-ರೈತರ ಪ್ರತಿಭಟನೆಗೆ `ಕೈ’ ಜೋಡಿಸಿದ ಕಾಂಗ್ರೆಸ್
- ಜನವರಿ 26 ಸರ್ಕಾರಿ ರಜೆ ಎಂದ ಡಿಕೆಶಿ!
ಬೆಂಗಳೂರು: ರೈತರ ಟ್ರ್ಯಾಕ್ಟರ್ ಹೋರಾಟವನ್ನು ತಡೆದಿದ್ದೇ ಆದರೆ, ಜೈಲ್ ಭರೋ ಚಳುವಳಿ ನಡೆಸಲಾಗುತ್ತದೆ ಎಂದು ಸರ್ಕಾರಕ್ಕೆ ಕಾಂಗ್ರೆಸ್ ಎಚ್ಚರಿಕೆ ನೀಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ರಾಜ್ಯ ಸರ್ಕಾರ ರೈತರಿಗೆ ಬೆಂಬಲ ನೀಡಬೇಕು. ಪೊಲೀಸರೇ ರಾಜ್ಯ ಸರ್ಕಾರ ಕೈಗೊಂಬೆಯಾಗಬಾರದು. ಸುಪ್ರೀಂಕೋರ್ಟ್ ಕೂಡ ರೈತರ ಪ್ರತಿಭಟನೆಗೆ ಯಾವುದೇ ನಿರ್ಬಂಧಗಳನ್ನು ಹೇರಿಲ್ಲ ಎಂದರು.
ಇದೇ ವೇಳೆ ಗಣರಾಜ್ಯೋತ್ಸವ ದಿನದಂದು ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸಿದರೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಎದುರಾಗಲಿದೆ ಎಂಬ ಸುದ್ದಿಗಳ ವಿರುದ್ಧ ಸಿಟ್ಟಾದ ಅವರು, ಜನವರಿ 26 ಸರ್ಕಾರಿ ರಜೆಯಾಗಿದೆ, ಬೆಂಗಳೂರಿಲ್ಲಿ ನಡೆಯಲಿರುವ ಪ್ರತಿಭಟನೆಗೆ ರೈತರು ಟ್ರ್ಯಾಕ್ಟರ್ ಸಮೇತ ಬರಲಿದ್ದಾರೆ. ಒಮ್ಮೆ ಟ್ರ್ಯಾಕ್ಟರ್ ಜಪ್ತಿ ಮಾಡಿದರೆ ಅದನ್ನು ನಾವೇ ಬಿಡಿಸಿಕೊಡಲು ಹೋಗುತ್ತೇವೆ. ಕೇಸ್ ಹಾಕಿದರೆ, ಜೈಲ್ ಭರೋ ಚಳುವಳಿ ಮಾಡುತ್ತೇವೆ ಎಂದು ಡಿಕೆಶಿ ಗುಡುಗಿದ್ದಾರೆ.
ಎಲ್ಲರಿಗೂ ನೋವು ಹೇಳಿಕೊಳ್ಳುವ ಹಕ್ಕಿದೆ. ರೈತರ ಕೈ ಕಟ್ಟಿ ಹಾಕುವ ಕೆಲಸ ಮಾಡಬಾರದು. ರೈತರ ಪ್ರತಿಭಟನೆ ಪರವಾಗಿ ಸರ್ಕಾರವೇ ನಿಂತುಕೊಳ್ಳಬೇಕು ಎಂದರು.