ಚಿಂತಕ ಚಕ್ರವರ್ತಿ ಸೂಲಿಬೆಲೆಗೆ ಬಂಧನದ ಭೀತಿ.!
– ಬೆಳ್ತಂಗಡಿ : ಕುಕ್ಕೇಡಿ ಸಮೀಪ ಸುಡುಮದ್ದು ಸ್ಫೋಟ: ಓರ್ವ ಅರೆಸ್ಟ್
-ಬೆಳಗಾವಿ: ಸಿಲಿಂಡರ್ ಸ್ಫೋಟ ಇಬ್ಬರ ದಾರುಣ ಸಾವು!
NAMMUR EXPRESS NEWS
ಬೆಂಗಳೂರು: ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರಿಗೆ ಬಂಧನದ ಭೀತಿ ಎದುರಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಮೇಲೆ ದೂರು ದಾಖಲಾಗಿದೆ. ಈ ಹಿನ್ನಲೆ ವಿಚಾರಣೆಗೆಂದು ಸಿರವಾರ ಪೊಲೀಸರು ತೆರಳಿರುವುದರಿಂದ ಚಕ್ರವರ್ತಿ ಸೂಲಿಬೆಲೆ ಅವರಿಗೆ ಬಂಧನದ ಭೀತಿ ಎದುರಾಗಿದೆ.
ನಮೋ ಬ್ರಿಗೇಡ್ ವತಿಯಿಂದ ಜಿಲ್ಲೆಯ ಮಾನ್ವಿ ತಾಲೂಕಿನ ಸಿರವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಅಯೋಗ್ಯ’ ಎಂದು ಚಕ್ರವರ್ತಿ ಸೂಲಿಬೆಲೆ ನಿಂದಿಸಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಲಬುರಗಿಯಲ್ಲಿ ಜಗದೇವ್ ಗುತ್ತೇದಾರ್ ಕಾಳಗಿ ಎಂಬುವವರು ದೂರು ನೀಡಿದ್ದರು ಎಂದು ತಿಳಿದುಬಂದಿದೆ. ಪ್ರಕರಣವನ್ನು ಕಲಬುರಗಿಯಿಂದ ಸಿರವಾರ ಪೋಲೀಸ್ ಠಾಣೆಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಸೂಲಿಬೆಲೆ ವಿಚಾರಣೆಗಾಗಿ ಖಾಕಿ ತಂಡ ಬೆಂಗಳೂರಿಗೆ ತೆರಳಿದೆ.
ಪಟಾಕಿ ತಯಾರಿಕಾ ಸ್ಫೋಟ: ಓರ್ವ ಅರೆಸ್ಟ್
ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕೇಡಿ ಗ್ರಾಮದ ಕಡ್ತ್ಯಾರು ಪಟಾಕಿ ತಯಾರಿಕಾ ಗೋಡೌನ್ ನಲ್ಲಿ ಪಟಾಕಿ ತಯಾರಿಕೆ ವೇಳೆ ಜ.28 ರಂದು ಸಂಜೆ ಸ್ಫೋಟ ಸಂಭವಿಸಿ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕ ಸೈಯದ್ ಬಶೀರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧಿಸಿದಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಶಾಂತಿ ಎಂಬವರು ನೀಡಿದ ದೂರಿನ ಮೇರೆಗೆ ಸುಡುಮದ್ದು ತಯಾರಿಕಾ ಘಟಕದ ಮಾಲೀಕ ಬಶೀರ್ ಮೇಲೆ ದೂರು ದಾಖಲಾಗಿತ್ತು.
ಪ್ರಕರಣ ಸಂಬಂಧ ಜಾಗ ಹಾಗೂ ಪಟಾಕಿ ತಯಾರಿಕಾ ಮಾಲೀಕ ಸೈಯದ್ ಬಶೀರ್ ಘಟನೆ ಬಳಿಕ ವೇಣೂರಿನಿಂದ ಪರಾರಿಯಾಗಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರ ನೇತೃತ್ವದಲ್ಲಿ ಸುಳ್ಯದಲ್ಲಿ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ. ಪ್ರಕರಣದಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರ ದೇಹ ಛಿದ್ರವಾಗಿ ಹೋಗಿತ್ತು. ರವಿವಾರ ಮಧ್ಯರಾತ್ರಿ ವರೆಗೂ ಶೋಧಕಾರ್ಯ ನಡೆಸಿದ ಪೊಲೀಸರು ಹಾಗೂ ಅಗ್ನಿಶಾಮಕದಳ, ಫೋರೆನಿಕ್ಸ್ ತಂಡ ದೇಹದ ಭಾಗಗಳನ್ನು ಪತ್ತೆಹಚ್ಚಿದೆ.
ಬೆಳಗಾವಿಯಲ್ಲಿ ಸಿಲಿಂಡರ್ ಸ್ಫೋಟ: ಇಬ್ಬರ ಸಾವು
ಬೆಳಗಾವಿ: ನಗರದ ಬಸವನಗಲ್ಲಿಯ ಅಪಾರ್ಟ್ ಮೆಂಟ್ ನಲ್ಲಿ ರವಿವಾರ ಮಧ್ಯಾಹ್ನ ಸಿಲಿಂಡರ್ ಗ್ಯಾಸ್ ಸ್ಪೋಟಗೊಂಡ ಪ್ರಕರಣದಲ್ಲಿ ಗಾಯಗೊಂಡವರ ಪೈಕಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಉಡುಪಿ ಮೂಲದ ಕಮಲಾಕ್ಷಿ ಭಟ್ ಹಾಗೂ ಹೇಮಂತ್ ಭಟ್ ಮೃತಪಟ್ಟಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಗೊಂಡ ಮತ್ತೊಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸವನಗಲ್ಲಿಯ ಅಪಾರ್ಟ್ ಮೆಂಟ್ ನಲ್ಲಿ ಈ ಕುಟುಂಬ ವಾಸಿಸುತ್ತಿತ್ತು. ರವಿವಾರ ಮಧ್ಯಾಹ್ನ ಸಿಲಿಂಡರ್ ಗ್ಯಾಸ್ ಸೋರಿಕೆಯಾಗಿ ಸ್ಪೋಟಗೊಂಡಿದೆ. ಸ್ಪೋಟದಿಂದ ಒಂದೇ ಕುಟುಂಬದ ಐವರು ಗಾಯಗೊಂಡಿದ್ದರು. ಸ್ಥಳೀಯರು ಹಾಗೂ ಪೊಲೀಸರು ಸೇರಿ ಈ ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರವಿವಾರ ಮಧ್ಯರಾತ್ರಿ ಇಬ್ಬರು ಮೃತಪಟ್ಟಿದ್ದಾರೆ.