- ಬದುಕು ಬಲು ಭಾರ: ಹೆಚ್ಚಿತು ಆತ್ಮಹತ್ಯೆ!
- ಬೆಲೆ ಏರಿಕೆ, ರಾಜಕೀಯ ಸಂಘರ್ಷ, ಉದ್ಯಮ ಸೋಲು
- ಅವಕಾಶ ಇಲ್ಲ… ಉದ್ಯೋಗ ಇಲ್ಲ.. ಹೇಳೋಕೆ ಆಗಲ್ಲ
- ರಾಜ್ಯದಲ್ಲಿ ಹೆಚ್ಚಿದ ಆತ್ಮಹತ್ಯೆ: ಜನ ನಾಯಕರಿಗೆ ಬೇರೆಯವರ ಬದುಕಿನ ಕಾಳಜಿ ಇಲ್ಲ!
NAMMUR EXPRESS NEWS
ಬೆಂಗಳೂರು: ಚುನಾವಣೆ ಬಂದಿದೆ. ಎಲ್ಲಾ ಪಕ್ಷಗಳೂ ಜನರ ಮನ ಗೆಲ್ಲಲು ತಮ್ಮ ಬಗೆಹರಿಯದ ನೂರಾರು ಭರವಸೆಗಳ ಪಾಪ್ಲೇಂಟ್ ಹಿಡಿದು ಊರು ತುಂಬಾ ಫ್ಲೆಕ್ಸ್ ಹಾಕಿ ಮತದಾರನ ಮನ ಗೆಲ್ಲಲು ಮುಂದಾಗಿವೆ.
ಆದರೆ ದಿನೇ ದಿನೇ ಬಡ, ಮಧ್ಯಮ ವರ್ಗದವರ ಬದುಕು ಕುಸಿಯುತ್ತಿದೆ. ಕನಸುಗಳು ಕಮರುತ್ತಿವೆ.
ಅಗತ್ಯ ವಸ್ತು ಬೆಲೆ ಏರಿಕೆ, ಹಣದ ಮಹತ್ವ ಹೆಚ್ಚಳ, ರಾಜಕೀಯ ಸಂಘರ್ಷ, ಉದ್ಯಮ ಸೋಲು ಹೀಗೆ ಸಾಲು ಸಾಲು ಸಾಮಾಜಿಕ ಸಮಸ್ಯೆಗಳು ಮನಸ್ಸನ್ನು ಹತಾಶೆಗೊಳಿಸುತ್ತಿದೆ. ಹೀಗಾಗಿ ಪ್ರತಿ ದಿನ ರಾಜ್ಯ, ದೇಶದಲ್ಲಿ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಒಂದು ಕಡೆ ಓದು, ಅರ್ಹತೆಗೆ ತಕ್ಕ ಅವಕಾಶ ಇಲ್ಲ…ಉದ್ಯೋಗ ಇಲ್ಲ.. ಪ್ರಸ್ತುತ ವ್ಯವಸ್ಥೆಯೊಳಗೆ ಹೇಳೋಕೆ ಆಗಲ್ಲ. ಎಲ್ಲವೂ ರಾಜಕೀಯ, ಪಕ್ಷದ ಮಾನದಂಡದಲ್ಲಿ ಅಳೆಯಲಾಗುತ್ತಿದೆ. ಹೀಗಾಗಿ ಯುವ ಸಮುದಾಯ ಸೇರಿ ದಂತೆ ದಿನ ನಿತ್ಯ ನೂರಾರು ಮಂದಿ ತಮ್ಮ ಸಮಸ್ಯೆಗೆ ಪರಿಹಾರ ಸಿಗದೇ ಜೀವ ಚೆಲ್ಲುತ್ತಿದ್ದಾರೆ.
ಕಳೆದೊಂದು ವಾರದಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿ ವರದಿಯಾಗಿದೆ.
ಉದ್ಯಮಿ ನದಿಗೆ ಹಾರಿ ಸಾವು!
ಮಂಗಳೂರು ಗುರುಪುರ ನದಿಗೆ ಹಾರಿ ಭಾರತೀಯ ಜೇಸಿಸ್ನ ಹಲವು ಹುದ್ದೆಗಳನ್ನು ನಿರ್ವಹಿಸಿದ್ದ ಉದ್ಯಮಿ ಆಶಿತ್ ಕುಮಾರ್ ಅವರುಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲತಃ ಬೆಳ್ತಂಗಡಿ ತಾಲೂಕಿನ ಕಾಶಿಪಟ್ಟ ಗ್ರಾಮದ ಕೇಳದ ಪೇಟೆಯವರಾಗಿರುವ ಆಶಿತ್ ಕುಮಾರ್ (51) ಅವರು ಉದ್ಯಮಿಯಾಗಿದ್ದರು. ಇವರು ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎನ್ನಲಾಗಿದೆ. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.
ಮೂಡುಬಿದಿರೆಯಲ್ಲಿ ಮಹಾವೀರ ಎಲೆಕ್ಟ್ರಾನಿಕ್ಸ್ ಸಂಸ್ಥೆಯನ್ನು ಸ್ಥಾಪಿಸಿ ಮುನ್ನಡೆಸಿದ್ದ ಅವರು ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಬಳಿಕ ಉದ್ಯಮವನ್ನು ಮುಚ್ಚಿ ಮಂಗಳೂರಿನಲ್ಲಿ ಖಾಸಗಿ ಇನ್ಸೂರೆನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿ ಸೇರ್ಪಡೆ ಗೊಂಡು ಮಂಗಳೂರಿನಲ್ಲಿ ನೆಲೆಸಿದ್ದರು. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು, ಮೂಡುಬಿದಿರೆ ತ್ರಿಭುವನ್ ಜೇಸಿಐ ಅಧ್ಯಕ್ಷರಾಗಿ, ವಲಯ 15ರ ವಲಯಾಧಿಕಾರಿ, ವಲಯಾಧ್ಯಕ್ಷರಾಗಿ ನಾನಾ ಹುದ್ದೆಗಳನ್ನು ನಿರ್ವಹಿಸಿದ್ದರು. ಕೇಳದಪೇಟೆ ಬಸದಿಯ ಜೀರ್ಣೋದ್ಧಾರದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಅಧಿಕಾರಿಗಳ ಕಿರುಕುಳ: ಯುವಕ ಆತ್ಮಹತ್ಯೆ ಯತ್ನ
ಕೋಲಾರ: ಗಣ್ಯ ವ್ಯಕ್ತಿಗಳು ಹಾಗೂ ಕೆಲವು ಅಧಿಕಾರಿಗಳ ಕಿರುಕುಳದ ಆರೋಪ ಹಿನ್ನೆಲೆ ಅಂಬೇಡ್ಕರ್ ಸೇವಾ ಸಮಿತಿ ಸಂಘಟನೆಯ ಸಂಸ್ಥಾಪಕ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂದೇಶ್ (28) ಆತ್ಮಹತ್ಯೆಗೆ ಯತ್ನಿಸಿದ ಮುಖಂಡ. ಇತ್ತೀಚೆಗೆ ಕಿಡ್ನಾಪ್ ಪ್ರಕರಣವೊಂದರಲ್ಲಿ ಸಂದೇಶ್ ಜೈಲು ಸೇರಿದ್ದ. ಇದನ್ನೆ ಗುರಿಯಾಗಿಸಿಕೊಂಡು ಅನಗತ್ಯವಾಗಿ ಪ್ರಕರಣ ದಾಖಲಿಸಿ ಕಿರುಕುಳ ನೀಡಿದ ಆರೋಪ ಮಾಡಲಾಗಿದೆ. ಸದ್ಯ ಸಂದೇಶ್ ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಹಾಸ್ಟೆಲ್ ಕೋಣೆಯಲ್ಲೇ ವಿದ್ಯಾರ್ಥಿನಿ ಆತ್ಮಹತ್ಯೆ
ಕಾರ್ಕಳದ ನಿಟ್ಟಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಹಾಸ್ಟೆಲ್ ನ ಕೊಠಡಿಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕಾರ್ಕಳದ ನಿಟ್ಟೆ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಸಿ ಕುಂದಾಪುರದ ಕರಾವಳಿ ಶ್ರೀದೂರು ನಿವಾಸಿ ಸೀಮಾ ಅತ್ಮಹತ್ಯೆ ಮಾಡಿಕೊಂಡವರು, ವಿದ್ಯಾಭ್ಯಾಸದ ಸಲುವಾಗಿ ನಿಟ್ಟೆ ಕಾಲೇಜಿನ ಹಾಸ್ಟೆಲ್ ನಲ್ಲಿ ವಾಸ ಮಾಡಿಕೊಂಡಿದ್ದ ಸೀಮಾ ಅವರು ಆರೋಗ್ಯ ಹಾಗೂ ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಬಗ್ಗೆ ಹಲವಾರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಗುಣಮುಖವಾಗದ ಕಾರಣ ಹಾಸ್ಟೆಲ್ ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಾಲೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ.!
ವಿಜಯನಗರ ಜಿಲ್ಲೆಯ ಹಡಗಲಿಯ ನ್ಯಾಷನಲ್ ಶಾಲೆಯಲ್ಲಿ ಕೌಟುಂಬಿಕ ಕಲಹದಿಂದ ಬೇಸತ್ತು ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಶಿಕ್ಷಕಿ ಬಸ್ಸಮ್ಮ ( 34) ಎಂಬುವವರು ಶಾಲಾ ಕೊಠಡಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹತ್ತು ವರ್ಷಗಳ ಹಿಂದೆ ಅರ್ಜುನ್ ಎಂಬಾತನೊಂದಿಗೆ ಬಸ್ಸಮ್ಮ ಪ್ರೀತಿಸಿ ಮದುವೆಯಾಗಿದ್ದಳು. ವರದಕ್ಷಿಣೆ ಕಿರುಕುಳದಿಂದ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಇದೇ ವಿಚಾರವಾಗಿ ಗಂಡ ಅರ್ಜುನ್, ಅತ್ತೆ ಅಂಬಿಕಾ, ನಾದಿನಿ ಸಂಗೀತಾ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.