ಮನೆ ಇಲ್ಲ.. ನೀರಿಲ್ಲ..ಮೋದಿಗೆ ಪತ್ರ ಬರೆದ ಜನ!
– ಕಳಸ ತಾಲೂಕಿನ ಕುಂಬಳಡಿಕೆ ಜನರ ಗೋಳು
– ಡೀಸೆಲ್ ಬೆಳಕಲ್ಲಿ ಮಕ್ಕಳು ಓದಬೇಕು!
– ಖುದ್ದು ಪ್ರಧಾನಿಯೇ ಜನರಿಗೆ ಕಾಲ್ ಮಾಡ್ತಾರೆ?
NAMMUR EXPRESS NEWS
ಕಳಸ: ಮನೆ ಇಲ್ಲ.. ನೀರಿಲ್ಲ..ಮಕ್ಕಳಿಗೆ ಓದಲು ವ್ಯವಸ್ಥೆ ಇಲ್ಲ..ಮೋದಿಗೆ ಪತ್ರ ಬರೆದ ಜನ! ಹೌದು. ಕಳಸ ತಾಲೂಕಿನ ಕುಂಬಳಡಿಕೆ ಜನರ ಗೋಳು ಕೇಳೋರಿಲ್ಲ. ಡೀಸೆಲ್ ಬೆಳಕಲ್ಲಿ ಮಕ್ಕಳು ಓದಬೇಕು. ಹೀಗಾಗಿ ಇಲ್ಲಿನ ಜನರ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಲು ಮುಂದಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುಗ್ರಾಮ ಕುಂಬಳಡಿಕೆ ಗ್ರಾಮ ಇಂದಿಗೂ ಮೂಲಭೂತ ಸೌಲಭ್ಯದಿಂದ ವಂಚಿತವಾಗಿದೆ. ಕಾಡಿನ ಅಂಚಿನ ಕುಗ್ರಾಮದಲ್ಲಿ ಕುಡಿಯೋಕೆ ನೀರಿಲ್ಲ. ಓಡಾಡೋಕೆ ರಸ್ತೆ ಇಲ್ಲ. ಕರೆಂಟ್ ಕೇಳೋದೇ ಬೇಡ. ಇನ್ನು ಮಕ್ಕಳಿಗೆ ವಿದ್ಯಾಭ್ಯಾಸ ಅನ್ನೋದು ಮರಿಚೀಕೆಯೇ ಸರಿ.
ಕುಂಬಳಡಿಕೆ ಗ್ರಾಮದಲ್ಲಿ ಬರೋಬ್ಬರಿ 70ಕ್ಕೂ ಹೆಚ್ಚು ಕುಟುಂಬಗಳಿವೆ. 10 ವರ್ಷದಿಂದ ಯಾರೂ ಈ ಬಗ್ಗೆ ಗಮನ ಹರಿಸಿಲ್ಲ. ತಾತ್ಕಾಲಿಕ ಶೆಡ್ ಹಾಕ್ಕೊಂಡು ನಿತ್ಯದ ಜೀವನವನ್ನು ಸಾಗಿಸುತ್ತಿದ್ದಾರೆ. ಆಡಳಿತ ಹಾಗೂ ಜನ ಪ್ರತಿನಿಧಿಗಳಿಗೆ ಮನವಿ ನೀಡಿ ಸುಸ್ತಾದ ಈ ಗಿರಿಜನರು ಇದೀಗ ಪ್ರಧಾನಿ ನರೇಂದ್ರ ಮೋದಿ ಮೊರೆ ಹೋಗಿದ್ದಾರೆ. ಖುದ್ದು ಗ್ರಾಮಸ್ಥರೇ ಪ್ರಧಾನಿಗೆ ಪತ್ರ ಬರೆದು ತಮ್ಮ ಗ್ರಾಮದ ಸಮಸ್ಯೆ ಹೇಳಿಕೊಂಡಿದ್ದಾರೆ. ಹಳ್ಳಿಗರ ನೋವಿಗೆ ಎಚ್ಚೆತ್ತ ಪ್ರಧಾನಿ ಕಾರ್ಯಾಲಯ ಇದೀಗ ಸಂತ್ರಸ್ಥರ ನೆರವಿಗೆ ನಿಂತಿದೆ. ಮುಂದಿನ ಹತ್ತು ದಿನದಲ್ಲಿ ಖುದ್ದು ಪ್ರಧಾನಿ ಮೋದಿಯೇ ನಿಮಗೆ ಕರೆ ಮಾಡಿ ಸಮಸ್ಯೆ ಆಲಿಸುತ್ತಾರೆ ಎಂದು ಪ್ರಧಾನಿ ಕಾರ್ಯಾಲಯದಿಂದ ತಿಳಿಸಲಾಗಿದೆ.