ಆನೆ ಹಾವಳಿ ತಡೆಗೆ ಸೌರ ಯಂತ್ರ ಬಳಕೆ
– ಮಲೆನಾಡು ಭಾಗದಲ್ಲಿ ಅರಣ್ಯ ಇಲಾಖೆಯಿಂದ ಮೊದಲ ಪ್ರಯೋಗ
– ಕಾಡುಪ್ರಾಣಿಗಳು ಹತ್ತಿರ ಬಂದ ಕೂಡಲೇ ಜೋರಾಗಿ ಶಬ್ದ ಮಾಡುವ ಯಂತ್ರ
NAMMUR EXPRESS NEWS
ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಹೆಚ್ಚಾಗಿರುವ ಆನೆ-ಮಾನವ ಸಂಘರ್ಷ ತಡೆಗೆ ಸೌರಶಕ್ತಿ ಆಧರಿತ ವನ್ಯ ಪ್ರಾಣಿ ತಡೆಗಟ್ಟುವ ಯಂತ್ರ ಅಳವಡಿಕೆಗೆ ಅರಣ್ಯ ಇಲಾಖೆ ಮುಂದಾಗಿದೆ. ಟೆಂಟಕಲ್ ಸೌರ ಬೇಲಿ ಮತ್ತು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಹೆಚ್ಚಿನ ಅನುದಾನ ಮತ್ತು ಹೆಚ್ಚಿನ ಸಮಯ ಬೇಕಾಗುತ್ತದೆ. ಕಡಿಮೆ ಖರ್ಚು ಮತ್ತು ಬೇಗ ಅಳವಡಿಸಬಹುದಾದ ಈ ಯಂತ್ರವನ್ನು ಪ್ರಾಯೋಗಿಕವಾಗಿ ಮಲೆನಾಡಿನಲ್ಲಿ ಮೊದಲ ಬಾರಿಗೆ ಅಧಿಕಾರಿಗಳು ಅಳವಡಿಕೆ ಮಾಡುತ್ತಿದ್ದಾರೆ.
ಆನೆ, ಹುಲಿ, ಹಂದಿ ಸೇರಿ ವನ್ಯಜೀವಿಗಳಿಂದ ಬೆಳೆಹಾನಿ, ಜೀವಹಾನಿ ತಡೆಗಟ್ಟಲು ಈ ಯಂತ್ರ ಸಹಾಯವಾಗಲಿದೆ. ವನ್ಯಜೀವಿ ತಡೆಯುವ ಈ ಯಂತ್ರವು (Wild Animal Deterrent System) ಫಾರಂ ಹೌಸ್, ಕೃಷಿ ಭೂಮಿ, ಬೆಟ್ಟಗಳು, ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ಅಳವಡಿಸಲು ಸೂಕ್ತವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಸೌರಶಕ್ತಿ ಸಹಾಯದಿಂದ ಕಾರ್ಯನಿರ್ವಹಿಸುವ ಈ ಯಂತ್ರವು ಹೈಭೀಮ್ ಎಲ್ಇಡಿ ಫ್ಲಾಶ್ ಲೈಟ್ ಹೊಂದಿದೆ. 240 ಡಿಗ್ರಿ ಸುತ್ತಲು ಪ್ರಾಣಿಗಳು ಬರುವುದನ್ನು ಗ್ರಹಿಸುತ್ತದೆ. ಪ್ರಾಣಿಗಳು ಯಂತ್ರವಿರುವ ಸ್ಥಳಕ್ಕೆ ನೇರವಾಗಿ ಬಂದರೆ 30 ಮೀಟರ್, ಅಕ್ಕಪಕ್ಕದಿಂದ ಬಂದರೆ 12 ಮೀಟರ್ ತನಕ ಪ್ರಾಣಿಗಳು ಬರುವುದನ್ನು ಗ್ರಹಿಸುತ್ತದೆ. ವಿಶೇಷ ದೀಪ ಒಳಗೊಂಡಿದ್ದು, ಪ್ರಾಣಿಗಳು ಹತ್ತಿರ ಬರುತ್ತಿದ್ದಂತೆ ಯಂತ್ರದಲ್ಲಿ ಅಳವಡಿಸಿರುವ ಸೆನ್ಸಾರ್ ಪ್ರಾಣಿ ಬರುವಿಕೆಯನ್ನು ಗ್ರಹಿಸಿ ಅಧಿಕ ಶಬ್ದ ಉಂಟು ಮಾಡುತ್ತದೆ. ಇದರಿಂದ ಪ್ರಾಣಿಗಳು ಹೆದರಿ ಓಡಿ ಹೋಗುತ್ತವೆ ಎಂದು ಮಾಹಿತಿ ನೀಡಿದರು. ತಾಲ್ಲೂಕಿನ ವ್ಯಾಪ್ತಿಯಲ್ಲಿ ಆನೆಗಳ ಹಾವಳಿ ಹೆಚ್ಚಾಗಿರುವುದರಿಂದ ಗ್ರಾಮಗಳ ವ್ಯಾಪ್ತಿಯಲ್ಲಿ ಆನೆಗಳು ಬರುವುದನ್ನು ತಡೆಗಟ್ಟಲು ಕಾಡು ಪ್ರಾಣಿ ಹೆದರಿಸುವ ಎರಡು ಯಂತ್ರಗಳನ್ನು ನವದೆಹಲಿಯಿಂದ ತರಿಸಲಾಗಿದೆ. ತಲಾ ₹16 ಸಾವಿರ ಬೆಲೆ ಇದ್ದು, ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ಮಲೆನಾಡು ಭಾಗದಲ್ಲಿ ಅರಣ್ಯ ಇಲಾಖೆಯಿಂದ ಇದೇ ಮೊದಲ ಬಾರಿಗೆ ಅಳವಡಿಸಲಾಗುತ್ತಿದೆ. ಪ್ರಯೋಗ ಯಶಸ್ವಿಯಾದರೆ ಬೇರೆ ಕಡೆಯೂ ಅಳವಡಿಸಬಹುದು ಎಂದು ಅಧಿಕಾರಿಗಳು ಹೇಳಿದರು.
‘ಆನೆಗಳ ಹಾವಳಿ ಹೆಚ್ಚಾಗಿರುವ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೇನುಕಟ್ಟೆಸರ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಅಳವಡಿಸಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಬೇರೆ ಭಾಗದಲ್ಲೂ ಅಳವಡಿಸಲಾಗುವುದು’ ಎಂದು ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ತಿಳಿಸಿದರು.