ಸಿ.ಟಿ ರವಿ ಟಾರ್ಗೆಟ್ ಮಾಡಿದವರಿಗೆ ಬುದ್ಧಿ ನೀಡು ಕೊರಗಜ್ಜ..!
– ಸಿ.ಟಿ ರವಿಗೆ ಬೆದರಿಕೆ ಪತ್ರ ಬಂದ ಹಿನ್ನೆಲೆ ಯುವ ಮೋರ್ಚಾ ನೇತೃತ್ವದಲ್ಲಿ ಪ್ರಾರ್ಥನೆ
– ಕೊರಗಜ್ಜನಿಗೆ ವಿಶೇಷ ಪೂಜೆ,ಪ್ರಾರ್ಥನೆ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು
NAMMUR EXPRESS NEWS
ಚಿಕ್ಕಮಗಳೂರು: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿದ್ದ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ಗೆ ಅವಾಚ್ಯ ಶದ್ಧಗಳಿಂದ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ನಿಂದಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ ಸಿ.ಟಿ ರವಿಯವರಿಗೆ 15 ದಿನಗಳಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಳಿ ಕ್ಷಮೆ ಕೇಳಬೇಕು ಇಲ್ಲದಿದ್ದಲ್ಲಿ ಸಿ.ಟಿ ರವಿಯವರ ಮನೆಗೆ ನುಗ್ಗಿ ಹೊಡೆಯೋದಾಗಿ,ಮಗನನ್ನು ಕೊಲ್ಲೋದಾಗಿ ಅನಾಮಧೇಯ ಬೆದರಿಕೆ ಪತ್ರವೊಂದು ಬಂದಿತ್ತು. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ಮೂಡಿಗೆರೆ ತಾಲೂಕಿನ ಬಿಳಗುಳದಲ್ಲಿರುವ ಸ್ವಾಮಿ ಕೊರಗಜ್ಜನ ದೇವಾಲಯದಲ್ಲಿ ಆರೋಪ ಮಾಡಿ ಬೆದರಿಕೆ ಪತ್ರ ಕಳಿಸಿರುವ ಕಿಡಿಗೇಡಿಗಳಿಗೆ ಒಳ್ಳೆಯ ಬುದ್ದಿ ನೀಡು ಎಂದು ಪ್ರಾರ್ಥಿಸಿ ಯುವ ಮೋರ್ಚಾದ ಸಂತೋಷ ಕೋಟ್ಯಾನ್ ನೇತೃತ್ವದಲ್ಲಿ ವಿಶೇಷ ಪೂಜೆ,ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಎಸ್.ಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸೀತಾರಾಮ್ ಭರಣ್ಯ, ಯುವ ಮೋರ್ಚಾದ ಅವಿನಾಶ್, ರಾಜೇಶ್ ಕಲ್ಲೊಡ್ಡಿ, ಅರವಿಂದ್ ಸೇರಿದಂತೆ ಅನೇಕ ಬಿಜೆಪಿಯ ಕಾರ್ಯಕರ್ತರು ಪೂಜೆ ಸಲ್ಲಿಸಿದ್ದಾರೆ.