ಸಿದ್ದರಾಮಯ್ಯ ಪರ್ವ ಶುರು..!
- ಡಿಸಿಎಂ ಡಿಕೆಶಿ, 8 ಮಂದಿ ಸಚಿವರ ಜತೆ ಪ್ರಮಾಣ ವಚನ: ಅಭಿಮಾನಿಗಳು, ಕಾರ್ಯಕರ್ತರ ಜಯಘೋಷ
- ರಾಹುಲ್, ಪ್ರಿಯಾಂಕಾ ಸೇರಿ ದೇಶದ ಗಣ್ಯರು ಹಾಜರ್
- ಸಿನಿಮಾ ಸೇರಿ ಅನೇಕ ಕ್ಷೇತ್ರದ ನಾಯಕರ ಉಪಸ್ಥಿತಿ
NAMMUR EXPRESS NEWS
ಬೆಂಗಳೂರು: ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಲಕ್ಷ ಲಕ್ಷ ಅಭಿಮಾನಿಗಳು, ದೇಶದ ಪ್ರಮುಖ ನಾಯಕರು, ಎಲ್ಲಾ ಶಾಸಕರ ಸಮ್ಮುಖದಲ್ಲಿ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಡಿಸಿಎಂ ಡಿ. ಕೆ. ಶಿವಕುಮಾರ್ ಕೂಡ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಬೆಂಗಳೂರಿನ ಕಂಠೀರವ ಸ್ಟೇಡಿಯಂ ಅಲ್ಲಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸುಮಾರು 1.5 ಲಕ್ಷ ಜನರು ಆಗಮಿಸಿದ್ದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಮಾಣವಚನ ಬೋಧಿಸಿದರು. ಸಿದ್ದರಾಮಯ್ಯ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. ಇನ್ನು ಡಿಕೆಶಿಯವರು ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
8 ಜನ ಮಂತ್ರಿಗಳ ಪ್ರಮಾಣ ವಚನ
ಡಾ.ಜಿ.ಪರಮೇಶ್ವರ್( ಕೊರಟಗೆರೆ), ರಾಮಲಿಂಗಾ ರೆಡ್ಡಿ ( ಬಿಟಿಎಂ ಲೇ ಔಟ್), ಎಂ. ಬಿ.ಪಾಟೀಲ್( ಬಬಲೇಶ್ವರ), ಕೆ.ಜೆ ಜಾರ್ಜ್( ಸರ್ವಜ್ಞ ನಗರ), ಜಮೀರ್ ಅಹಮದ್( ಚಾಮರಾಜನಗರ ಪೇಟೆ), ಕೆ. ಎಚ್. ಮುನಿಯಪ್ಪ( ದೇವನಹಳ್ಳಿ), ಸತೀಶ್ ಜಾರಕಿಹೊಳಿ ( ಯಮಕನಮರಡಿ), ಪ್ರಿಯಾಂಕಾ ಖರ್ಗೆ( ಚಿತ್ತಾಪುರ) ರಾಜ್ಯಪಾಲರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ದೇಶದ ಪ್ರಮುಖ ನಾಯಕರು, ನಟ ನಟಿಯರು ಹಾಜರ್
ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಶರದ್ ಪವಾರ, ಕಮಲನಾಥ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ನಟ ಕಮಲ್ ಹಾಸನ್, ಶಿವರಾಜ್ ಕುಮಾರ್, ದುನಿಯಾ ವಿಜಯ್, ನಟಿ ರಮ್ಯಾ, ಉಮಾಶ್ರೀ, ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಿದ್ದರು.