ದೇವಾಲಯ ಸುತ್ತಮುತ್ತ ಸಿಗರೇಟ್ ಮಾರುವಂತಿಲ್ಲ!
– ಆದೇಶ ಹೊರಡಿಸಲು ಮುಜರಾಯಿ ಇಲಾಖೆ ಸಿದ್ಧತೆ
– ಮಗುವಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ ಕಡ್ಡಾಯ
– ಪ್ರವಾಸಿ ಸ್ಥಳ,ದೇಗುಲಗಳ ಸಮೀಪ ತಂಬಾಕು ಮಾರಾಟ ನಿಷೇಧ?!
NAMMUR EXPRESS NEWS
ಬೆಂಗಳೂರು: ದೇವಾಲಯಗಳ ಸುತ್ತಮುತ್ತ ಬೀಡಿ-ಸಿಗರೇಟ್ ಮಾರುವಂತಿಲ್ಲ ಎನ್ನುವ ಆದೇಶವನ್ನು ಹೊರಡಿಸಲು ಮುಜರಾಯಿ ಇಲಾಖೆ ಸಿದ್ಧತೆ ನಡೆಸಿಕೊಂಡಿದೆ. ಶಾಲಾ ಕಾಲೇಜುಗಳ ಆವರಣದಿಂದ ಸುಮಾರು 100 ಮೀಟರ್ ವರೆಗೂ ಯಾವುದೇ ಅಂಗಡಿಗಳಲ್ಲಿ ಬೀಡಿ ಸಿಗರೇಟು ಗುಟ್ಕಾ ಮಾರಾಟ ಮಾಡುವಂತಿಲ್ಲ ಎಂಬ ನಿಯಮವಿದೆ, ಇದೇ ನಿಗಮವನ್ನು ಇದೀಗ ಮುಜರಾಯಿ ಇಲಾಖೆ ದೇವಾಲಯಗಳಿಗೂ ವಿಸ್ತರಿಸುವ ತೀರ್ಮಾನಿಸಿದ್ದು, ಶೀಘ್ರದಲ್ಲಿಯೇ ಆದೇಶ ಹೊರಬೀಳಲಿದೆ.
ಏಕೆ ಈ ಆದೇಶ?:
ದೇವಾಲಯದ ಸುತ್ತಮುತ್ತ ಬೀಡಿ, ಸಿಗರೇಟ್, ಗುಟ್ಕಾ ಮಾರಾಟಕ್ಕೆ ಸಾರ್ವಜನಿಕರಿಂದ ಹಾಗೂ ಭಕ್ತಾದಿಗಳಿಂದ ಹಲವು ದೂರುಗಳು ಕೇಳಿಬಂದಿದೆ. ಹೆಚ್ಚು ಸಂಖ್ಯೆಯಲ್ಲಿ ಭಕ್ತಾದಿಗಳು ಹೋಗುವ ಪ್ರವಾಸಿ ಸ್ಥಳ,ದೇವಾಲಯಗಳಲ್ಲಿ ತಂಬಾಕು ಮಾರಾಟವನ್ನೇ ನಿಷೇಧಿಸುವ ಚಿಂತನೆ ಇಲಾಖೆಯ ಮುಂದಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದ್ದು, ಸ್ಕೂಲ್ ಕಾಲೇಜನಿಂದ ನೂರು ಮೀಟರ್ ಅಂತರದಲ್ಲಿ ತಂಬಾಕು ಮಾರಾಟ ನಿಷೇದ ರೀತಿ ದೇವಾಲಯಗಳ ಬಳಿಯೂ 100 ಮೀ. ಅಂತರದಲ್ಲಿ ತಂಬಾಕು ನಿಷೇಧಕ್ಕೆ ನಿರ್ಧರಿಸಲಾಗಿದೆ. ಮೊದಲಿಗೆ ಸಿಗರೇಟ್, ಗುಟ್ಕಾ ಮಾರಾಟ ನಿಲ್ಲಿಸುವಂತೆ ಎಚ್ಚರಿಕೆಯನ್ನು ನೀಡುತ್ತೇವೆ. ಆದರೂ ನಿಲ್ಲಲಿಲ್ಲವೆಂದರೆ ಕಠಿಣ ಕ್ರಮ ತೆಗೆದು ಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.
ಮಗುವಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ
ಸಣ್ಣ ಮಕ್ಕಳಿಗೆ ಹಾಲುಣಿಸಲು ದೇವಾಲಯಗಳಲ್ಲಿ ತಾಯಿ ಮಗುವಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಬಗ್ಗೆಯೂ ಯೋಚನೆ ಮಾಡಿದ್ದೇವೆ. ಈ ಬಗ್ಗೆ ಶೀಘ್ರದಲ್ಲಿಯೇ ಕ್ರಮವಹಿಸುತ್ತೇವೆ. ಇದರಿಂದ ಅನೇಕ ತಾಯಂದರಿಗೆ ಸಹಾಯವಾಗಲಿದೆ ಎಂದು ಹೇಳಿದ್ದಾರೆ.