ಕರ್ನಾಟಕದಲ್ಲಿ ನಿಲ್ಲದ ಮಳೆ ಆರ್ಭಟ!
– 2 ದಿನ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ
– ಬೆಂಗಳೂರಲ್ಲಿ 3 ತಿಂಗಳು ಮಳೆ ನಿಲ್ಲಲ್ಲ
– ರಾಜ್ಯದಲ್ಲಿ ಮಳೆಗೆ ಮತ್ತೆ ಮೂವರ ಬಲಿ
NAMMUR EXPRESS NEWS
ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಮಳೆ ಮುಂದುವರೆದಿದ್ದು ರಾಜ್ಯದಲ್ಲಿ ಒಂದೇ ಸಮನೆ ಮಳೆ ಸುರಿಯುತ್ತಿದೆ.
ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು,
ಸಾಮಾನ್ಯವಾಗಿ ಚೌತಿ ಕಳೆದ ಬಳಿಕ ಕ್ರಮೇಣವಾಗಿ ಮಳೆಕಡಿಮೆಯಾಗುತ್ತಿತ್ತು, ಆದರೆ ಈ ಬಾರಿ ಮಳೆ ನಿಲ್ಲುವ ಲಕ್ಷಣವೇ ಕಾಣುತ್ತಿಲ್ಲ. ಮಳೆಗಾಲ ಆರಂಭದಲ್ಲಿ ಗುಡುಗು, ಸಿಡಿಲು ಮಳೆಯನ್ನು ನಾವು ನೋಡುತ್ತೇವೆ, ಆದರೆ ಈ ಬಾರಿ ಮಳೆಗಾದಲ್ಲೂ ಗುಡುಗು, ಸಿಡಿಲಿನ ಆರ್ಭಟದ ಜತೆಗೆ ಮಳೆಯಾಗಿದೆ.
ಕರ್ನಾಟಕದಲ್ಲಿ ಎಲ್ಲೆಲ್ಲಿ ಮಳೆ:
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಸೆ.13ರವರೆಗೆ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಲೆನಾಡು, ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದೆ.
ಬೆಂಗಳೂರಲ್ಲಿ ಮಳೆ ನಿಲ್ಲಲ್ಲ!: ಬೆಂಗಳೂರಿನಲ್ಲಿ ಮಳೆ ನಿಲ್ಲುವ ಸೂಚನೆ ಕಾಣುತ್ತಿಲ್ಲ. ನವೆಂಬರ್ವರೆಗೂ ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಪ್ರಸಾದ್ ಮುನ್ಸೂಚನೆ ನೀಡಿದ್ದಾರೆ. ಈ ಬಾರಿ ದಾಖಲೆಯ ಮಟ್ಟದ ಪ್ರಮಾಣದ ಮಳೆ ಸಾಧ್ಯತೆಯಿದ್ದು, ಈಗಾಗಲೇ ಮಳೆಯಿಂದ ಬೆಂಗಳೂರಿನ ಜನತೆ ತತ್ತರಿಸಿದ್ದಾರೆ. ಇನ್ನೂ 2 ತಿಂಗಳು ಮಳೆ ಮುಂದುವರಿದರೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಈ ವರ್ಷ ಸೆಪ್ಟೆಂಬರ್ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸಾಧ್ಯತೆಯಿದ್ದು, ಸೆಪ್ಟೆಂಬರ್ ತಿಂಗಳು 211 MM ವಾಡಿಕೆ ಮಳೆಯಾಗಿದೆ. ಆದ್ರೆ ಈ ತಿಂಗಳು ಸೆ.1 ರಿಂದ ಸೆ. 7ರವರೆಗೆ 227 MM ಮಳೆ ದಾಖಲಾಗಿದೆ.
ಬೆಂಗಳೂರಲ್ಲಿ ಯುವತಿ ಬಲಿ: ಬೆಂಗಳೂರಲ್ಲಿ ಚರಂಡಿ ನೀರಿಗೆ ಮತ್ತೊಂದು ಬಲಿಯಾಗಿದೆ. 23 ವರ್ಷದ ತಾರಾ ಬಡಾಯಿಕ್ ಸಾವನ್ನಪ್ಪಿದ ದುರ್ದೈವಿ. ಈ ಘಟನೆ ಎಚ್ ಬಿ ಆರ್ ಲೇಔಟ್ ನ ಅಶ್ವಥ್ ನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ. ತಾರಾ ರಾತ್ರಿ 12.30 ರ ಸುಮಾರಿಗೆ ಡಿಯೊ ಸ್ಕೂಟರ್ ನಲ್ಲಿ ಹೋಗ್ತಿದ್ದಳು. ಈಕೆಯ ಹಿಂಬದಿಯಲ್ಲಿ 38 ವರ್ಷದ ದಿಲೀಪ್ ಕುಳಿತಿದ್ದರು. ಈ ವೇಳೆ ಸ್ಕೂಟರ್ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಡ್ರೈನೇಜ್ ಗೆ ಬಿದ್ದಿದ್ದಾಳೆ.
ಚರಂಡಿಗೆ ಬಿದ್ದರಿಂದ ಯುವತಿ ತೊಡೆಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾಳೆ.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೂಲಿಕಟ್ಟಿಯಲ್ಲಿ ಮನೆ ಕುಸಿದು ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ.
ವಿದ್ಯುತ್ ತಂತಿ ಸರಿಪಡಿಸಲು ಹೋಗಿ ಲೈನ್ ಮ್ಯಾನ್ ಒಬ್ಬರು ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಮಹೇಶ್ ಗೌಡ (40) ಎಂದು ಗುರುತಿಸಲಾಗಿದೆ. ಗುಬ್ಬಿ ತಾಲೂಕಿನ ತಿಪಟೂರಿನಲ್ಲಿ ಅವಘಡ ಸಂಭವಿಸಿದೆ. ಮಹೇಶ್ ಅವರು ಕೆರೆ ಮಧ್ಯೆ ನೀರಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸರಿಪಡಿಸಲು ಹೋಗಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.