ಆಸ್ಪತ್ರೆಯಲ್ಲಿ ಮೃತಪಟ್ಟ ಬಾಲಕ ಸ್ಮಶಾನದಲ್ಲಿ ಜೀವಂತ!
– ಧಾರವಾಡ ಜಿಲ್ಲೆಯಲ್ಲಿ ನಡೆಯಿತು ಅಚ್ಚರಿಯ ಘಟನೆ
– ವೈದ್ಯರೇ ಇತ್ತೀಚಿಗೆ ಯಾಮಾರಿಸ್ತಾ ಇದ್ದಾರಾ?
– ಬಾಲಕನ ನದಿಯಲ್ಲಿ ಮುಳುಗಿಸಿ ಕೊಂದವನಿಗೆ ಜೈಲು
– ಪ್ಯಾಕೆಟ್ ಮಾಡಿ ದನದ ಮಾಂಸದ ಹೋಂ ಡೆಲಿವರಿ!
NAMMUR EXPRESS NEWS
ಧಾರವಾಡ: ಅನಾರೋಗ್ಯದಿಂದ ಕಾರಣದಿಂದ ಒಂದೂವರೆ ವರ್ಷದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸಿದ ಬಳಿಕ ಒಂದೂವರೆ ವರ್ಷದ ಮಗುವನ್ನು ಅಂತ್ಯಕ್ರಿಯೆಗೆಂದು ಸ್ಮಶಾನಕ್ಕೆ ತೆಗೆದುಕೊಂಡು ಹೋದಾಗ ಕೈಕಾಲು ಅಲುಗಾಡಿಸಿದ ವಿಚಿತ್ರ ಘಟನೆ ಧಾರವಾಡದಲ್ಲಿ ನಡೆದಿದೆ.
ಬಸವರಾಜ್ ಎಂಬ ಒಂದೂವರೆ ವರ್ಷದ ಮಗು ಮೃತಪಟ್ಟಿದೆ ಎಂದು ಹುಬ್ಬಳ್ಳಿ ಕಿಮ್ಸ್ ವೈದ್ಯರು ತಿಳಿಸಿದ್ದರು. ಅನಾರೋಗ್ಯದ ಕಾರಣ ಆಗಸ್ಟ್ 13 ರಂದು ಮಗುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕ್ಸಿಜನ್ ತೆಗೆದರೆ ಮಗು ಸಾವನ್ನಪ್ಪಬಹುದು ಎಂದು ವೈದ್ಯರು ಹೇಳಿದ್ದರು. ಆದರೆ ಗುರುವಾರ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ ಹಿನ್ನೆಲೆ ಮಗುವಿನ ಪೋಷಕರು ಮಗುವನ್ನು ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿದ್ದಾರೆ. ಅಂತ್ಯಕ್ರಿಯೆ ಮಾಡುವ ಸಂದರ್ಭ ಬಾಯಿಗೆ ನೀರು ಹಾಕಿದ್ದೇ ತಡ ಮಗು ಕೈಕಾಲು ಅಲುಗಾಡಿಸಿದೆ. ತಕ್ಷಣ ಮಗು ಜೀವಂತವಾಗಿದೆ ಎಂದು ಖುಷಿಯಿಂದ ಪೋಷಕರು ಮತ್ತೆ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಮಗುವಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದ ಆರೋಪಿಗೆ ಶಿಕ್ಷೆ
ಹಳೆ ದ್ವೇಷದ ಹಿನ್ನೆಲೆಯಲ್ಲಿ ಚುರ್ಚಿಗುಂಡಿಯ ಬಸವರಾಜಪ್ಪ ಎಂಬುವವರು ತನ್ನ ಸ್ನೇಹಿತನಾದ ಆಲೊಳ ಗ್ರಾಮದ ಲಿಂಗರಾಜು ಎಂಬುವವರ 8 ವರ್ಷದ ಪುತ್ರ ಪ್ರೇಮ್ ಕುಮಾರ್ ನನ್ನು ಅಪಹರಿಸಿ ನಂತರ ಶಿಕಾರಿಪುರ ತಾಲೂಕು ಚುರ್ಚಿಗುಂಡಿ ಗ್ರಾಮದ ಬಳಿಯ ಕುಮದ್ವತಿ ನದಿಯಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆಗೈದ ಘಟನೆ 2017ರ ಮಾರ್ಚ್2ರಂದು ನಡೆದಿತ್ತು. ಘಟನೆ ಸಂಬಂಧ ವಿನೋಬನಗರ ಪೊಲೀಸರು ಆರೋಪಿ ಬಸವರಾಜಪ್ಪನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಆರ್. ಪಲ್ಲವಿ ಅವರು ಆರೋಪಿ ಬಸವರಾಜಪ್ಪರಿಗೆ ಜೀವಾವಧಿ ಶಿಕ್ಷೆ ಹಾಗೂ 3.25 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪುಷ್ಪ ವಾದಿಸಿದ್ದರು.
ಪ್ಯಾಕೆಟ್ ಮಾಡಿ ದನದ ಮಾಂಸದ ಹೋಂ ಡೆಲಿವರಿ!
ಸಕಲೇಶಪುರ: ದನದ ಮಾಂಸವನ್ನು ಪ್ಯಾಕೆಟ್ ಮಾಡಿ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳನ್ನು ಬಂಧಿಸುರುವ ಘಟನೆ ಸಕಲೇಶಪುರದ ಕುಶಾಲನಗರ ಬಡಾವಣೆಯಲ್ಲಿ ನಡೆದಿದೆ.
ಖಚಿತ ಮಾಹಿತಿ ಪಡೆದಿದ್ದ ಬಜರಂಗದಳ ಕಾರ್ಯಕರ್ತರು ಪೋಲಿಸರಿಗೆ ಮಾಹಿತಿ ತಿಳಿಸಿದ್ದು ಹಮೀದ್, ಜಬಿವುಲ್ಲಾ ಎಂಬುವರನ್ನು ಬಂಧಿಸಲಾಗಿದೆ.ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರಮೋದ್ ನೇತೃತ್ವದ ತಂಡ ಠಾಣೆ ಹಿಂಭಾಗ ರಸ್ತೆ ಆಶೋಕ ರಸ್ತೆಯಲ್ಲಿ ಬಳಿ ಬಿಳಿ ಬಣ್ಣದ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಪರಿಶೀಲಿಸಿದಾಗ ಸ್ಕೂಟರ್ ನಲ್ಲಿ ದನದ ಮಾಂಸ ಪ್ಯಾಕೆಟ್ ಪತ್ತೆಯಾಗಿದೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆಜಾದ್ ರಸ್ತೆಯ ಹಮೀದ್ ಎಂಬುವವನು ಮನೆ ಮನೆಯಿಂದ ಆರ್ಡರ್ ಪಡೆದು ಹೋಂ ಡೆಲಿವರಿ ಮಾಡುತ್ತಿದ್ದ ಎನ್ನಲಾಗಿದೆ.