ಕುಂದಾಪುರದ ಯುವಕನಿಗೆ ಯಮನಾದ ಇಂಜೆಕ್ಷನ್!
– ಶಿವಮೊಗ್ಗದಲ್ಲಿ ಡೆಂಘೀ ಜ್ವರ ಅಲರ್ಟ್!
– ಶಿಕಾರಿಪುರದಲ್ಲಿ ಗಲಾಟೆ ವೇಳೆ ಓರ್ವನ ಕೊಲೆ
– ಚಿಕ್ಕಮಗಳೂರು: ಜಿಂಕೆ ಬೇಟೆಯಾಡಿದವರ ಸೆರೆ
– ಕರಾವಳಿ ಪೊಲೀಸ್ ಪಡೆಯ ಇಬ್ಬರು ಸಮುದ್ರಪಾಲು
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದಲ್ಲಿ ಡೆಂಘೀಜ್ವರ ಕಾಟ ಶುರುವಾಗುತ್ತಿದೆ. ಮನೆ, ಹೋಟೆಲ್ ಇನ್ನಿತರ ಕಡೆಗಳಲ್ಲಿ ಹೆಚ್ಚು ದಿನಗಳ ಕಾಲ ನೀರು ಸಂಗ್ರಹಿಸುವ ಕಾರಣ ಡೇಂಘೀ ಭಯ ಶುರುವಾಗಿದೆ. ಶಿವಮೊಗ್ಗ ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಜನವರಿಯಿಂದ ಆಗಸ್ಟ್ 20ರವರೆಗೆ ಜಿಲ್ಲೆಯಲ್ಲಿ ಒಟ್ಟು 163 ಡೆಂಘೀ ಜ್ವರ ಪ್ರಕರಣಗಳು ಪತ್ತೆಯಾಗಿವೆ. ಮುಂದಿನ ತಿಂಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ನೀರನ್ನು ಕುದಿಸಿ ಕುಡಿಯಬೇಕು. ಹೆಚ್ಚು ದಿನ ಒಂದೇ ಕಡೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ಸಂಗ್ರಹಣ ತೊಟ್ಟಿ, ಪಾತ್ರೆಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಿ ಬಳಸಬೇಕು ಎಂದು ಅರಿವು ಮೂಡಿಸಲಾಗುತ್ತಿದೆ. ಆದರೂ, ನೀರಿನ ಕೊರತೆ ಹೀಗೆಯೇ ಮುಂದುವರಿದರೆ, ಜನರಿಗೆ ಇನ್ನಷ್ಟು ಸಮಸ್ಯೆಯಾಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಶಿಕಾರಿಪುರದಲ್ಲಿ ಹಾಡಹಗಲೇ ಕೊಲೆ
ಶಿಕಾರಿಪುರ ತಾಲೂಕು ಪಟ್ಟಣದ ಕೆ.ಎಚ್.ಪಿ ಕಾನೂನಿನಲ್ಲಿ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಗಲಾಟೆ ಇದೀಗ ಓರ್ವನ ಬಲಿ ಪಡೆದಿದೆ. ಜಾಫರ್ ಬಿನ್ ಸಬ್ಜನ್ ಸಾಬ್(32) ಎಂದುಹೇಳಲಾಗುತ್ತಿದ್ದು, ಪ್ರಕರಣ ಸಂಬಂಧ ಶಿಕಾರಿಪುರ ಟೌನ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ತನಿಖೆ ನಡೆಸುತ್ತಿದ್ದಾರೆ.
ಕಾಫಿ ತೋಟದಲ್ಲಿ ಶಿಕಾರಿ: ಜಿಂಕೆ ಮಾಂಸದ ಜತೆ ಅರೆಸ್ಟ್!
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಮುತ್ತೊಡಿ ಪ್ರಾದೇಶಿಕ ವ್ಯಾಪ್ತಿಯ ಸಂಗಮ ಕಾಫಿ ತೋಟದಲ್ಲಿ ಜಿಂಕೆ ಬೇಟೆಯಾಡಿ ಬಾಡೂಟಕ್ಕೆ ತಯಾರಿ ನಡೆಸುತ್ತಿದ್ದಾಗ ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿಕಾರಿ ಮಾಡಿದ ಆರೋಪದ ಮೇಲೆ ಮೊಹಮ್ಮದ್ ಶಕೀಲ್ ಸೇರಿದಂತೆ 6 ಜನ ಬಂಧನಕ್ಕೀಡಾಗಿದ್ದಾರೆ. 8 ಕೆಜಿ ಜಿಂಕೆ ಮಾಂಸ, ನಾಡಬಂದೂಕು ವಶಪಡಿಸಿಕೊಳ್ಳಲಾಗಿದೆ.ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಮೇಲಿನ ಹುಲುವತ್ತಿ ಗ್ರಾಮದ ಸಂಗಮ ಕಾಫಿ ಎಸ್ಟೇಟ್ ಮೇಲೆ ಮತ್ತೋಡಿ ವಿಭಾಗದ ಅರಣ್ಯ ಇಲಾಖೆಯ ಸಿಬ್ಬಂದಿಗಳು ದಾಳಿ ನಡೆಸಿ ಮಂಗಳೂರು ಮೂಲದ 6 ಜನ ಪ್ರವಾಸಿಗರು ಸೇರಿದಂತೆ ಎಸ್ಟೇಟ್ ಸಿಬ್ಬಂದಿ ಶಕೀಲ್ ನನ್ನ ಬಂಧಿಸಿ 8 ಕೆ.ಜೆ ಜಿಂಕೆ ಮಾಂಸ,ಶಿಕಾರಿಗೆಬಳಸುತ್ತಿದ್ದ ಬಂದೂಕನ್ನ ವಶ ಪಡಿಸಿಕೊಂಡಿದ್ದಾರೆ.
ಕರಾವಳಿ ಪೊಲೀಸ್ ಪಡೆಯ ಇಬ್ಬರು ಸಮುದ್ರಪಾಲು
ಕರಾವಳಿ ಪೊಲೀಸ್ ರಕ್ಷಣಾ ಬೋಟ್ ನ ನೌಕರರಾದ ಇಬ್ಬರು ಯುವಕರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ. ರಾಜೇಶ್ (35) ಮತ್ತು ರಕ್ಷಣಾ ಬೋಟ್ ನ ಸಿಬ್ಬಂದಿ ಸನೀಶ್ (32) ಸಮುದ್ರ ಪಾಲಾಗಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.ನೀಲೇಶ್ವರಂ ತೈಕ್ಕಡಪ್ಪುರಂ ಬೋಟ್ ಜೆಟ್ಟಿಯ ಪಶ್ಚಿಮ ಭಾಗದಲ್ಲಿ ಈ ಘಟನೆ ನಡೆದಿದೆ. ದಡದಿಂದ ಸಮುದ್ರಕ್ಕೆ ಈಜುತ್ತಾ ಬಲೆ ಹಿಡಿದು ಮೀನು ಹಿಡಿಯುತ್ತಿದ್ದಾಗ ರಾಜೇಶ್ ಅಕಸ್ಮಿಕವಾಗಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.ರಾಜೇಶ್ನನ್ನು ರಕ್ಷಿಸುವ ವೇಳೆಕಾಸರಗೋಡು ಸಮುದ್ರ ರಕ್ಷಣಾ ಸಿಬ್ಬಂದಿ ಸನೀಷ್ ಕೂಡ ನೀರುಪಾಲಾಗಿದ್ದಾರೆ.
ಕುಂದಾಪುರದ ಯುವಕನಿಗೆ ಯಮನಾದ ಇಂಜೆಕ್ಷನ್!
ಜ್ವರ ಕಡಿಮೆಯಾಗಲೆಂದು ವೈದ್ಯರು ನೀಡಿದ ಚುಚ್ಚುಮದ್ದು ದೇಹದ ಒಳ ಸೇರುತ್ತಿದ್ದಂತೆ ಅಡ್ಡ ಪರಿಣಾಮ ಬೀರಿದ ಹಿನ್ನಲೆಯಲ್ಲಿ ಬೆಂಗಳೂರಿನ ಕೆ.ಪಿ. ಅಗ್ರಹಾರದಲ್ಲಿರುವ ಕುಂದಾಪುರ ತಾಲ್ಲೂಕಿನ ಹೊಸಂಗಡಿ ಸಮೀಪದ ಬೆದ್ರಳ್ಳಿ ನಿವಾಸಿ ದಿ. ಚಂದ್ರ ಶೆಟ್ಟಿ ಎಂಬುವವರ ಪುತ್ರ ಅಮರ್ ಶೆಟ್ಟಿ(31) ಮೃತಪಟ್ಟ ಘಟನೆ ನಡೆದಿದೆ. ದುಬೈನಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ ಅಮ ಶೆಟ್ಟಿ ಒಂದು ವರ್ಷದ ಹಿಂದಷ್ಟೇ ತವರೂರಿಗೆ ಹಿಂದಿರುಗಿದ್ದ ಅಮರ್ ಬೆಂಗಳೂರಿನಲ್ಲಿ ಹೋಟೆಲ್ ವ್ಯವಹಾರ ಮಾಡಿಕೊಂಡಿದ್ದರು. ಆಗಸ್ಟ್ 18ರ ಸಂಜೆ ಅಮರ್ ಶೆಟ್ಟಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಬಾಳಿ ಬದುಕಬೇಕಾದ ಮನೆಯ ಮಗನನ್ನು ಕಳೆದುಕೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಮೃತನ ಅಂತ್ಯಸಂಸ್ಕಾರವನ್ನು ತಾಯಿ ಮನೆ ಶಂಕರನಾರಾಯಣದ ಹದ್ದೂರಿನಲ್ಲಿ ನಡೆಸಲಾಗಿದೆ.