- ರಾಜ್ಯದಲ್ಲಿ ಪಕ್ಷಾಂತರ ಪರ್ವ ಶುರು!
- ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲಾ ಪಕ್ಷದಲ್ಲೂ ಜಂಪಿಂಗ್
- ಟಿಕೆಟ್ ಫೈಟ್ ಅಲ್ಲೂ ಕೆಲವರ ಹಾವು ಏಣಿ ಆಟ
NAMMUR EXPRESS NEWS
ಬೆಂಗಳೂರು : ರಾಜಕೀಯ ಪಾರ್ಟಿಗಳ ಅಧಿಕಾರದ ಹಪಾಹಪಿಗೆ ವೇದಿಕೆ ಸಿದ್ದಗೊಂಡಿದೆ. ಬಹುತೇಕ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳಿಂದ ಮುಂದುವರಿದ ಪಕ್ಷಾಂತರ ಪರ್ವ ಈಗ ಎಲ್ಲಾ ನಾಯಕರಿಗೆ ಇರುಸು ಮುರುಸು ತಂದಿದೆ.
ತಾವು ಮೆಚ್ಚಿಕೊಂಡ ಪಕ್ಷಗಳು ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಹಾಗೂ ಕೆಲವು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಹಲವು ಆಕಾಂಕ್ಷಿಗಳು ಈಗಾಗಲೇ ಪಕ್ಷಾಂತರ ಪರ್ವ ಆರಂಭಿಸಿದ್ದಾರೆ.
ಪಕ್ಷ ನಿಷ್ಠೆ ಮತ್ತು ಜನರಿಗಾಗಿ ಕೆಲಸ ಮಾಡುವ ಬದ್ಧತೆಗೆ ಹಿನ್ನಡೆ ಉಂಟು ಮಾಡುತ್ತದೆ.
ರಾಜಕೀಯ ಪಕ್ಷಗಳು ಟಿಕೆಟ್ ಘೋಷಿಸಿದ ನಂತರ ಬಂಡಾಯದ ಬಾವುಟ ಹಾರುತ್ತದೆ, ಟಿಕೆಟ್ ಸಿಗದ ನಿರಾಶೆಯಿಂದ ಬೇರೆ ಪಕ್ಷಕ್ಕೆ ಜಿಗಿಯುತ್ತಾರೆ. ಆ ಪಕ್ಷಗಳು ಕೂಡ ಅಂತಹ ಬಂಡಾಯಗಾರರಿಗೆ ಮಣೆಹಾಕಲು ಕಾಯುತ್ತಿರುತ್ತವೆ, ಕರ್ನಾಟಕದಲ್ಲಿ ಜೆಡಿಎಸ್ ಗೆ ಪ್ರಬಲ ನೆಲೆಯಿಲ್ಲದ ಕಾರಣ ಹೆಚ್ಚಿನ ಬಂಡಾಯಗಾರರನ್ನು ತಮ್ಮ ಪಕ್ಷಕ್ಕೆ ಆಹ್ವಾನಿಸುವ ಸಾಧ್ಯತೆಯಿದೆ.
ರಾಜಕೀಯ ಪಕ್ಷಗಳ ಅಧಿಕಾರದ ಹಪಾಹಪಿಯಿಂದ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಬಯಸುತ್ತವೆ, ಗೆಲ್ಲುವ ಮಾರ್ಗ ಅವರಿಗೆ ಮುಖ್ಯವಾಗುವುದಿಲ್ಲ, ಒಟ್ಟಿನಲ್ಲಿ ಹೇಗಾದರೂ ಅಧಿಕಾರದ ಚುಕ್ಕಾಣಿ ಹಿಡಿಯುವುದೇ ಪ್ರಮುಖ ಧ್ಯೇಯವಾಗಿರುತ್ತದೆ.
ಆರ್ ಎಸ್ ಎಸ್ ಮೂಲದಿಂದ ಬಂದಿರುವ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಕೆ.ಎಸ್ ಕಿರಣ್ ಕುಮಾರ್, ಮಹಾದೇವಪುರದಲ್ಲಿ ಎಚ್. ನಾಗೇಶ್ ಹಾಗೂ ಬೆಂಗಳೂರಿನ ರಾಜಾಜಿನಗರದ ಅಭ್ಯರ್ಥಿ ಪುಟ್ಟಣ್ಣ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಕಾಂಗ್ರೆಸ್ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ್ ಹೊಸಬರಿಗೆ ಅವಕಾಶ ಕಲ್ಪಿಸಲು ಕೆಲವು ಸ್ಥಾನಗಳನ್ನು ಖಾಲಿ ಇಟ್ಟುಕೊಂಡಿರುವ ಬಗ್ಗೆ ಟೀಕೆ ವ್ಯಕ್ತವಾಗಿದೆ.
ಜೆಡಿಎಸ್ ನಿಂದ ಗುಬ್ಬಿ ಮಾಜಿ ಶಾಸಕ ಎಸ್.ಆರ್.ಶ್ರೀನಿವಾಸ್ ಮತ್ತು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರಿಗೂ ಕಾಂಗ್ರೆಸ್ ಟಿಕೆಟ್ ಖಚಿತವಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಸರ್ಕಾರದ ವಿರುದ್ಧ ಹೆಚ್ಚುತ್ತಿರುವ ಆಡಳಿತ ವಿರೋಧಿ ಅಲೆಯಿಂದಾಗಿ ಕೆಲವು ಬಿಜೆಪಿ ನಾಯಕರು ಕಾಂಗ್ರೆಸ್ಗೆ ಜಿಗಿಯುವ ಸಾಧ್ಯತೆಗಳಿವೆ.
ಹಿರೇಕೆರೂರಿನಲ್ಲಿ ಮಾಜಿ ಶಾಸಕ ಯು.ಬಿ.ಬಣಕಾರ, ಚಿಕ್ಕಮಗಳೂರಿನಲ್ಲಿ ಎಚ್.ಡಿ.ತಮ್ಮಣ್ಣ, ಧಾರವಾಡದಿಂದ ಮೋಹನ್ ಲಿಂಬಿಕಾಯಿ (ಎಲ್ಲರೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲಿಗರು), ಶಿಗ್ಗಾಂವಿಯಿಂದ ಮಂಜುನಾಥ ಕುನ್ನೂರ ಮತ್ತು ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ.
ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವರ್ತೂರು ಪ್ರಕಾಶ್, ತುಮಕೂರು ಕ್ಷೇತ್ರದ ಮಾಜಿ ಸಂಸದ ಎಸ್ಪಿ ಮುದ್ದಹನುಮೇಗೌಡ, ಮಾಜಿ ಶಾಸಕ ಕೆಎಸ್ ಮಂಜುನಾಥ್ ಗೌಡ ಸೇರಿದಂತೆ ಹಲವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಮಲೆನಾಡಲ್ಲೂ ಹಲವರ ಜಂಪ್!
ಮಲೆನಾಡಿನ ಹಲವು ನಾಯಕರು ಒಂದು ಪಕ್ಷದಿಂದ ಒಂದು ಪಕ್ಷಕ್ಕೆ ಜಂಪ್ ಆಗಲು ಸಿದ್ದರಾಗಿದ್ದಾರೆ. ಕಡೂರು ಕ್ಷೇತ್ರದ ನಾಯಕ ದತ್ತ ಅವರು ಜೆಡಿಎಸ್ ಇಂದ ಕಾಂಗ್ರೆಸ್ ಬಂದಿದ್ದಾರೆ. ಚಿಕ್ಕಮಗಳೂರು ಬಿಜೆಪಿ ನಾಯಕ, ಯಡಿಯೂರಪ್ಪ ಆಪ್ತ, ಲಿಂಗಾಯತ ಮುಖಂಡ ತಮ್ಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು ಟಿಕೆಟ್ ಸಿಗುವ ಸಾಧ್ಯತೆ ಇದೆ. ಮೂಡಿಗೆರೆಯಲ್ಲಿ ಹಾಲಿ ಬಿಜೆಪಿ ಶಾಸಕ ಕುಮಾರಸ್ವಾಮಿ ಪಕ್ಷ ಬಿಡುವ ಸಾಧ್ಯತೆ ಇದೆ.
ಶಿವಮೊಗ್ಗ ನಾಯಕ ಆಯನೂರು ಮಂಜುನಾಥ್ ಅವರು ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ.