ಡ್ರಗ್ಸ್ ಮಾಫಿಯಾ..ಜೋಕೆ!
– ಯುವ ಜನತೆಯ ಭವಿಷ್ಯ ಹಾಳು ಮಾಡುತ್ತಿರುವ ಮಾದಕ ದ್ರವ್ಯ
– ಪೊಲೀಸ್ ಇಲಾಖೆ ಆಗಬೇಕಿದೆ ಇನ್ನು ಅಲರ್ಟ್
– ಬೆಂಗಳೂರು, ಕರಾವಳಿಯಲ್ಲಿ ಹೆಚ್ಚು..!
NAMMUR EXPRESS NEWS
ಬೆಂಗಳೂರು/ ಮಂಗಳೂರು: ರಾಜ್ಯದಲ್ಲಿ ಪ್ರತಿದಿನ ವರದಿಯಾಗುತ್ತಿರುವ ಪ್ರಕರಣಗಳನ್ನು ಗಮನಿಸಿದರೆ ಡ್ರಗ್ಸ್ ಮಾಫಿಯಾ ದೊಡ್ಡ ಮಟ್ಟದಲ್ಲಿ ಜಾಲ ವಿಸ್ತರಣೆ ಮಾಡಿಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಈ ಮಾಫಿಯಾಗೆ ವಿದ್ಯಾರ್ಥಿಗಳೇ ಟಾರ್ಗೆಟ್. ಬಹುತೇಕ ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳೇ ಈ ಮಾಫಿಯಾದ ಪ್ರಮುಖ ಮಾರಾಟ ಕೇಂದ್ರಗಳಾಗುತ್ತಿವೆ. ಪ್ರತಿಷ್ಠಿತ ಕುಟುಂಬಗಳ ಮಕ್ಕಳು ಶೋಕಿಗಾಗಿ ವ್ಯಸನಿಗಳಾದರೆ, ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ವಯೋಸಹಜ ಆಕರ್ಷಣೆಯಿಂದ ವ್ಯಸನಿಗಳಾಗುತ್ತಿದ್ದಾರೆ. ಗಾಂಜಾದಿಂದ ಆರಂಭವಾಗುವ ದುಶ್ಚಟ ನಂತರ ಇತರ ಅಮಲು ಪದಾರ್ಥಗಳತ್ತ ವಾಲುವಂತೆ ಮಾಡುತ್ತಿದೆ. ಕಾಲೇಜುಗಳು ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಶ ಧೃಢಪಟ್ಟಿದೆ. ವಿಶೇಷವಾಗಿ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯಗಳಲ್ಲಿ ಮಾದಕದ್ರವ್ಯಕ್ಕೆ ಬಲಿಯಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಎಂದು ವರದಿ ಹೇಳುತ್ತದೆ.
ಮಾದಕ ಸೇವನೆಯಿಂದ ಅಪಘಾತ ಹೆಚ್ಚಳ
ಡ್ರಗ್ಸ್ ಪ್ರಮುಖವಾಗಿ ಎರಡು ಗಂಭೀರ ಸ್ವರೂಪದ ಸಮಸ್ಯೆಗೆ ಕಾರಣವಾಗುತ್ತಿದೆ. ಅಪಘಾತ, ಅಪರಾಧ ಕೃತ್ಯಗಳಿಗೆ ಕಾರಣವಾಗುವುದಷ್ಟೇ ಅಲ್ಲ, ವಿದ್ಯಾರ್ಥಿಗಳ ಭವಿಷ್ಯವನ್ನೇ ನಾಶ ಮಾಡುತ್ತಿದೆ. ಪ್ರೌಢಶಾಲೆ, ಪಿಯು ಹಂತದಲ್ಲಿ ಟಾಪರ್ಗಳಾಗಿರುವ ವಿದ್ಯಾರ್ಥಿಗಳು ನಂತರ ಡ್ರಗ್ಸ್ಗೆ ಬಲಿಯಾಗಿ ಶಿಕ್ಷಣವನ್ನೇ ಮೊಟಕು ಮಾಡಿದ ನಿದರ್ಶನಗಳಿಗೆ ಲೆಕ್ಕ ಇಲ್ಲ. ಪಾಲಕರು ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಂಡು ಉನ್ನತ ಶಿಕ್ಷಣ ಕೊಡಿಸಲು ಮುಂದಾದರೆ ಅವರಲ್ಲಿ ದಾರಿ ತಪ್ಪುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚತೊಡಗಿದೆ.
ಪೊಲೀಸ್ ಇಲಾಖೆ ಇನ್ನಷ್ಟು ಜಾಗೃತಿ ಮೂಡಿಸಬೇಕು
ಪೊಲೀಸ್ ಇಲಾಖೆ ಮಾದಕ ದ್ರವ್ಯ ಕುರಿತು ಜಾಗೃತಿ ಮೂಡಿಸುವುದು ಒಳ್ಳೆಯ ಕೆಲಸವೇ. ಆದರೆ ಇದರಿಂದಲೇ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಸಮಸ್ಯೆಯ ಮೂಲದಲ್ಲಿ ಚಿಕಿತ್ಸೆ ನೀಡಿದರೆ ಉದ್ದೇಶ ಸಫಲವಾಗುತ್ತದೆ. ಇಲ್ಲವಾದರೆ ಇಂಥ ಪ್ರಯತ್ನಗಳು ಕೇವಲ ಕಣ್ಮರೆಸುವ ತಂತ್ರಗಳಾಗಬಹುದು. ಇಂದು ಸಮಾಜವನ್ನು ಕಾಡುತ್ತಿರುವ ಹಲವು ಮಾಫಿಯಾಗಳಲ್ಲಿ ಡ್ರಗ್ಸ್ ಮಾಫಿಯಾ ಪ್ರಭಾವಶಾಲಿಯಾಗಿದೆ. ಪೊಲೀಸ್ ಇಲಾಖೆ ಸಮಸ್ಯೆಯ ಮೂಲಕ್ಕೆ ಹೋಗಿ ಈ ಮಾಫಿಯಾವನ್ನು ಮಟ್ಟ ಹಾಕಬೇಕು. ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಮಾದಕ ದ್ರವ್ಯ ಕಳ್ಳ ಸಾಗಾಣಿಕೆ ಕುರಿತ ಮಾಹಿತಿಯನ್ನು ಇಲಾಖೆಯೊಂದಿಗೆ ಹಂಚಿಕೊಳ್ಳಿ ಎಂದು ಅಧಿಕಾರಿಗಳು ಹೇಳುತ್ತಾರೆ.
ಬೆಂಗಳೂರು ಡ್ರಗ್ಸ್ ಕ್ಯಾಪಿಟಲ್!?
ರಾಜ್ಯದಲ್ಲಿ ಬೆಳಕಿಗೆ ಬರುವ ಪ್ರಕರಣಗಳು ಒಂದು ತೂಕವಾದರೆ ಬೆಂಗಳೂರಿನಲ್ಲಿ ಬೆಳಕಿಗೆ ಬರುವ ಪ್ರಕರಣಗಳು ಮತ್ತೊಂದು ತೂಕ. ಈ ಮಾಫಿಯಾ ಅತಿ ಬುದ್ಧಿ ವಂತಿಕೆಯಿಂದ ತನ್ನ ಜಾಲವನ್ನು ವಿಸ್ತರಿಸಿಕೊಳ್ಳುತ್ತದೆ. ಜಾಲ ವಿಸ್ತರಣೆಗೆ ಹಲವರ (?) ನೆರವನ್ನೂ ಪಡೆಯುತ್ತಿದೆ ಎಂಬ ಆರೋಪವೂ ಪ್ರಬಲವಾಗಿದೆ. ಈ ‘ಹಲವರ’ ಪಟ್ಟಿಯಲ್ಲಿ ಅಧಿಕಾರಿಗಳು ಇರಬಹುದು, ಜನಪ್ರತಿನಿಧಿಗಳೂ ಇರಬಹುದು. ಇಂತಹ ಕೃತ್ಯಗಳಿಗೆ ಸಹಾಯಹಸ್ತ ಚಾಚುವುದು ಸಮಾಜಘಾತುಕ ಚಟುವಟಿಕೆಗೆ ಸಮ ಎಂದು ಪರಿಗಣಿಸಬೇಕಾಗುತ್ತದೆ. ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಎಲ್ಲ ಆರೋಪಿಗಳಿಗೆ ಶಿಕ್ಷೆಯಾಗುವುದಿಲ್ಲ. ಶಿಕ್ಷೆ ಪ್ರಮಾಣ ಮತ್ತು ನಿರಪರಾಧಿಯಾಗಿ ಹೊರಬರುವ ಪ್ರಮಾಣ ಗಮನಿಸಿದರೆ ಶಿಕ್ಷೆ ಪ್ರಮಾಣ ಕಡಿಮೆಯೇ. ಇದಕ್ಕೆ ಪೊಲೀಸ್ ಇಲಾಖೆಯ ‘ಮಾಮೂಲಿ’ ನಿರ್ಲಕ್ಷ್ಯವೇ ಹೊರತು ಬೇರೇನೂ ಕಾರಣವಲ್ಲ. ಡ್ರಗ್ ಮುಕ್ತ ಸಮಾಜ ಚಟುವಟಿಕೆಗಳು ಔಪಚಾರಿಕವಾಗಬಾರದು. ದೇಶದ ಭವಿಷ್ಯವಾಗಿರುವ ಯುವಪೀಳಿಗೆ ಡ್ರಗ್ಸ್ಗೆ ಬಲಿಯಾಗದಂತೆ ನೋಡಿಕೊಳ್ಳಬೇಕು.