ಪಿಯು ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ಕಿರಿಕಿರಿ!?
– ಪ್ರವೇಶ ಪರೀಕ್ಷೆಗಾಗಿ ನೀಡಲಾಗುತ್ತಿರುವ ಅನ್ಲೈನ್ ತರಬೇತಿ
– ರದ್ದು ಪಡಿಸಲು ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಅಗ್ರಹ
NAMMUR EXPRESS NEWS
ಬೆಂಗಳೂರು: ಪಿಯು ವಿಜ್ಞಾನ ವಿಷಯದ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗಾಗಿ ನೀಡಲಾಗುತ್ತಿರುವ ಅನ್ಲೈನ್ ತರಬೇತಿ ರದ್ದು ಮಾಡಿ ವಿಶೇಷ ತರಗತಿ ನಡೆಸುವಂತೆ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಆಗ್ರಹಿಸಿದೆ. 2024-25ನೇ ಸಾಲಿನ ವಿಜ್ಞಾನ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ಪ್ರಥಮ ಮತ್ತು ದ್ವಿತೀಯ ವರ್ಷದ ವಿಜ್ಞಾನ ವಿಭಾಗದ ವಿಷಯಗಳಿಗೆ ಪಠ್ಯಕ್ರಮ ಬೋಧಿಸಲು ವಾರ್ಷಿಕವಾಗಿ 120 ಗಂಟೆಗಳನ್ನು ನಿಗದಿಮಾಡಲಾಗಿದೆ. ಈ ಮಧ್ಯೆ, ಕಿರು ಪರೀಕ್ಷೆ, ಮಧ್ಯವಾರ್ಷಿಕ ಪರೀಕ್ಷೆ ಮತ್ತು ಪೂರ್ವ ಸಿದ್ಧತಾ ಪರೀಕ್ಷೆ ಸಮಯವನ್ನು ಕಳೆದರೆ ಪಠ್ಯಕ್ರಮ ಬೋಧನೆ ಮುಗಿಸುವುದು ಕಷ್ಟಕರವಾಗಿದೆ. ಪ್ರಸಕ್ತ ವರ್ಷದಲ್ಲಿ ಬೆ.9ರಿಂದ 10.15ರ ವರೆಗೆ ಹಾಗೂ ಮಧ್ಯಾಹ್ನ 3ರಿಂದ 4.15ರ ವರೆಗೆ ಪ್ರವೇಶ ಪರೀಕ್ಷೆಗೆ ಆನ್ಲೈನ್ ಮೂಲಕ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ವಿಷಯ ಬೋಧಕರನ್ನು ನಿಯೋಜಿಸಲಾಗಿದೆ. ಆದರೆ, ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಆನ್ಲೈನ್ ತರಗತಿ ಗಳಿಗೆ ಆಯ್ಕೆಯಾಗಿರುವುದಿಲ್ಲ. ಆಯ್ಕೆಯಾಗದ ವಿದ್ಯಾರ್ಥಿಗಳಿಗೆ ಆಯ್ಕೆಯ ವಿಷಯದ ಬೋಧನೆ ನಷ್ಟವಾಗುತ್ತಿದೆ.
ಪಠ್ಯ ಪೂರ್ಣವಾಗಲ್ಲ: ವಿಜ್ಞಾನ ವಿಷಯ ಬೋಧನೆಗೆ ಪ್ರತಿ 4 ಹಾಗೂ ವಾರದಲ್ಲಿ 24 ಗಂಟೆಗಳು ಮಾತ್ರ ಲಭ್ಯವಾಗಲಿದೆ. ಇದರಿಂದ ಪಠ್ಯಕ್ರಮವನ್ನು ಪೂರ್ಣ ಪ್ರಮಾಣದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಮತ್ತು ಪ್ರಾಯೋಗಿಕ ತರಬೇತಿಗಳನ್ನು ಕೂಡ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಬೆಳಗ್ಗೆ ಬೇಗ ಕಾಲೇಜಿಗೆ ಬರಬೇಕಾಗಿರುವುದರಿಂದ ಮತ್ತು ಸಂಜೆ 4.15ರವರೆಗೆ ಆನ್ಲೈನ್ ತರಬೇತಿ ಇರುವುದರಿಂದ ವಿದ್ಯಾರ್ಥಿನಿಯರು ಮನೆಗೆ ತೆರಳುತ್ತಿರುವುದು ವಿಳಂಬವಾಗುತ್ತಿದೆ. ಇದರಿಂದ ಪೋಷಕರು ಆಯಾ ಕಾಲೇಜಿನ ಪ್ರಾಚಾರ್ಯರಿಗೆ ಪತ್ರ ಬರೆದು ಮಕ್ಕಳಿಗೆ ಆನ್ಲೈನ್ ತರಗತಿ ಬೇಡವೆಂದು ಹೇಳುತ್ತಿದ್ದಾರೆ. ಆದ್ದರಿಂದ ಮಧ್ಯಾಹ್ನದ ಅವಧಿಯ ತರಬೇತಿಯನ್ನು ರದ್ದುಗೊಳಿಸಿ ವಿಶೇಷ ತರಗತಿಗಳ ಮೂಲಕ ಪಠ್ಯಕ್ರಮ ಪೂರ್ಣ ಗೊಳಿಸಲು ಮತ್ತು ಪ್ರಾಯೋಗಿಕ ತರಗತಿ ಗಳನ್ನು ನಡೆಸಲು ಅನುವು ಮಾಡಿಕೊಡ ಬೇಕು ಎಂದು ಸಂಘವು ಆಗ್ರಹಿಸಿದೆ. ಕಿರು ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆಯುವ ಸಂದರ್ಭದಲ್ಲಿ ತರಬೇತಿ ಮುಂದೂಡುವುದು ಮತ್ತು ವಾರ್ಷಿಕ ಪರೀಕ್ಷೆಗಳು ಮುಕ್ತಾಯವಾದ ನಂತರ ತರಬೇತಿ ಕಾರ್ಯಕ್ರಮವನ್ನು ಮುಂದುವರಿಸುವಂತೆ ಸಂಘದ ಅಧ್ಯಕ್ಷ ಎ.ಎಚ್.ನಿಂಗೇಗೌಡ ಒತ್ತಾಯಿಸಿದ್ದಾರೆ.