ಬಂದೂಕು ತೋರಿಸಿ, ಮನೆಯಲ್ಲಿ ಊಟ ಮಾಡಿಕೊಂಡು ಹೋಗಿರುವ ನಕ್ಸಲರು!
– ನಕ್ಸಲರ ಓಡಾಟ ಹಿನ್ನೆಲೆ, ನಕ್ಸಲ್ ನಿಗ್ರಹ ಪಡೆ ಕೂಂಬಿಂಗ್ ಕಾರ್ಯಾಚರಣೆ!
– ದಶಕಗಳ ಬಳಿಕ ನಕ್ಸಲರ ಹೆಜ್ಜೆ ಗುರುತು
NAMMUR EXPRESS NEWS
ಕೊಪ್ಪ: ಕೊಪ್ಪದ ಕಾಡಂಚಿನ ಗ್ರಾಮದ ಮನೆಯೊಂದಕ್ಕೆ ಭೇಟಿ ನೀಡಿದ್ದ ನಕ್ಸಲರು ಬಂದೂಕು ತೋರಿಸಿ ಮನೆಯವರನ್ನು ಬೆದರಿಸಿ ಅಡುಗೆ ತಯಾರಿಸಲು ಹೇಳಿ ಊಟ ಮಾಡಿಕೊಂಡು ಹೋಗಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಡೇಗುಂದಿ ಗ್ರಾಮದ ಸುಬ್ಬೇ ಗೌಡ ಎಂಬವರ ಮನೆಯಲ್ಲಿ ನಕ್ಸಲರಿಗೆ ಸೇರಿದ್ದು ಎನ್ನಲಾಗಿರುವ ಮೂರು ಬಂದೂಕುಗಳು ಸಿಕ್ಕಿದ ಬಳಿಕ ಪೊಲೀಸರು ಮನೆಯವರನ್ನು ವಿಚಾರಣೆಗೊಳಪಡಿಸಿದ್ದು ಆಗ ಮನೆಯವರು ತಮ್ಮನ್ನು ಬಂದೂಕು ತೋರಿಸಿ ಹೆದರಿಸಿರುವ ವಿಚಾರ ತಿಳಿಸಿದ್ದಾರೆ.
ನಕ್ಸಲರ ಓಡಾಟದ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ಕಾಡಂಚಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಎಲ್ಲ ಗಡಿಗಳಲ್ಲಿ ನಾಕಾಬಂಧಿ ಹಾಕಿ ವಾಹನಗಳ ತಪಾಸಣೆ ನಡೆಸುತ್ತಿದೆ. ನಕ್ಸಲ್ ನಿಗ್ರಹ ಪಡೆ ಅಧಿಕಾರಿಗಳು ಸುಬ್ಬೇ ಗೌಡರ ಮನೆಗೆ ಹೋಗಿ ಪರಿಶೀಲನೆ ಮಾಡಿದ್ದಾರೆ.
ಕೊಪ್ಪ ಡಿವೈಎಸ್ಪಿ ನೇತೃತ್ವದಲ್ಲಿ ವಿಚಾರಣೆ ನಡೆದಿದೆ. ಎಷ್ಟು ಜನ ಬಂದಿದ್ದರು? ಅವರ ಬಳಿ ಏನೇನಿತ್ತು? ಏನು ಮಾತಾಡಿದ್ದಾರೆ. ಅಡುಗೆ ಏನು ಮಾಡಿಕೊಟ್ಟಿದ್ದೀರಿ? ಎಷ್ಟು ಜನಕ್ಕೆ ಮಾಡಿಕೊಟ್ಟಿದ್ದೀರಿ? ಎಂದು ವಿಚಾರಿಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಊಟ ಮಾಡಿ ಹೋಗುವಾಗ ಪೊಲೀಸರು ಬರುತ್ತಾರೆ ಎಂದು ನಕ್ಸಲರು ಗನ್ ಬಿಟ್ಟು ಹೋಗಿದ್ದಾರೆ. ನಕ್ಸಲರು ಹೋದ ಮಾರ್ಗದಲ್ಲಿ ನಿರಂತರ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಕೊಪ್ಪ ತಾಲೂಕಿನ ಅರಣ್ಯ ಭಾಗಗಳಲ್ಲಿ ಪೊಲೀಸರು ಹಾಗೂ ಎಎನ್ಎಫ್ ತಂಡ ಹೈ ಅಲರ್ಟ್ ಆಗಿದೆ. ಮುಂಡಗಾರು ಲತಾ ನೇತೃತ್ವದ ತಂಡ ಈ ಭಾಗದಲ್ಲಿ ಸಕ್ರಿಯವಾಗಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಕಾಫಿ ನಾಡಾದ ಚಿಕ್ಕಮಗಳೂರಿನಲ್ಲಿ ದಶಕಗಳ ಬಳಿಕ ನಕ್ಸಲರ ಹೆಜ್ಜೆ ಗುರುತು ಮೂಡಿರುವ ಹಿನ್ನೆಲೆಯಲ್ಲಿ ಪೊಲೀಸರು ಗರಿಷ್ಠ ಎಚ್ಚರಿಕೆಯಿಂದ ಇದ್ದಾರೆ.