ಕೋಣಂದೂರಲ್ಲಿ ಕಾರ್ತಿಕ ದೀಪೋತ್ಸವ ರಂಗು!
– ಶ್ರೀ ಮಹಾಗಣಪತಿ, ಶ್ರೀ ಬನಶಂಕರಿ ದೇವಸ್ಥಾನದಲ್ಲಿ ದೀಪೋತ್ಸವ
– ಜನ ಮನ ಸೆಳೆದ ‘ಸ್ವರ ನಿನಾದ’ ಸಂಗೀತ ಝಲಕ್
– ದಿನವಿಡೀ ಧಾರ್ಮಿಕ ಕಾರ್ಯಕ್ರಮ: ಪಟಾಕಿ ಚಿತ್ತಾರ!
NAMMUR EXPRESS NEWS
ಕೋಣಂದೂರು: ಶ್ರೀ ಮಹಾಗಣಪತಿ ಶ್ರೀಬನಶಂಕರಿ ದೇವಸ್ಥಾನದಲ್ಲಿ ಭಾನುವಾರದಂದು ವಾರ್ಷಿಕ ಕಾರ್ತಿಕ ದೀಪೋತ್ಸವವು ಶ್ರೀ ದೇವರ ಸನ್ನಿಧಿಯಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಕ್ಷೀರಾಭಿಷೇಕ, ಪಂಚಾಮೃತ ವಿಶೇಷ ಪೂಜೆ, ಶ್ರೀ ಬನಶಂಕರಿ ಪಾರಾಯಣ, ಮಹಾಮಂಗಳಾರತಿ, ಉಡಿತುಂಬುವ ಕಾರ್ಯಕ್ರಮ,ಸಂಜೆ ಕುಂಕುಮಾರ್ಚನೆ, ರಾತ್ರಿ 9-30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಜತೆಗೆ ದೀಪೋತ್ಸವ ನಡೆಯಿತು. ದೀಪೋತ್ಸವದ ಅಂಗವಾಗಿ ಸಿಡಿಮದ್ದು ಪ್ರದರ್ಶನ ನಡೆಯಿತು. ಅರ್ಚಕರಾದ ಕಿರಣ್ ಭಟ್, ಗ್ರಾಮಸ್ಥರು, ಪ್ರಮುಖರು ಹಾಜರಿದ್ದರು.
ಗಮನ ಸಂಗೀತ ಗಾನ ಸುಧೆ ಕಾರ್ಯಕ್ರಮ
ಮಲೆನಾಡ ಖ್ಯಾತ ಗಾಯಕ, ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ಶಶಿಕುಮಾರ್ ಕಾರಂತ ಅವರ ನೇತೃತ್ವದಲ್ಲಿ ಜೀ ಟಿವಿ ಕಲಾವಿದರಾದ 2019ರ ಸರಿಗಮಪ ರನ್ನರ್ ಖ್ಯಾತಿಯ ಮಂಗಳೂರು ತನುಶ್ರೀ ಗಾಯಕ ಮನೋಹರ್ ಮಂಗಳೂರು , ಕೀ ಬೋರ್ಡ್ ಭಾಸ್ಕಾರಾಚಾರ್ಯ ಬಸರೂರು, ತಬಲ ಪ್ರದೀಪ್ ಆಚಾರ್ಯ ಹಳೆಯಂಗಡಿ, ರಿದಂ ಪ್ಯಾಡ್ ಸಂತೋಷ್ ಪಾಣೆ ಹಾವಂಜೆ ತಂಡದ ಸಾಂಗತ್ಯದಲ್ಲಿ ಭಕ್ತಿ-ಭಾವ ಆಯ್ದ ಮಾಧುರ್ಯ ಪ್ರಧಾನ ಚಲನಚಿತ್ರ ಗೀತೆಗಳ ಸಂಗೀತ ಕಾರ್ಯಕ್ರಮ ನಡೆಯಿತು.
ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿದ ಎಚ್.ರಾಮಚಂದ್ರ ಜೋಯ್ಸ್
ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿದ ಧರ್ಮದರ್ಶಿಗಳಾದ ನಿವೃತ್ತ ಪ್ರಿನ್ಸಿಪಾಲರಾದ ಕೋಣಂದೂರು ಎಚ್.ರಾಮಚಂದ್ರ ಜೋಯ್ಸ್, ಪುತ್ರರಾದ ಗಿರೀಶ್, ಶಾಮಣ್ಣ, ಶಶಿಧರ್ ದಂಪತಿಗಳು ಇದ್ದರು. ಈ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡಿದ ಸರ್ವರನ್ನು ದೇವಸ್ಥಾನದ ಧರ್ಮದರ್ಶಿಗಳಾದ ಹೆಚ್.ರಾಮಚಂದ್ರ ಜೋಯ್ಸ್ ಮತ್ತು ಕುಟುಂಬ ವರ್ಗದವರು ಧನ್ಯವಾದ ಅರ್ಪಿಸಿದ್ದಾರೆ. ಪಟಾಕಿ ಚಿತ್ತಾರಗಳು ಗಮನ ಸೆಳೆದವು. ಅಲ್ಲದೆ ನೂರಾರು ಮಂದಿ ಕಾರ್ಯಕ್ರಮದ ಸವಿ ಸವಿದರು.