- ಚಿತ್ರದುರ್ಗದಲ್ಲಿ ಇಂದು ಲಿಂಗಾಯತರ ಮಹತ್ವದ ಸಭೆ
- ಲಿಂಗಾಯತ ಸಮುದಾಯದ ಪ್ರಮುಖರು ಹಾಜರ್
NAMMUR EXPRESS NEWS
ಚಿತ್ರದುರ್ಗ: ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಪೀಠತ್ಯಾಗ ಮಾಡದ ಕಾರಣಕ್ಕೆ ಸೆ.29ರಂದು ಬೆಳಗ್ಗೆ 11.30ಕ್ಕೆ ಚಿತ್ರದುರ್ಗ ತಾಲ್ಲೂಕಿನ ಸೀಬಾರದಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಸ್ಮಾರಕದ ಆವರಣದಲ್ಲಿ ವೀರಶೈವ ಲಿಂಗಾಯತ ಸಮಾಜದ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಯಾವ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಮಾಜಿ ಸಚಿವ ಎಚ್.ಏಕಾಂತಯ್ಯ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ವೀರಶೈವ ಲಿಂಗಾಯತ ಧುರೀಣರು ಭಾಗವಹಿಸುವ ನಿರೀಕ್ಷೆ ಇದೆ. ಸಭೆಯಲ್ಲಿ ಪೀಠತ್ಯಾಗ ಮಾಡದ ಹಿನ್ನೆಲೆಯಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಮುರುಘರಾಜೇಂದ್ರ ಮಠವು ಐತಿಹಾಸಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹೆಸರಾಗಿದೆ. ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಗಂಭೀರ ಆರೋಪ ಎದುರಾಗಿದೆ. ಮಠದ ಗೌರವ ಹಾಗೂ ಪ್ರತಿಷ್ಠೆ ಕಾಪಾಡಲು ಪೀಠತ್ಯಾಗ ಮಾಡಿಲ್ಲ. ಮಠದ ದೈನಂದಿನ ಧಾರ್ಮಿಕ ಮತ್ತು ಆಡಳಿತಾತ್ಮಕ ಚಟುವಟಿಕೆ ನಡೆಸಲು ಹಾಗೂ ಮಠದ ಪರಂಪರೆ, ಸಂಪ್ರದಾಯ ನಿರ್ವಹಿಸಲು ಸಾಧ್ಯವಾಗದಿರುವುದು ದುರದೃಷ್ಟಕರ ಎಂದು ಸಮಾಜ ಪ್ರಮುಖರಿಗೆ ಕಳುಹಿಸಲಾಗಿರುವ ಪತ್ರದಲ್ಲಿ ತಿಳಿಸಲಾಗಿದೆ.
ಸಭೆಗೆ ಆಗಮಿಸಿ ಮಠದ ಮುಂದಿನ ಹಾದಿಯನ್ನು ರೂಪಿಸಲು ಸೂಕ್ತ ಸಲಹೆ ನೀಡಬೇಕು ಎಂದು ಪತ್ರದಲ್ಲಿ ಕೋರಲಾಗಿದೆ. ಸಮಾಜದಮುಖಂಡರಾದ ಜಿ.ವಿ.ರುದ್ರಪ್ಪ, ಎಂ.ಬಿ.ತಿಪ್ಪೇರುದ್ರಪ್ಪ, ಎಂ.ಟಿ.ಮಲ್ಲಿಕಾರ್ಜುನಸ್ವಾಮಿ, ಕೆ.ವಿ.ಪ್ರಭಾಕರ್, ಎಸ್,ಷಣ್ಮುಖಪ್ಪ ಹಾಗೂ ಎ.ವಿಜಯಕುಮಾರ್ ಪತ್ರಕ್ಕೆ ಸಹಿ ಮಾಡಿದ್ದಾರೆ. ಈ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.