ಸಾಫ್ಟ್ ವೇರ್ ಇಂಜಿನಿಯರ್ ನೆಮ್ಮದಿಗಾಗಿ ಆಟೋ ಓಡಿಸ್ತಾನೆ!
– ಒಂಟಿತನ ಹೋಗಲಾಡಿಸಲು ವೀಕೆಂಡ್ನಲ್ಲಿ ಆಟೋ ಡ್ರೈವರ್
– ರಾಜಧಾನಿ ಬದುಕಿನ ಮತ್ತೊಂದು ಮುಖ ಅನಾವರಣ
NAMMUR EXPRESS NEWS
ಬೆಂಗಳೂರು: ಬದುಕೇ ವಿಚಿತ್ರ ಒಂದು ಸಿಕ್ಕರೆ ಇನ್ನೊಂದು ಕಳೆದುಕೊಳ್ಳಬೇಕು. ದುಡ್ಡು ಹಿಂದೆ ಹೋದರೆ ಕೊನೆಗೆ ನೆಮ್ಮದಿಗಾಗಿ ಪರದಾಟ. ನೆಮ್ಮದಿ ಹಿಂದೆ ಹೋದರೆ ಬದುಕು ಸಾಗಿಸಲು ದುಡ್ಡಿಗೆ ಪರದಾಟ…!
ಹೌದು. ಇದು ಪ್ರತಿಯೊಬ್ಬರ ಗೋಳು. ನೆಮ್ಮದಿಗಾಗಿ ಸಾಮ್ರಾಜ್ಯವನ್ನೇ ತ್ಯಾಗ ಮಾಡಿದ ಉದಾಹರಣೆ ಇದೆ. ಕನ್ನಡದ ಟಾಪ್ ಸಿನಿಮಾ ಕಾಂತಾರದಲ್ಲೂ ಈ ಕಥೆ ಕೇಳಿದ್ದೀರಿ. ಇದೀಗ ಇಲ್ಲೊಂದು ವಿಚಿತ್ರ ಪ್ರಕರಣ ಜೀವನದ ಶೂನ್ಯತೆಗೆ ಬೊಟ್ಟು ಮಾಡಿದೆ.
ಹೌದು. ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ವೀಕೆಂಡ್ನಲ್ಲಿ ಆಟೋ ಓಡಿಸುವ ಮೂಲಕ ತನ್ನ ಒಂಟಿತನದ ಭಾವನೆಯನ್ನು ಹೋಗಲಾಡಿಸಲು ವಿಭಿನ್ನ ದಾರಿಯನ್ನು ಕಂಡುಕೊಂಡಿದ್ದಾರೆ.
ವಾರಪೂರ್ತಿ ಸಾಫ್ಟ್ವೇರ್ ಕಂಪೆನಿಯಲ್ಲಿ ಲಕ್ಷಾಂತರ ಸಂಬಳ ಸಿಗುವ ಕೆಲಸ ಮಾಡುವ ಈ ಟೆಕ್ಕಿ, ವಾರಾಂತ್ಯದಲ್ಲಿ ನಮ್ಮ ಯಾತ್ರಿ ಆಟೋ ಓಡಿಸುವ ಕೆಲಸ ಮಾಡುತ್ತಿದ್ದಾರೆ. ಇದು ಹಣ ಮಾಡಲಿಕ್ಕಾಗಿ ಅಲ್ಲ, ನೆಮ್ಮದಿಗಾಗಿ..!.
ಏನಿದು ಪ್ರಕರಣ?
ವ್ಯಕ್ತಿಯೊಬ್ಬರು ಕೋರಮಂಗಲದ ಹತ್ತಿರ ಆಟೋ ಬುಕ್ ಮಾಡುತ್ತಾರೆ. ಆಟೋದಲ್ಲಿ ಕುಳಿತ ಬಳಿಕ ಅವರು ಡ್ರೈವರ್ನ ಬಟ್ಟೆಯಲ್ಲಿ ಮೈಕ್ರೋಸಾಫ್ಟ್ ಲೋಗೋ ಇರುವುದನ್ನು ಗಮನಿಸಿ ನೀವು ಮೈಕ್ರೋಸಾಫ್ಟ್ ಉದ್ಯೋಗಿಯೇ ಎಂದು ಕೇಳುತ್ತಾರೆ. ಹೀಗೆ ಮಾತುಕತೆ ಆರಂಭವಾಗಿ ಆ ಟೆಕ್ಕಿ, ಹೌದು ನಾವು ಸಾಫ್ಟ್ವೇರ್ ಇಂಜಿನಿಯರ್. ಹಣಕ್ಕಾಗಿ ನಾನು ಈ ಆಟೋವನ್ನು ಓಡಿಸುತ್ತಿಲ್ಲ. ನನಗೆ ವಿಪರೀತವಾಗಿ ಒಂಟಿತನ ಎಂಬುದು ಕಾಡುತ್ತಿದೆ. ಈ ಒಂಟಿತನ ಮತ್ತು ಒತ್ತಡದಿಂದ ಮುಕ್ತಿ ಪಡೆಯಲು ನಾನು ಆಟೋ ಓಡಿಸುತ್ತೇನೆ ಎಂದು ಹೇಳಿದ್ದಾರೆ. ಇದು ಬೆಂಗಳೂರಿನ ಮಾಯಾ ಜಗತ್ತಿನ ಹಲವರ ದನಿ ಕೂಡ ಹೌದು.