ಮನೆ ಯಜಮಾನಿಗೆ ಸ್ವಾತಂತ್ರೋತ್ಸವದ ಗಿಫ್ಟ್!
– ಆ. 27 ರಂದು `ಗೃಹಲಕ್ಷ್ಮೀ ‘ಹಣ ಖಾತೆಗೆ ಜಮಾ
– ಇನ್ನು ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ
– ಮೊಟ್ಟೆ ತಿನ್ನದವರಿಗೆ ಚಿಕ್ಕಿ: ಮಧು ಬಂಗಾರಪ್ಪ
– ಸರ್ಕಾರಿ ಕಚೇರಿಗಳಲ್ಲಿ ರಾಯಣ್ಣ ಫೋಟೋ ಕಡ್ಡಾಯ
NAMMUR EXPRESS NEWS
ಬೆಂಗಳೂರು: ಮಹಿಳೆಯರಿಗೆ 2,000 ರೂ. ಆರ್ಥಿಕ ಸಹಾಯಧನ ನೀಡುವ ಗೃಹಲಕ್ಷ್ಮೀ ಯೋಜನೆಗೆ ಆಗಸ್ಟ್ 27 ರಂದು ಚಾಲನೆ ನೀಡಲಾಗುತ್ತಿದ್ದು, ಅಂದೇ ಮಹಿಳೆಯರ ಖಾತೆಗೆ 2,000 ರೂ. ಜಮೆ ಆಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಜನರಿಗೆ ನಾವು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ದೇಶದ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು. ರಾಜ್ಯ ಸರ್ಕಾರ ಬಡತನ ನಿರ್ಮೂಲನೆ ಕೆಲಸ ಮಾಡುತ್ತಿದೆ. ನಾವು ಈಗಾಗಲೇ ನೀಡಿರುವ ಆಶ್ವಾಸನೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಲಿದೆ.
ಸರ್ಕಾರಿ ಕಚೇರಿಗಳಲ್ಲಿ ರಾಯಣ್ಣ ಫೋಟೋ ಕಡ್ಡಾಯ
ರಾಜ್ಯದ ಮಧ್ಯ ಭಾಗದಲ್ಲಿರುವ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಹೆಸರಿಡಲು ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು. ಜೊತೆಗೆ, ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಂಗೊಳ್ಳಿ ರಾಯಣ್ಣ ಭಾವಚಿತ್ರವನ್ನು ಅಳವಡಿಕೆ ಮಾಡಲು ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಂಗೋಳ್ಳಿ ರಾಯಣ್ಣದ ಸವಿನೆನಪಿಗಾಗಿ 110 ಎಕರೆಯಲ್ಲಿ ಸಂಗೊಳ್ಳಿ ಗ್ರಾಮವನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಒಟ್ಟು 270 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ವಾರದಲ್ಲಿ 2 ದಿನ ಮೊಟ್ಟೆ ವಿತರಣೆ: ತಿನ್ನದವರಿಗೆ ಚಿಕ್ಕಿ!
ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಒಂದರಿಂದ 10ನೇ ತರಗತಿ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ವಿತರಿಸುವ ಯೋಜನೆಗೆ ಆಗಸ್ಟ್ 18ರಂದು ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭವನ್ನು ಉದ್ದೇಶಿಸಿ ಶಿಕ್ಷಣ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಶಿಕ್ಷಣ ಇಲಾಖೆಯ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಉದ್ದೇಶ ಹೊಂದಿದ್ದೇನೆ. ಶಾಲೆಗಳ ಆರಂಭದ ದಿನಗಳಲ್ಲಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ಅಡಚಣೆಯಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಮಕ್ಕಳಿಗೆ ಸಮವಸ್ತ್ರ,ಪಠ್ಯಪುಸ್ತಕ, ಶೂಗಳನ್ನು ಪೂರೈಸಲಾಗಿದೆ. ಈ ಹಿಂದೆ 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರಕ್ಕೆ 1 ಮೊಟ್ಟೆಯನ್ನು ನೀಡುತ್ತಿದ್ದು, ಈಗ ವಾರಕ್ಕೆ 2 ಮೊಟ್ಟೆ ನೀಡುವುದರರೊಂದಿಗೆ 10ನೇ ತರಗತಿವರೆಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ 2 ಬಾರಿ ಪೂರಕ ಪರೀಕ್ಷೆಗೆ ಹೊಸದಾಗಿ ಅವಕಾಶ ನೀಡಲಾಗಿದೆ. ಇದರಿಂದ ಉನ್ನತ ಶಿಕ್ಷಣಕ್ಕೆ ಸೇರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಶಿಕ್ಷಕರ ನೇಮಕಾತಿ, ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ ಎಂದರು.
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿರುವ ಗ್ರಂಥಾಲಯಗಳನ್ನು ಮೇಲ್ದರ್ಜೆಗೇರಿಸಿ, ಅತ್ಯಾಧುನಿಕ ಹಾಗೂ ಸುಸಜ್ಜಿತ ಇ-ಲೈಬ್ರರಿಗಳನ್ನಾಗಿ ಪರಿವರ್ತಿಸುವ ಕಾರ್ಯ ಪ್ರಗತಿಯಲ್ಲಿದೆ. ಇದರಿಂದಾಗಿ ಗ್ರಾಮೀಣ ಜನರ ಬೌದ್ಧಿಕ ವಿಕಾಸಗೊಳಿಸಲು ಹಾಗೂ ಸಮಾಜದ ಮುಖ್ಯವಾಹಿನಿಗೆ ಕರೆತರಲು ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ ಎಂದರು.