ಶೃಂಗೇರಿ ಕ್ಷೇತ್ರ: ಫಲಾನುಭವಿಗಳಿಗೆ ಸವಲತ್ತು ನೀಡಲು ಪ್ರತಿಪಕ್ಷಗಳಿಂದ ಅಡ್ಡಿ
* ಶಾಸಕ ರಾಜೇಗೌಡ ಆರೋಪ: ನಾನು ಬಡ ರೈತರ ಪರವಾಗಿದ್ದೇನೆ.. ಆದ್ರೂ ಅಪ ಪ್ರಚಾರ
* ಎನ್ ಆರ್ ಪುರದಲ್ಲಿ 29 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ
NAMMUR EXPRESS NEWS
ಎನ್.ಆರ್.ಪುರ: ಪ್ರತಿ ಪಕ್ಷಗಳು ಪದೇಪದೆ ಅಡ್ಡಿಪಡಿಸಿದ್ದರಿಂದ ಬಡವರಿಗೆ ಹಕ್ಕುಪತ್ರ ವಿತರಣೆ ಮಾಡಲು ವಿಳಂಬವಾಗುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದ್ದಾರೆ.
ಎನ್ ಆರ್ ಪುರದ ಪ್ರವಾಸಿ ಮಂದಿರದಲ್ಲಿ 29 ಫಲಾನುಭವಿಗಳಿಗೆ 94ಸಿಸಿ ಅಡಿ ಹಕ್ಕುಪತ್ರ ವಿತರಿಸಿದ ಶಾಸಕ ರಾಜೇಗೌಡ ಪ್ರತಿಪಕ್ಷದವರು ಅರಣ್ಯ ಇಲಾಖೆಯ ಒಪ್ಪಿಗೆ ಇಲ್ಲದೆ ಹಕ್ಕುಪತ್ರ ನೀಡದಂತೆ ಅಧಿಕಾರಿಗಳಿಗೂ ಒತ್ತಡ ಹೇರಿದ್ದರು, ಹಕ್ಕುಪತ್ರ ನೀಡಲು ಹಲವು ಬಾರಿ ದಿನಾಂಕ ನಿಗದಿ ಮಾಡಿದ್ದರೂ ಕೆಲವರು ಅಡ್ಡಿಪಡಿಸಿದ್ದರಿಂದ ವಿಳಂಬವಾಯಿತು. ಇದೇ ಮೊದಲ ಬಾರಿಗೆ 94ಸಿಸಿ ಅಡಿ ಫಲಾನುಭವಿಗಳಿಗೆ ಸವಲತ್ತು ನೀಡಲಾಗಿದೆ,ಈ ಹಿಂದೆ ಜನತಾ ದರ್ಶನದಲ್ಲಿ 49 ಫಲಾನುಭವಿ ಗಳಿಗೆ ಹಾಗೂ ಇತ್ತೀಚೆಗೆ ತಾಲೂಕಿನ ವಿವಿಧ ಗ್ರಾಮ ಗಳಲ್ಲಿ 94ಸಿಸಿ ಅಡಿ 32 ಹಕ್ಕುಪತ್ರಗಳನ್ನು ಕಾನೂನು ಚೌಕಟ್ಟಿನಲ್ಲೇ ನೀಡಿದ್ದೇವೆ. ನಿಯಮ ಮೀರಿ ಸವಲತ್ತು ನೀಡಿದ್ದರೆ ಮುಂದೆ ಫಲಾನುಭವಿಗಳಿಗೆ ತೊಂದರೆಯಾಗುತ್ತದೆ. ಅದಕ್ಕಾಗಿ ಕಾನೂನಿನ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಸವಲತ್ತು ನೀಡಲಾಗಿದೆ ಎಂದು ತಿಳಿಸಿದರು.
ಪ್ರತಿಯೊಬ್ಬರಿಗೂ ಸ್ವಂತ ಮನೆಕಟ್ಟಿಕೊಳ್ಳುವ ಕನಸಿರುತ್ತೆ
ಪ್ರತಿಯೊಬ್ಬರಿಗೂ ಸ್ವಂತ ಮನೆ ಕಟ್ಟಿಕೊಳ್ಳುವ ಕನಸು ಇರುತ್ತೆ, ಮನೆ ಕಟ್ಟಿಕೊಂಡು ಕಳೆದ 60 ವರ್ಷದಿಂದ ವಾಸ ಮಾಡುತ್ತಿದ್ದ 29 ಕುಂಟುಂಬಗಳಿಗೆ 94ಸಿಸಿ ಅಡಿ ಹಕ್ಕುಪತ್ರ ನೀಡಲಾಗಿದ್ದು ಮನೆಯ ಜಾಗ ನಿಮ್ಮ ಸ್ವಂತ ಆಸ್ತಿಯಾಗಿದೆ. ಒಳ್ಳೆಯ ಕೆಲಸ ಮಾಡಲು ಹೊರಟಾಗ ನೂರಾರು ಅಡ್ಡಿ, ಆತಂಕಗಳು ಎದುರಾಗುತ್ತದೆ, ಶತ್ರುಗಳೇ ಕಾಲ ಸರಿದಂತೆ ಮಿತ್ರರಾಗುತ್ತಾರೆ. ರಸ್ತೆ ವಿಸ್ತರಣೆಗಾಗಿ ಸರ್ಕಾರಕ್ಕೆ 60 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿರುವುದಾಗಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಸದಸ್ಯೆ ಜುಬೇದ ಮಾತ ನಾಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರೈಯಾ ಬಾನು, ಸದಸ್ಯರಾದ ಮುನಾವರ್ ಪಾಷ, ಮಹ -ಮೃದ್ ವಸಿ, ನಾಮ ನಿರ್ದೇಶನ ಸದಸ್ಯ ರಜಿ, ಮಾಜಿ ಉಪಾಧ್ಯಕ್ಷ ಸುಬಾನ್, ಬಿಳಾಲಮನೆ ಉಪೇಂದ್ರ, ಕೆಡಿಪಿ ಸದಸ್ಯರಾದ ಅಂಜುಂ, ಕೆ.ವಿ.ಸಾಜು, ಬಗರ್ ಹುಕುಂ ಸಮಿತಿ ಸದಸ್ಯ ಇ.ಸಿ.ಜೋಯಿ, ತಹಸೀಲ್ದಾರ್ ತನುಜ, ಅರ್ಐ ಮಂಜು ಉಪಸ್ಥಿತರಿದ್ದರು.
ಅಪಪ್ರಚಾರ: ಶಾಸಕ
ಸಾಮಾಜಿಕ ಜಾಲ ತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ವ್ಯವಸ್ಥಿತವಾಗಿ ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನು ಅರಣ್ಯ ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲಿ ಮಾತನಾಡುವಾಗ ಭದ್ರಾ ಎಸ್ಟೇಟ್ ಸೇರಿದಂತೆ ದೊಡ್ಡ, ದೊಡ್ಡ ಎಸ್ಟೇಟ್ ಮಾಲೀಕ ರೊಂದಿಗೆ ಚರ್ಚೆ ಮಾಡಿ ಒತ್ತುವರಿ ಮಾಡಿದ ಅರಣ್ಯ ಭೂಮಿ ಬಿಟ್ಟುಕೊಡಬೇಕು ಎಂದು ಮನ ಒಲಿಸಿದ್ದೇನೆ ಎಂದು ಹೇಳಿದ್ದೆ. ಅದನ್ನು ಕೆಲವರು ತಿರುಚಿ ಅಪಪ್ರಚಾರ ಮಾಡುತ್ತಾ ನಾನು ಬಡವರ ಭೂಮಿ ತೆರವುಗೊಳಿಸುತ್ತೇನೆ ಎಂದು ವಾಟ್ಸಾಪ್, ಫೇಸ್ ಬುಕ್ ನಲ್ಲಿ ಹಾಕುತ್ತಿದ್ದಾರೆ. ಜನರು ಅಪಪ್ರಚಾರಕ್ಕೆ ತಲೆ ಕೆಡಿಸಿಕೊಳ್ಳಬಾರದು. ನಾನು ಬಡ ರೈತರ ಪರವಾಗಿದ್ದೇನೆ ಎಂದರು.