ಕರ್ನಾಟಕ ಟಾಪ್ ನ್ಯೂಸ್
– ಬೆಂಗಳೂರು: ಸ್ಯಾಂಡಲ್ವುಡ್ ಹಾಸ್ಯನಟ ಸರಿಗಮ ವಿಜಿ ಇನ್ನಿಲ್ಲ!
– ಕುಂಭಮೇಳದಲ್ಲಿ ಆ್ಯಪಲ್ ಸಂಸ್ಥಾಪಕನ ಪತ್ನಿ ಅಸ್ವಸ್ಥ!
– ಸಂಕ್ರಾಂತಿ ಪುಣ್ಯ ಸ್ನಾನಕ್ಕೆ ನದಿಗೆ ಇಳಿದ ಮೂವರ ಸಾವು
NAMMUR EXPRESS NEWS
ಬೆಂಗಳೂರು: ಹಿರಿಯ ಹಾಸ್ಯನಟ ಸರಿಗಮ ವಿಜಿ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕನ್ನಡದ ಹಲವು ಚಿತ್ರಗಳಲ್ಲಿ ಹಾಸ್ಯನಟರಾಗಿ ಅಭಿನಯಿಸಿ, ನೋಡುಗರನ್ನು ರಂಚಿಸುವ ಮೂಲಕ ಹಾಸ್ಯ ಚಕ್ರವರ್ತಿ ಎಂದೇ ಕರೆಸಿಕೊಂಡಿದ್ದವರು. ಸರಿಗಮ ವಿಜಿ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಸರಿಗಮ ವಿಜಿ ಎಂಬ ತಮ್ಮ ರಂಗನಾಮದಿಂದ ಕರೆಯಲ್ಪಡುವ ಆರ್.ವಿಜಯ್ಕುಮಾರ್ ಕನ್ನಡದ ಜನಪ್ರಿಯ ಹಾಸ್ಯ ನಟ, ಬರಹಗಾರರಾಗಿದ್ದಾರೆ. ವಿಜಿ ನಟನಾಗಿ ಸುಮಾರು 269 ಚಿತ್ರಗಳಲ್ಲಿ ನಟಿಸಿದ್ದಾರೆ. 80 ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸಂಸಾರದಲ್ಲಿ ಸರಿಗಮ, ಅವರು ನಿರ್ದೇಶಿಸಿದ ಮತ್ತು ನಟಿಸಿದ ರಂಗಭೂಮಿ ನಾಟಕ, 1390ಕ್ಕೂ ಹೆಚ್ಚು ಬಾರಿ ಪ್ರದರ್ಶನಗೊಂಡಿದೆ.
– ಕುಂಭಮೇಳದಲ್ಲಿ ಆ್ಯಪಲ್ ಸಂಸ್ಥಾಪಕನ ಪತ್ನಿ ಅಸ್ವಸ್ಥ!
ಲಖನೌ: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕೆಲಕಾಲ ಆ್ಯಪಲ್ ಕಂಪನಿಯ ಸಂಸ್ಥಾಪಕ ದಿ. ಸ್ಟೀವ್ ಜಾಬ್ ಪತ್ನಿ ಪೊವೆಲ್ ಜಾಬ್ ಅಸ್ವಸ್ಥರಾಗಿದ್ದರು. ಹೌದು, ಈ ಕುಂಭಮೇಳದಲ್ಲಿ ಸಾಧು-ಸಂತರು ಸೇರಿದಂತೆ ದೇಶ-ವಿದೇಶಗಳ ಗಣ್ಯರು, ಅತಿ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. ಅದೇ ರೀತಿ ಆ್ಯಪಲ್ ಕಂಪನಿಯ ಸಂಸ್ಥಾಪಕರಾಗಿದ್ದ ದಿ. ಸ್ಟೀವ್ ಜಾಬ್ ಪತ್ನಿ ಪೊವೆಲ್ ಜಾಬ್ ಅವರು ಈ ಬಾರಿಯ ಭಾಗವಹಿಸಿದ್ದಾರೆ. ‘ಪೊವೆಲ್ ಜಾಬ್ ಅವರು ಇದುವರೆಗೆ ಇಷ್ಟು ದೊಡ್ಡ ಜನಸಂದಣಿಯನ್ನು ನೋಡಿರಲಿಲ್ಲ. ಸದ್ಯ ಅವರು ಅಲರ್ಜಿಯಿಂದ ಬಳಲುತ್ತಿದ್ದು, ಕ್ಯಾಂಪ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ’ ಎಂದು ನಿರಂಜನಿ ಆಖಾರದ ಮಹಾಮಂಡಳೇಶ್ವರದ ಸ್ವಾಮಿ ಕೈಲಾಸಾನಂದ ತಿಳಿಸಿದ್ದಾರೆ. ‘ಆರೋಗ್ಯ ಚೇತರಿಸಿಕೊಂಡ ಬಳಿಕ ಪೊವೆಲ್ ಜಾಬ್ ಅವರಿಗೆ ಪ್ರತ್ಯೇಕವಾಗಿ ಸ್ನಾನ ಮಾಡಲು ವ್ಯವಸ್ಥೆ ಮಾಡುತ್ತೇವೆ’ ಎಂದೂ ತಿಳಿಸಲಾಗಿದೆ.
– ಸಂಕ್ರಾಂತಿ ಪುಣ್ಯ ಸ್ನಾನಕ್ಕೆ ನದಿಗೆ ಇಳಿದ ಮೂವರ ಸಾವು
ಬೆಂಗಳೂರು: ಮಕರ ಸಂಕ್ರಾಂತಿ ವೇಳೆ ಪೂರ್ಣ ಸ್ನಾನಕ್ಕೆಂದು ನದಿಗೆ ಇಳಿದ ಮೂವರು ವ್ಯಕ್ತಿಗಳು ಸಾವನ್ನಪಿದ ಪ್ರತ್ಯೇಕ ಘಟನೆ ನಡೆದಿದೆ. ಹಾವೇರಿ, ವಿಜಯನಗರ, ಕೊಪ್ಪಳ ಜಿಲ್ಲೆಯಲ್ಲಿ ಪುಣ್ಯ ಸ್ನಾನ ಮಾಡಲು ನದಿಗೆ ಇಳಿದ ಮೂವರು ನೀರು ಪಾಲಾಗಿದ್ದಾರೆ. ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿಯ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಇಳಿದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ತಿಪ್ಪೇಶ್(21) ನೀರುಪಾಲಾಗಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹೊಂಕಣ ಗ್ರಾಮದ ಬಳಿ ವರದಾ ನದಿಯಲ್ಲಿ ಇಳಿದ ರಮೇಶ ಕಡೇರ(32) ನೀರು ಪಾಲಾಗಿದ್ದಾರೆ. ಕೊಪ್ಪಳ ತಾಲೂಕಿನ ಕಾತರಕಿ ಜಾಕ್ವೆಲ್ ಸಮೀಪ ಸ್ನಾನ ಮಾಡಲು ಹೋಗಿದ್ದ ಶೇಖರಗೌಡ ನಾಗನಗೌಡ್ರ(30) ಎಂಬುವರು ನೀರು ಪಾಲಾಗಿದ್ದಾರೆ.