ರಸ್ತೆ ಬದಿಯಲ್ಲಿ ನೋಟಿನ ಕಂತೆ ಕಂತೆ!
– ರಾಜಧಾನಿಯ ಕನಕಪುರ ರಸ್ತೆಯಲ್ಲಿ ಘಟನೆ
– 2000 ನೋಟು ಬದಲಾವಣೆಗೆ ಗಡುವು ವಿಸ್ತರಣೆ ಇಲ್ಲ
– ಅಧಿಕಾರಿಗಳಿಗೆ ಹೆದರಿ ನೋಟುಗಳನ್ನೇ ನುಂಗಿದ ಭೂಪ!
NAMMUR EXPRESS NEWS
ಬೆಂಗಳೂರು: ರಸ್ತೆ ಬದಿಯಲ್ಲಿ ಎರಡು ಸಾವಿರ ಮುಖಬೆಲೆಯ ನೋಟಿನ ಕಂತೆಗಳು ಪತ್ತೆಯಾದ ಘಟನೆ ಬೆಂಗಳೂರಿನ ಕನಕಪುರ ರಸ್ತೆ ಬದಿಯಲ್ಲಿ ನಡೆದಿದೆ. 2,000 ರೂ.ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ರಿಸರ್ವ್ ಬ್ಯಾಂಕ್ ವಾಪಸ್ ಪಡೆದಿದೆ. ಸೆ.30ರ ತನಕ ನೋಟುಗಳನ್ನು ಬ್ಯಾಂಕಿನಲ್ಲಿ ಬದಲಿಸಿಕೊಳ್ಳಲು ಅವಕಾಶ ನೀಡಿದೆ. ಆದರೆ ನೋಟು ಚಲಾವಣೆ ಮಾಡಲು ಸಾಧ್ಯವಿಲ್ಲವೆಂದರಿತ ದುಷ್ಕರ್ಮಿಗಳು 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳನ್ನು ಬೆಂಗಳೂರಿನ ಕನಕಪುರ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ. ನೋಟು ಎಸೆದವರು ಯಾರು ಎಂಬುವುದು ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
2000 ನೋಟು ಬದಲಾವಣೆಗೆ ಗಡುವು ವಿಸ್ತರಣೆ ಇಲ್ಲ
ಈ ವರ್ಷ ಸೆಪ್ಟೆಂಬರ್ 30 ರ ನಂತರ 2000 ರೂಪಾಯಿ ನೋಟುಗಳ ವಿನಿಮಯದ ಗಡುವಿನ ವಿಸ್ತರಣೆಯು ಪ್ರಸ್ತುತ ಪರಿಗಣನೆಯಲ್ಲಿಲ್ಲ ಎಂದು ಸರ್ಕಾರ ಹೇಳಿದೆ. ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಪ್ರಕಾರ ಚಲಾವಣೆಯಲ್ಲಿರುವ 2000 ರೂಪಾಯಿ ಮುಖಬೆಲೆಯ ನೋಟುಗಳ ಮೌಲ್ಯ 84 ಸಾವಿರ ಕೋಟಿ ರೂಪಾಯಿಗಳು. ಕಳೆದ ತಿಂಗಳ 3 ರವರೆಗೆ ಚಲಾವಣೆಯಲ್ಲಿರುವ ಒಟ್ಟು ನೋಟುಗಳಲ್ಲಿ 2000 ರೂಪಾಯಿ ಮುಖಬೆಲೆಯ ಶೇಕಡಾವಾರು 2.51 ರಷ್ಟಿದೆ ಎಂದು ಮಾಹಿತಿ ನೀಡಿದ್ದಾರೆ. 2000 ರೂ. ನೋಟು ಬದಲಾವಣೆಗೆ ಆರ್ ಬಿಐ ನಾಲ್ಕು ತಿಂಗಳ ಕಾಲಾವಕಾಶವನ್ನು ನೀಡಿದೆ. ಹೀಗಾಗಿ ಕೊನೆಯ ದಿನವನ್ನು ವಿಸ್ತರಣೆ ಮಾಡುವ ವಿಚಾರ ಪರಿಶೀಲನೆಯಲ್ಲಿ ಇಲ್ಲ ಎಂದು ಹಣಕಾಸು ಖಾತೆ ಸಚಿವ ಪಂಕಜ್ ಚೌಧರಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಅಧಿಕಾರಿಗಳಿಗೆ ಹೆದರಿ ನೋಟುಗಳನ್ನೇ ನುಂಗಿದ ಭೂಪ!
ಅಧಿಕಾರಿಯೊಬ್ಬ ಲೋಕಾಯುಕ್ತ ಪೊಲೀಸರಿಗೆ ಕೈಗೆ ಸಿಕ್ಕಿ ಬೀಳುವುದನ್ನು ತಪ್ಪಿಸಿಕೊಳ್ಳಲು 5 ಸಾವಿರ ರೂ. ನೋಟುಗಳನ್ನು ನುಂಗಿ ಬಳಿಕ ಆತನ ಬಾಯಿಗೆ ಪೈಪ್ ಹಾಕಿ ನೋಟು ವಾಪಾಸ್ ತೆಗೆದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಲೋಕಾಯುಕ್ತರಿಂದ ತಪ್ಪಿಸಿ ಕೊಳ್ಳಲು ಹೋಗಿ ಈ ಭೂಪ ಭಾರೀ ಸುದ್ದಿ ಮಾಡಿದ್ದಾನೆ ಎಂದು ವರದಿಯಿಂದ ತಿಳಿದುಬಂದಿದೆ. ಮಧ್ಯ ಪ್ರದೇಶದ ಕತ್ನಿ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಪತ್ವಾರಿ ಕೆಲಸ ಮಾಡುತ್ತಿದ್ದ ಗಜೇಂದ್ರ ಸಿಂಗ್ ಎಂಬಾತನೇ 5 ಸಾವಿರ ರೂ. ನೋಟುಗಳನ್ನು ನುಂಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭೂವ್ಯಾಜ್ಯಕ್ಕೆ ಸಂಬಂಧಿಸಿದಂತೆ ಗಜೇಂದ್ರ ಸಿಂಗ್, ಚಂದನ್ ಸಿಂಗ್ ಲೋದಿ ಎಂಬಾತನ ಬಳಿ 5 ಸಾವಿರ ರೂ. ಲಂಚ ಕೇಳಿದ್ದರು.ಇದರಂತೆ ಚಂದನ್ ಸಿಂಗ್ ಲೋದಿ ಹಣ ನೀಡುವ ಮೊದಲು ಜಬ್ಬಲ್ಪುರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದ. ಹೀಗಾಗಿ ಅಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ತಯಾರಿ ನಡೆದಿತ್ತು. ಲಂಚದ ಹಣವನ್ನು ಅಧಿಕಾರಿಗೆ ಕೊಡುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಇನ್ನೇನು ಸಿಕ್ಕಿಬೀಳುತ್ತೇನೆ ಎಂಬ ಭಯದಲ್ಲಿ ಈತ 500 ರೂ. ಇದ್ದ 10 ನೋಟುಗಳನ್ನು ನೋಡ ನೋಡುತ್ತಿದ್ದಂತೆ ಮಕ್ಕಳು ಚಾಕಲೇಟ್ ತಿಂದು ನುಂಗುವಂತೆ ಇಡೀ ನೋಟುಗಳನ್ನೇ ಸುರಳಿ ಸುತ್ತಿಕೊಂಡು ನುಂಗತೊಡಗಿದ.ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಬಾಯಿಗೆ ಪೈಪ್ ಹಾಕಿ ನೋಟುಗಳನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ : ತೀರ್ಥಹಳ್ಳಿ ಹುಡುಗನ ಅನುಮಾನಾಸ್ಪದ ಸಾವು!
HOW TO APPLY : NEET-UG COUNSELLING 2023