ದು ಜನರ ಸಮಸ್ಯೆಗೆ ಸ್ಪಂದಿಸುವೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಉಪಚುನಾವಣೆಗೆ ಪಕ್ಷ ನನಗೆ ಉಸ್ತುವಾರಿಯಾಗಿ ಜವಾಬ್ದಾರಿ ನೀಡಿದ್ದು, ಸುಮಾರು 21 ದಿನ ಅದರ ಕೆಲಸ ಮಾಡಬೇಕಾಗಿದೆ. ನಂತರ ಬಹುತೇಕ ಜನರನ್ನು ಭೇಟಿಯಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಅವಧಿಯಲ್ಲಿ ಸಂಸದರಾಗಿದ್ದ ಶೋಭಾ ಕರಂದ್ಲಾಜೆ ಅವರು 150 ಕೋಟಿ ರೂ. ವೆಚ್ಚದಲ್ಲಿ ಉಡುಪಿಯಲ್ಲಿ 100 ಬೆಡ್ಗಳ ಕಾರ್ಮಿಕ ಇಲಾಖೆ ಆಸ್ಪತ್ರೆ ಮಂಜೂರು ಮಾಡಿಸಿದ್ದರು. ಪ್ರಚಾರದ ಕೊರತೆಯಿಂದ ಇದು ಬೆಳಕಿಗೆ ಬಂದಿಲ್ಲ ಎಂದು ಹೇಳಿದರು.
ಜನರ ಸಮಸ್ಯೆಗಳನ್ನು ಪರಿಹರಿಸುವ ಒಂದು ಉತ್ತಮ ಕಛೇರಿಯಾಗಲಿ
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ, ಸರಳ ಸಜ್ಜನಿಕೆ ಮೂಲಕವೇ ಜನಮಾನಸದಲ್ಲಿ ವಿಶೇಷ ಪ್ರಭಾವ ಬೀರಿದ್ದಾರೆ. ಸಂಸದರಾದ ನಂತರ ಜನರ ಜತೆ ನಿರಂತರ ಸಂಪರ್ಕ ಇಟ್ಟುಕೊಂಡು ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದಾರೆ. ಅವರು ಮುಂದಿನ 5 ವರ್ಷಗಳಲ್ಲಿ ಇಟ್ಟುಕೊಂಡಿರುವ ಗುರಿ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳು ಸಾಕಾರಗೊಳ್ಳಲಿ.ನಗರಸಭೆಯಲ್ಲಿ ಪ್ರಾರಂಭವಾಗಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರ ಕಛೇರಿ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಜನಸ್ನೇಹಿಯಾಗಿ
ಜನರ ಸಮಸ್ಯೆಗಳನ್ನು ಬಗೆಹರಿಸುವ ಒಂದು ಉತ್ತಮ ಕಛೇರಿಯಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಶುಭಹಾರೈಸಿದರು.
ಕೋಟಾ ಅಭಿವೃದ್ಧಿಯ ಹರಿಕಾರ!
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿವೃದ್ಧಿಯ ಹರಿಕಾರ, ಕೊಟ್ಟ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಆ ಸ್ಥಾನಕ್ಕೆ ಎಲ್ಲ ರೀತಿಯ ಗೌರವ ತಂದುಕೊಡುವ ಶಕ್ತಿ ಇರುವ ಸಂಸದ ಬಯಲುಸೀಮೆ, ಮಲೆನಾಡು, ಕರಾವಳಿ ಎಂಬ ಭೇದ ಮಾಡದೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಎರಡೂ ಜಿಲ್ಲೆಗಳ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುವ ಸರ್ವಶಕ್ತಿ ಹೊಂದಿದ್ದು, ರಾಜಕೀಯದಲ್ಲಿ ಬಹಳ ಅನುಭವ ಇರುವ ವ್ಯಕ್ತಿಯಾಗಿದ್ದಾರೆ ಎಂದು ಎಂಎಲ್ಸಿ ಎಸ್.ಎಲ್ ಭೋಜೇಗೌಡ ಶುಭಹಾರೈಸಿದರು. ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ನೇತೃತ್ವದಲ್ಲಿ ಸಂಸದರಿಗೆ ಅಭಿನಂದಿಸಿ ಶುಭಹಾರೈಸಲಾಯಿತು.