ಕರಾವಳಿ ನ್ಯೂಸ್
– ಕಾಂತಾರ ಚಾಪ್ಟರ್-1 ಚಿತ್ರಕ್ಕೆ ವಿಘ್ನ??
– ಚಿತ್ರ ಕಲಾವಿದರಿದ್ದ ಬಸ್ ಪಲ್ಟಿ!
– ಮುಲ್ಕಿ: ಪಕ್ಷಿಕೆರೆ ಕೊಲೆ, ಕಾರ್ತಿಕ್ ಭಟ್ ತಾಯಿ ಹಾಗೂ ಸಹೋದರಿಗೆ ಜಾಮೀನು ಮಂಜೂರು!
– ಮಂಗಳೂರು: ಅಕ್ರಮ ಮರಳುಗಾರಿಕೆ, ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ!
NAMMUR EXPRESS NEWS
ಉಡುಪಿ: ರಿಷಬ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ಕಾಂತಾರ ಸಿನಿಮಾ ಕಲಾವಿದರಿದ್ದ ಬಸ್ ಪಲ್ಟಿಯಾಗಿದ್ದು, ಆರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಬಸ್ ಪಲ್ಟಿ ಆಗಿದ್ದರಿಂದ ಚಿತ್ರತಂಡದಲ್ಲಿ ಬೇಸರ ಆವರಿಸಿದೆ. ಉಡುಪಿ ಜಿಲ್ಲೆಯ ಕುಂದಾಪುರದ ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ತೆರಳುವಾಗ ಕೊಲ್ಲೂರು ಮಾರ್ಗದಲ್ಲಿ 25 ಕಲಾವಿದರಿದ್ದ ಬಸ್ ಅಪಘಾತವಾಗಿದೆ. ಬಸ್ ಪಲ್ಟಿ ಆಗಿ ಹಲವರಿಗೆ ಗಾಯವಾಗಿದ್ದು ಆರು ಜನರಿಗೆ ಗಂಭೀರ ಗಾಯಗಳಾಗಿದ್ದು, ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಕೊಲ್ಲೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕರಾವಳಿ ಭಾಗದ ಬೇರೆ ಬೇರೆ ಕಡೆಗಳಲ್ಲಿ ‘ಕಾಂತಾರ ಚಾಪ್ಟರ್ 1’ ಸಿನಿಮಾಗೆ ಶೂಟಿಂಗ್ ಮಾಡಲಾಗುತ್ತಿದೆ. ವಿವಿಧ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ಕಲಾವಿದರು ಕೊಲ್ಲೂರಿಗೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ‘ಹೊಂಬಾಳೆ ಫಿಲ್ಮ್ಸ್’ ಮೂಲಕ ವಿಜಯ್ ಕಿರಗಂದೂರು ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ ಅವರು ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಭೂಮಿಕೆಯಲ್ಲೂ ನಟಿಸುತ್ತಿದ್ದಾರೆ. ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಆಗಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಡಿಬರುತ್ತಿದೆ. ಬಸ್ ಪಲ್ಟಿ ಆಗಿದ್ದರಿಂದ ಚಿತ್ರತಂಡದಲ್ಲಿ ಬೇಸರ ಆವರಿಸಿದೆ.
* ಮುಲ್ಕಿ: ಪಕ್ಷಿಕೆರೆ ಕೊಲೆ, ಕಾರ್ತಿಕ್ ಭಟ್ ತಾಯಿ ಹಾಗೂ ಸಹೋದರಿಗೆ ಜಾಮೀನು ಮಂಜೂರು
ಮುಲ್ಕಿ: ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್ ಆತ್ಮಹತ್ಯೆ ಹಾಗೂ ಪತ್ನಿ ಹಾಗೂ ಮಗುವಿನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರೇರಣೆ ನೀಡಿದ ಯತ್ನದಲ್ಲಿ ಗೊತ್ತಾ ಕಾರ್ತಿಕ್ ಭಟ್ ಪತ್ನಿಯ ಮನೆಯವರ ದೂರಿನ ಅನ್ವಯ ಜೈಲಿಗೆ ಹೋಗಿರುವ ಕಾರ್ತಿಕ್ ಭಟ್ ತಾಯಿ ಶ್ಯಾಮಲ ಹಾಗೂ ಸಹೋದರಿ ಕಣ್ಮಣಿ ರಾವ್ ವಿಚಾರಣೆ ನ. 23ರಂದು ನಡೆದಿದ್ದು, ಆರೋಪಿಗಳಿಗೆ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ. ಕಳೆದ ದಿನಗಳ ಹಿಂದೆ ಪಕ್ಷಿಕೆರೆ ನಿವಾಸಿ ಆರೋಪಿ ಕಾರ್ತಿಕ್ ಭಟ್ ತನ್ನ ಪತ್ನಿ ಪ್ರಿಯಾಂಕ ಹಾಗೂ ಮಗು ಹೃದಯ್ ವನ್ನು ಕೊಲೆ ಮಾಡಿ ತಾನು ಕೂಡ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ. ಬಳಿಕ ನಡೆದ ಬೆಳವಣಿಗೆಗಳಲ್ಲಿ ಪ್ರಿಯಾಂಕ ಮನೆಯವರು ನೀಡಿದ ದೂರಿನಂತೆ ಕಾರ್ತಿಕ್ ಭಟ್ ತಾಯಿ ಶ್ಯಾಮಲಾ ಹಾಗೂ ಸಹೋದರಿ ಕಣ್ಮಣಿ ವಿರುದ್ಧ ಮುಲ್ಕಿ ಪೊಲೀಸರು ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಿಸಿದ್ದು, ಮೂಡಬಿದ್ರೆ ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಬರೋಬ್ಬರಿ ಹದಿನೈದು ದಿನಗಳ ಬಳಿಕ ಮಂಗಳೂರಿನ ನಾಲ್ಕನೇ ಜಿಲ್ಲಾ ಸೆಶನ್ಸ್ ನ್ಯಾಯಾಲಯ ನ ಆರೋಪಿಗಳಿಗೆ ಶರತ್ತುಗಳ ಅನ್ವಯ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದುಬಂದಿದೆ. ಆರೋಪಿಗಳ ಪರವಾಗಿ ಖ್ಯಾತ ವಕೀಲ ಶರತ್ ಶೆಟ್ಟಿ ವಾದಿಸಿದ್ದರು.
* ಮಂಗಳೂರು: ಅಕ್ರಮ ಮರಳುಗಾರಿಕೆ, ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ!
ಮಂಗಳೂರು: ತೋಟ ಬೆಂಗ್ರೆಯ ಅಳಿವೆ ಬಾಗಿಲಿನಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ಮುಂದುವರಿದಿದ್ದು, ನ. 24 ರಂದು ಮುಂಜಾವ ಮರಳುಗಾರಿಕೆಯಲ್ಲಿ ನಿರತರಾಗಿದ್ದವರು ಸ್ಥಳೀಯ ಮೀನುಗಾರ ಯುವಕನೋರ್ವನಿಗೆ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಸಂಭವಿಸಿದೆ. ಮುಂಜಾವ 2 ಗಂಟೆಯ ಸುಮಾರಿಗೆ ಸ್ಥಳೀಯ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದ ವೇಳೆ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದವರನ್ನು ಪ್ರಶ್ನಿಸಿದ್ದರು. ಆಗ ಸುಮಾರು 15 ಮಂದಿಯ ತಂಡ ಹಲ್ಲೆಗೆ ಮುಂದಾಗಿದೆ. ಕೆಲವು ಮೀನುಗಾರರು ಈ ವೇಳೆ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓರ್ವ ಯುವಕನಿಗೆ ಹಾರೆಯಿಂದ ಬಲವಾದ ಹೊಡೆತ ಬಿದ್ದಿದ್ದು, ಆತನ ಬೆನ್ನು, ಕಣ್ಣು ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿವೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.