ಕಾಮಗಾರಿ ವೇಳೆ ಟಿಪ್ಪರ್ ಪಲ್ಟಿ!
– ಹೊಳೆ ಬದಿ, ಶಿಲೆಗಲ್ಲುಗಳ ಅನ್ಲೋಡ್ ಮಾಡುತ್ತಿದ್ದ ಸಂದರ್ಭ ಮಗುಚಿಬಿದ್ದ ಘಟನೆ
– ನೀರಿನಲ್ಲಿದ್ದ ಚಾಲಕನ ರಕ್ಷಿಸಿ, ಪ್ರಾಣಾಪಾಯದಿಂದ ಪಾರು
NAMMUR EXPRESS NEWS
ಕುಂದಾಪುರ: ನಗರದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ರಿಂಗ್ ರೋಡ್ ಕಾಮಗಾರಿಗಾಗಿ ಖಾರ್ವಿಕೇರಿ ಬಳಿ ಶಿಲೆಗಲ್ಲುಗಳನ್ನು ಅನ್ಲೋಡ್ ಮಾಡುತ್ತಿದ್ದ ವೇಳೆ ಪಂಚಗಂಗಾವಳಿ ಹೊಳೆಗೆ ಟಿಪ್ಪರ್ ಮಗುಚಿಬಿದ್ದ ಘಟನೆ ಜ. 15ರಂದು ಬುಧವಾರ ಬೆಳಿಗ್ಗೆ ನಡೆದಿದೆ. ರಿಂಗ್ರೋಡ್ ಕಾಮಗಾರಿಗಾಗಿ ಖಾರ್ವಿಕೇರಿ ಪ್ರದೇಶದಲ್ಲಿ ಪಂಚಗಂಗಾವಳಿ ಹೊಳೆ ಬದಿಯಲ್ಲಿ ಟಿಪ್ಪರ್ ನಿಲ್ಲಿಸಿ ಶಿಲೆಗಲ್ಲುಗಳನ್ನು ಅನ್ಲೋಡ್ ಮಾಡುತ್ತಿದ್ದ ಸಂದರ್ಭ ಬದಿಯ ಮಣ್ಣು ಕುಸಿದಿದ್ದರಿಂದ ನಿಯಂತ್ರಣ ತಪ್ಪಿದ ಟಿಪ್ಪರ್ ಹೊಳೆಗೆ ಮಗುಚಿ ಬಿದ್ದಿದೆ. ತಕ್ಷಣ ಸಮೀಪದಲ್ಲೇ ಇದ್ದ ಸ್ಥಳೀಯರು ಟಿಪ್ಪರ್ ಒಳಗೆ ನೀರಿನಲ್ಲಿದ್ದ ಚಾಲಕನನ್ನು ರಕ್ಷಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಿಟಾಚಿ ಸಹಾಯದಿಂದ ಟಿಪ್ಪರ್ ಮೇಲಕ್ಕೆತ್ತಲಾಗುತ್ತಿದೆ.