ಟಾಪ್ ನ್ಯೂಸ್
ಶಿವಮೊಗ್ಗ : ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ವಿರುದ್ಧ ದೂರು ದಾಖಲು..!
– ಶಿವಮೊಗ್ಗ : ಸಾರ್ವಜನಿಕ ಬಳಕೆಗೆ ಮುಕ್ತಗೊಳ್ಳದ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬಹುಮಹಡಿ ಪಾರ್ಕಿಂಗ್ ಕಟ್ಟಡ!
– ಸೊರಬ : ಅರಣ್ಯ ಇಲಾಖೆ ವಾಚರ್ ಗಳ ಮೇಲೆ ಹಲ್ಲೆ
– ಸಾಗರ: ಸಾಲ ಬಾಧೆ ತಾಳಲಾರದೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ.!!!
NAMMUR EXPRESS NEWS
ಕಾಂಗ್ರೆಸ್ ಮತ್ತು ಮುಸ್ಲೀಮರ ವಿರುದ್ಧ ರಕ್ತಕ್ರಾಂತಿಯ ಮಾತಾಡಿದ್ದ ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತ ಬಳಗದ ಸಂಚಾಲಕರಾದ ಕೆ.ಎಸ್.ಈಶ್ವರಪ್ಪ ವಿರುದ್ಧ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಯನಗರ ಪೊಲೀಸ್ ಇನ್ಸ್ ಪೆಕ್ಟರ್ ಸಿದ್ದೇಗೌಡ ಹೆಚ್.ಎಂ. ರವರು ಸ್ವ ದೂರು ನೀಡಿದ್ದು, ಈಶ್ವರಪ್ಪರ ವಿರುದ್ಧ ನವೆಂಬರ್ 14 ರಂದು 81/2024 ರಂತೆ, ಕಲಂ 196(1)(a), 299BNS ನಂತೆ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ ವಕ್ಫ್ ಪ್ರಕರಣಗಳ ಬಗ್ಗೆ, ಅಂಬೇಡ್ಕರ್ ಇಸ್ಲಾಂ ಸೇರ್ಪಡೆ ಹೇಳಿಕೆ ಬಗ್ಗೆ, ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲೀಮರ ಮೀಸಲಾತಿ ಬಗ್ಗೆ ಕಾಂಗ್ರೆಸ್ ಕಾಂಗ್ರೆಸ್ ಸ್ಪಂದಿಸಿ ಹಿಂದೂಸ್ಥಾನವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದರು. ಧಾರ್ಮಿಕ ಭಾವನೆಗಳು ಕೆರಳುವಂತೆ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿಯೇ ಪೊಲೀಸ್ ಇಲಾಖೆ ಎಚ್ಚೆತ್ತು ಕೊಂಡು ಮೇಲೆ ಧಾರ್ಮಿಕ ಭಾವನೆ ಕೆರಳಿಸಿದ ಆರೋಪದ ಮೇಲೆ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದೆ.
– ಶಿವಮೊಗ್ಗ : ಸಾರ್ವಜನಿಕ ಬಳಕೆಗೆ ಮುಕ್ತಗೊಳ್ಳದ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬಹುಮಹಡಿ ಪಾರ್ಕಿಂಗ್ ಕಟ್ಟಡ!
ಶಿವಮೊಗ್ಗ : ಶಿವಮೊಗ್ಗ ನಗರದ ಹೃದಯ ಭಾಗವಾದ ಹೂವಿನ ಮಾರುಕಟ್ಟೆ ಬಳಿ ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ, ಬಹುಮಹಡಿ ಪಾರ್ಕಿಂಗ್ ಕಟ್ಟಡ ಉದ್ಘಾಟನೆಗೊಂಡು ವರ್ಷವಾಗುತ್ತಾ ಬಂದರೂ ಇಲ್ಲಿಯವರೆಗೂ ಸಾರ್ವಜನಿಕ ಬಳಕೆಗೆ ಮುಕ್ತಗೊಂಡಿಲ್ಲ! ಕೋಟ್ಯಾಂತರ ರೂ. ವೆಚ್ಚ, ಶಿವಮೊಗ್ಗ ನಗರದಲ್ಲಿ ವರ್ಷದಿಂದ ವರ್ಷಕ್ಕೆ, ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಪಾರ್ಕಿಂಗ್ ಸಮಸ್ಯೆ ಉಲ್ಬಣಿಸುತ್ತಿದೆ. ಕೆಲ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ಕಾರಣದಿಂದಲೇ, ಜನ – ವಾಹನ ಸಂಚಾರ ದುಸ್ತರವಾಗಿ ಪರಿಣಮಿಸುತ್ತಿದೆ. ಈ ಕಾರಣದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ, 25 ಕೋಟಿ ರೂ. ವೆಚ್ಚದಲ್ಲಿ ಮೂರು ಮಹಡಿಯ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಸದರಿ ಕಟ್ಟಡದಲ್ಲಿ 172 ಕಾರುಗಳು ಹಾಗೂ 78 ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ ನೆಲ ಮಹಡಿಯಲ್ಲಿ 118 ಮಳಿಗೆಗಳನ್ನು ನಿರ್ಮಿಸಲಾಗಿದೆ. ಇವುಗಳನ್ನು ಹೂವು, ಹಣ್ಣು ಮಾರಾಟ ಮಾಡುತ್ತಿರುವ ವ್ಯಾಪಾರಿಗಳಿಗೆ ನೀಡಲು ನಿರ್ಧರಿಸಲಾಗಿದೆ. ಲಿಫ್ಟ್ ವ್ಯವಸ್ಥೆ ಸೇರಿದಂತೆ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮಳಿಗೆಗಳಿಗೆ ಬಾಡಿಗೆ ದರ ನಿಗದಿಗೊಳಿಸಿ, ವ್ಯಾಪಾರಿಗಳಿಗೆ ಹಂಚಿಕೆ ಮಾಡಬೇಕಾಗಿದೆ. ಉಳಿದಂತೆ ವಾಹನಗಳ ನಿಲುಗಡೆಗೆ ಟೆಂಡರ್ ಆಹ್ವಾನಿಸಿ, ಅರ್ಹ ಗುತ್ತಿಗೆದಾರರಿಗೆ ಅವಕಾಶ ಕಲ್ಪಿಸಬೇಕಾಗಿದೆ. ಆದರೆ ಇಲ್ಲಿಯವರೆಗೂ ಇವ್ಯಾವ ಕೆಲಸಗಳು ಆಗಿಲ್ಲವಾಗಿದೆ. ಇದರಿಂದ ಪ್ರತಿ ತಿಂಗಳು ಕಟ್ಟಡದಿಂದ ಬರಬಹುದಾಗಿದ್ದ ಲಕ್ಷಾಂತರ ರೂ. ಆದಾಯ ನಷ್ಟವಾಗುತ್ತಿದೆ!
– ಸೊರಬ : ಅರಣ್ಯ ಇಲಾಖೆ ವಾಚರ್ ಗಳ ಮೇಲೆ ಹಲ್ಲೆ
ಸೊರಬ: ಅರಣ್ಯ ಭೂಮಿ ಒತ್ತೂವರಿದಾರರರಿಂದ ಬೀಟ್ ಫಾರೆಸ್ಟರ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಡಿಎಫ್ ಒ ಮೋಹನ್ ಕುಮಾರ್ ಹೇಳಿದರು.
ತಾಲೂಕಿನ ಗಡಿಭಾಗ ಚಿಕ್ಕಲಗೋಡು ಗ್ರಾಮದಲ್ಲಿ ಶಿರಸಿ ಭಾಗದಿಂದ ಆನೆ ಗಳ ಹಿಂಡು ಕಾಣಿಸಿಕೊಂಡಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿತ್ತು. ಈ ಹಿನ್ನೆಲೆ ಬೀಟ್ ಫಾರಸ್ಟರ್ ಗಳಾದ ಉಮೇಶ್ ಹಾಗೂ ಇಮ್ರಾನ್ ಅವರು ಸ್ಥಳ ಪರಿಶೀಲನೆಗೆ ತೆರಳಿದ್ದಾರೆ. ಈ ವೇಳೆ ಚಿಕ್ಕಲಗೋಡು ಗ್ರಾಮದ ಸರ್ವೆ ನಂ. 25ರಲ್ಲಿನ ರಾಜ್ಯ ಅರಣ್ಯದಲ್ಲಿ ಒತ್ತೂವರಿ ಮಾಡಿ ಅನಾನಸ್ ಬೆಳೆದಿದ್ದು ಮಾತ್ರವಲ್ಲದೇ, ಪ್ಲಾಂಟೇಷನ್ ನಲ್ಲಿ ಲಾರಿ ಸಂಚಾರಕ್ಕಾಗಿ ಗಿಡಗಳನ್ನು ಕಡಿಯಲಾಗಿತ್ತು. ಈ ಬಗ್ಗೆ ಪ್ರಶ್ನಿಸಿದ ಬೀಟ್ ಫಾರೆಸ್ಟರ್ ಮೇಲೆ ರಶೀದ್ ಬನವಾಸಿ ಎಂಬಾತ ದಿಢೀರನೇ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ಬೀಟ್ ಫಾರೆಸ್ಟರ್ ಅವರನ್ನು ಸೊರಬದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಚಿಕ್ಕಲಗೋಡು ಗ್ರಾಮದ ಸ್ಟೇಟ್ ಫಾರೆಸ್ಟ್ ಒತ್ತೂವರಿ ಮಾಡಿದ್ದ ಶಿವಪ್ಪ ಈರಪ್ಪ ಹಾಗೂ ಬಸಪ್ಪ ಈರಪ್ಪ ಅವರ ಮೇಲೆಯೂ ಪ್ರಕರಣ ದಾಖಲಾಗಿದ್ದು, ಇವರಿಂದ ಗುತ್ತಿಗೆ ಪಡೆದು ಅನಾನಸ್ ಬೆಳೆದಿದ್ದ ರಫೀಕ್ ಬನವಾಸಿ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿ ರಫೀಕ್ ಪರಾರಿಯಾಗಿದ್ದಾನೆ ಎಂದರು. ಇನ್ನು ಅಕ್ರಮವಾಗಿ ಸ್ಟೇಟ್ ಫಾರೆಸ್ಟ್ ನಲ್ಲಿ ಚಲಾಯಿಸಿದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಲಾರಿಯಲ್ಲಿದ್ದ ಅನಾನಸ್ ಹಣ್ಣನ್ನು ನ್ಯಾಯಾಲಯದ ಅನುಮತಿ ಪಡೆದು ಹರಾಜು ಮಾಡಲಾಗುವುದು ಎಂದು ತಿಳಿಸಿದರು.
– ಸಾಗರ: ಸಾಲ ಬಾಧೆ ತಾಳಲಾರದೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ.!!!
ಸಾಗರ: ತಾಲೂಕು ಆನಂದಪುರ ಸಮೀಪದ ಯಡೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೆರುಬೀಸ್ ವಾಸಿ ರೈತ ರಾಮಚಂದ್ರ 48 ವರ್ಷ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಷ್ಟ್ರೀಯ ಬ್ಯಾಂಕುಗಳಲ್ಲಿ ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ 3 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದು. ಸಾಲ ಭಾದೆಯಿಂದ ಸಾಲ ತೀರಿಸಲಾಗದೆ ತಡರಾತ್ರಿ ಆತನ ಮನೆಯ ಹಿಂಭಾಗದಲ್ಲಿರುವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಆನಂದಪುರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.