- 80 ಮಂದಿ ಪಟ್ಟಿ ಬಿಡುಗಡೆ: ಅಖಾಡಕ್ಕೆ ಇಳಿದ ಆಪ್
- ಟೆನ್ನಿಸ್ ಕೃಷ್ಣ ಸೇರಿ ಎಲ್ಲಾ ರಂಗದವರಿಗೂ ಮಣೆ
NAMMUR EXPRESS NEWS
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ಹಲವು ತಿಂಗಳಿನಿಂದ ಸಿದ್ಧತೆ ನಡೆಸಿದ್ದು ಇದೀಗ 80 ಮಂದಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ತೀವ್ರ ಪೈಪೋಟಿ ನೀಡುವುದಕ್ಕಾಗಿಯೇ ಹಲವು ರೀತಿಯಲ್ಲಿ ಕಸರತ್ತು ಕೂಡ ನಡೆಸಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗಿಂತ ಮುಂದೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಆಮ್ ಆದ್ಮಿ ಪಾರ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ಇಬ್ಬರು ಸಿನಿಮಾ ರಂಗದವರು ಇದ್ದಾರೆ. ಹಾಗೆಯೇ ಎಲ್ಲಾ ಕ್ಷೇತ್ರದವರು ಇಲ್ಲಿ ಟಿಕೆಟ್ ಪಡೆದಿದ್ದಾರೆ.
ಪಕ್ಷ ರಿಲೀಸ್ ಮಾಡಿರುವ ಪಟ್ಟಿಯಲ್ಲಿ ಏಳು ಜನ ರೈತ ಹೋರಾಟಗಾರರು. ಏಳು ಜನ ಮಹಿಳೆಯರು, 5 ಮಂದಿ ಸಮಾಜಸೇವಕರು, ಮೂರು ಜನ ಡಾಕ್ಟರೇಟ್, 15 ಜನ ಮಾಸ್ಟರ್ಸ್ ಮುಗಿಸಿರುವವರು , 3 ಜನ ಎಂಬಿಬಿಎಸ್ ಮುಗಿಸಿರುವವರು, 13 ಜನ ಲಾಯರ್ಸ್, ಪತ್ರಕರ್ತರು ಇದ್ದಾರೆ ಹಾಗೂ ಕಲಾವಿದರು ಇದ್ದಾರೆ.
ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ, ನೂರಾರು ಚಿತ್ರಗಳನ್ನು ಮಾಡಿರುವ ಟೆನ್ನಿಸ್ ಕೃಷ್ಣಗೆ ಆಮ್ ಆದ್ಮಿ ಪಾರ್ಟಿ ಟಿಕೆಟ್ ಘೋಷಣೆ ಮಾಡಿದ್ದು, ಇವರು ತುರುವೇಕರೆ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿದ್ದಾರೆ.
ನಿರ್ದೇಶಕರಾಗಿ, ನಿರ್ಮಾಪಕರಾಗಿ, ನಟರಾಗಿ ಹಲವಾರು ಚಿತ್ರಗಳನ್ನು ಮಾಡಿರುವ ಸ್ಮೈಲ್ ಶ್ರೀನು ಅವರಿಗೆ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ.
ಇನ್ನು ಮುಂದಿನ ವಾರ ಮತ್ತೊಂದು ಪಟ್ಟಿ ಘೋಷಣೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಲೆನಾಡಿನ 4 ಕ್ಷೇತ್ರ ಫೈನಲ್
- ಶಿವಮೊಗ್ಗಜಿಲ್ಲೆಯ ಮೂರು ಕ್ಷೇತ್ರ, ಚಿಕ್ಕಮಗಳೂರು 1 ಕ್ಷೇತ್ರದ ಅಭ್ಯರ್ಥಿಗಳ ಘೋಷಣೆ
ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟವಾಗಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಶಿವಮೊಗ್ಗ ಮತ್ತು ಸಾಗರ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಶೃಂಗೇರಿಯಿಂದ ರಾಜನ್ ಗೌಡ ಅವರನ್ನು ಕಣಕ್ಕೆ ಇಳಿಸಲಾಗಿದೆ.