- ರಾಜ್ಯಕ್ಕೆ ಮಾದರಿ ನಿಯಮ ತಂದ ಉಡುಪಿ ಡಿಸಿ
- ಕ್ರಿಕೆಟ್ ಆಡಿದ್ರೂ ಬೀಳುತ್ತೆ ಕೇಸ್: ಬಳಿಕ ಶಿಕ್ಷೆ
- ಏನಿದು ಆದೇಶ… ಸುದ್ದಿ ನೋಡಿ…!
ಉಡುಪಿ/ಬೆಂಗಳೂರು: ಮದುವೆ, ಮೆಹಂದಿ, ತಿಥಿ ಕಾರ್ಯಕ್ರಮಗಳಿಂದ ಕರೋನಾ ಕೇಸ್ ಹೆಚ್ಚಳವಾಗುತ್ತಿದೆ. ಈಗಲೂ ಕೆಲವೆಡೆ ಮದುವೆಗಳಲ್ಲಿ ನೂರಕ್ಕೂ ಹೆಚ್ಚು ಜನ ಸೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ 25ರಿಂದ ಜೂನ್ 7ರವರೆಗೆ ಯಾವುದೇ ಮದುವೆ, ಮೆಹಂದಿ ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಮದುವೆಯಿಂದಲೇ ಅತೀ ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ ಮದುವೆ ಸಮಾರಂಭ ನಡೆಸಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಮೇ 24ರ ಸಂಜೆಯವರೆಗೆ ಅನುಮತಿ ನೀಡಿರುವ ಮದುವೆ ನಡೆಸಲು ಮಾತ್ರವೇ ಅವಕಾಶವನ್ನು ನೀಡಲಾಗಿದೆ. ಅಲ್ಲದೇ ನಾಳೆಯಿಂದ ಈಗಾಗಲೇ ಅನುಮತಿ ಪಡೆದಿರುವ ಮದುವೆ ನಡೆಸಲು ಅವಕಾಶವಿಲ್ಲ. ಜೂನ್ 7 ವರೆಗೆ ಉಡುಪಿ ಜಿಲ್ಲೆಯಲ್ಲಿ ಯಾವುದೇ ಮದುವೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಜೊತೆಗೆ ಲಾಕ್ ಡೌನ್ ಅವಧಿಯಲ್ಲಿ ಎಂಗೇಜ್ಮೆಂಟ್, ಮೆಹಂದಿ ಹಾಗೂ ಬೀಗರೂಟ ಕಾರ್ಯಕ್ರಮವನ್ನು ನಡೆಸಲು ಯಾವುದೇ ಕಾರಣಕ್ಕೂ ಅವಕಾಶವನ್ನು ನೀಡುವುದಿಲ್ಲ. ಒಂದೊಮ್ಮೆ ಅಂತಹ ಕಾರ್ಯಕ್ರಮಗಳನ್ನು ನಡೆಸಿದ್ದು ಕಂಡುಬಂದ್ರೆ ಆಯೋಜಕರ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾದವರ ವಿರುದ್ದವೂ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುತ್ತದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಮದುವೆ ಕಾರ್ಯಕ್ರಮವನ್ನು ಜನರು ಮುಂದೂಡಿಕೆ ಮಾಡುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಅಗತ್ಯ ವಸ್ತುಗಳ ಖರೀದಿಯ ನೆಪದಲ್ಲಿ ಒಂದು ಏರಿಯಾದಿಂದ ಮತ್ತೊಂದು ಏರಿಯಾಕ್ಕೆ ಬರುವುದಕ್ಕೆ ನಿರ್ಬಂಧ ಹೇರಲಾಗಿದೆ. ಬೇರೊಂದು ಏರಿಯಾಕ್ಕೆ ತೆರಳಿ ಅಗತ್ಯ ವಸ್ತು ಖರೀದಿಗೆ ಅವಕಾಶ ನಿರಾಕರಿಸಲಾಗಿದೆ. ಇನ್ನು ಮೈದಾನದಲ್ಲಿ ಯಾವುದೇ ಕಾರಣಕ್ಕೂ ಕ್ರಿಕೆಟ್, ವಾಲಿಬಾಲ್ ಆಡಲು ಅವಕಾಶವಿಲ್ಲ. ಒಂದೊಮ್ಮೆ ಕ್ರಿಕೆಟ್ ಆಟವಾಡಿದ್ರೆ ಅಂತವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲು ಮಾಡುವುದಾಗಿಯೂ ಎಚ್ಚರಿಸಿದ್ದಾರೆ. ಈ ನಡೆ ರಾಜ್ಯದ ಎಲ್ಲಾ ಕಡೆ ಜಾರಿಗೆ ಬಂದರೆ ಕರೋನಾ ಕೊಂಚ ತಗ್ಗಬಹುದು.