ಆಮ್ ಆದ್ಮಿ ಪಕ್ಷಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡ್..!
- ಉತ್ತರ ಕರ್ನಾಟಕದ ಪ್ರಮುಖ ನಾಯಕರ ಸೇರ್ಪಡೆ
- ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಅಖಾಡದಲ್ಲಿ ಆಮ್ ಆದ್ಮಿ ಪಾರ್ಟಿ
- ವಿಧಾನ ಸಭಾ ಚುನಾವಣೆಯಲ್ಲಿ ಮಹತ್ವದ ಪಾತ್ರ!
NAMMUR EXPRESS NEWS
ಬೆಂಗಳೂರು: ದೆಹಲಿ, ಪಂಜಾಬ್ ಅಧಿಕಾರ ಹಿಡಿದ ಜನ ಸಾಮಾನ್ಯರ ಪಕ್ಷ ಆಮ್ ಆದ್ಮಿ ಈಗ ಕರ್ನಾಟಕದಲ್ಲಿ ತನ್ನ ತಂತ್ರಗಾರಿಕೆ ಶುರು ಮಾಡಿದೆ.
ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅತೃಪ್ತ ಶಾಸಕರು, ನಾಯಕರು, ವಕೀಲರು, ತಾರೆಯರು, ಪತ್ರಕರ್ತರು, ಪ್ರಸಿದ್ಧ ಹಾಗೂ ಶುದ್ಧ ಹಸ್ತರನ್ನು ತನ್ನ ಪಾರ್ಟಿಗೆ ಸೇರಿಸಿಕೊಳ್ಳುತ್ತಿದೆ.
ಪೊಲೀಸ್ ಅಧಿಕಾರಿ ಭಾಸ್ಕರ ರಾವ್, ಮುಖ್ಯಮಂತ್ರಿ ಚಂದ್ರು, ಟೆನ್ನಿಸ್ ಕೃಷ್ಣ, ಬ್ರಿಜೇಶ್ ಕಾಳಪ್ಪ, ಖ್ಯಾತ ವಕೀಲ ದಿವಾಕರ್, ಸುಪ್ರೀಂ ಕೋರ್ಟ್ ವಕೀಲ ಸಾಲೂರು ಶಿವಕುಮಾರ್ ಸೇರಿದಂತೆ ಅನೇಕ ಪ್ರಮುಖರು ಈಗಾಗಲೇ ಪಕ್ಷ ಸೇರಿ ಸಂಘಟನೆ ಶುರು ಮಾಡಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಪಕ್ಷಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಸ್ಥಳೀಯ ಸಂಸ್ಥೆ ಚುನಾವಣಾ ಅಖಾಡಕ್ಕೆ..?!
ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಅಖಾಡದಲ್ಲಿ ಆಮ್ ಆದ್ಮಿ ಪಾರ್ಟಿ ತಮ್ಮ ಅಭ್ಯರ್ಥಿ ಕಣಕ್ಕೆ ಇಳಿಸಲು ಚಿಂತನೆ ನಡೆಸಿದೆ. ಜೊತೆಗೆ ಬಿಬಿಎಂಪಿ ಚುನಾವಣೆಗೂ ತನ್ನ ಪ್ಲಾನ್ ಪಕ್ಕಾ ಮಾಡಿಕೊಂಡಿದೆ. ಬಳಿಕ 2023ರ ವಿಧಾನ ಸಭಾ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಹಲವು ಕಡೆ ಗೆಲುವು ಸಾಧಿಸಿದರೂ ಅಚ್ಚರಿ ಇಲ್ಲ ಎನ್ನುತ್ತಾರೆ ವಿಶ್ಲೇಷಕರು.
ಉತ್ತರ ಕರ್ನಾಟಕದಲ್ಲಿ ನಾಯಕರ ಆಗಮನ
ಉತ್ತರ ಕರ್ನಾಟಕದ ಹಲವು ರಾಜಕೀಯ ನಾಯಕರು, ಸಾಮಾಜಿಕ ಹೋರಾಟಗಾರರು ಆಮ್ ಆದ್ಮಿ ಪಕ್ಷ ಸೇರುತ್ತಿದ್ದಾರೆ. ದಿನೇ ದಿನೇ ಆಮ್ ಆದ್ಮಿ ಪಕ್ಷದ ಕಡೆ ಜನತೆ ವಾಲುತ್ತಿದ್ದಾರೆ.
ಬಾದಾಮಿಯ ಕಾಂಗ್ರೆಸ್ ಮುಖಂಡ ಶಿವರಾಯಪ್ಪ ದೊಡ್ಡರಿಯಪ್ಪ ಜೋಗಿನ್, ಬಾಗಲಕೋಟೆಯ ರೈತ ನಾಯಕ ಮುತ್ತಪ್ಪ ಕೋಮರ್, ಬಿಜೆಪಿ ಮುಖಂಡ ಆನೇಕಲ್ ದೊಡ್ಡಯ್ಯ, ಹಾಲುಮತ ಮಹಾಸಭಾ ಸಂಘದ ಯುವ ಘಟಕದ ಅಧ್ಯಕ್ಷ ಸೋಮಣ್ಣ ಮಲ್ಲೂರು, ಕಾರ್ಮಿಕರ ಒಕ್ಕೂಟದ ಅಧ್ಯಕ್ಷೆ ಗೀತಾ ಮಹಾಂತೇಶ್ ಯಾದಗಿ, ಅಧ್ಯಾಪಕರ ಸಂಘದ ಒಕ್ಕೂಟಗಳ ಅಧ್ಯಕ್ಷ ಶ್ರೀನಿವಾಸ್ ಗೌಡ ಸೇರಿದಂತೆ ನೂರಾರು ಮುಖಂಡರು ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ, ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿರೆಡ್ಡಿ, ಉಪಾಧ್ಯಕ್ಷ ಭಾಸ್ಕರ್ ರಾವ್, ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆ ಯಾದರು.
ಪಾರದರ್ಶಕ ಆಡಳಿತ ಆಮ್ ಆದ್ಮಿಯಿಂದ ಸಾಧ್ಯ
ರಾಜ್ಯದ ಜನರು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ಗಳಿಗೆ ಅಧಿಕಾರ ಕೊಟ್ಟರೂ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ. ಅಲ್ಲಿನ ನೀರಾವರಿ ಯೋಜನೆಗಳು ಹಲವು ದಶಕಗಳಿಂದ ನನೆಗುದಿಗೆ ಬಿದ್ದಿವೆ. ಬಿಡುಗಡೆಯಾದ ಸಾವಿರಾರು ಕೋಟಿ ರೂಪಾಯಿ ಭ್ರಷ್ಟ ರಾಜಕಾರಣಿಗಳ ಜೇಬು ಸೇರಿವೆ. ಪಾರದರ್ಶಕ ಆಡಳಿತ ಆಮ್ ಆದ್ಮಿ ಪಕ್ಷದಿಂದ ಮಾತ್ರ ಸಾಧ್ಯವೆಂಬ ಭರವಸೆಯಿಂದ ಪಕ್ಷ ಸೇರುತ್ತಿದ್ದಾರೆ.
- ಪೃಥ್ವಿ ರೆಡ್ಡಿ, ಆಮ್ ಆದ್ಮಿ ಅಧ್ಯಕ್ಷರು, ಕರ್ನಾಟಕ