- ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಮಾಹಿತಿ ಕೊರತೆ ಆರೋಪ
- ಅಧಿಕಾರಿಗಳಿಂದ ಜನತೆಗೆ ಸ್ಥಳೀಯ ನೌಕರರಿಗೆ ಮಾಹಿತಿ ಇಲ್ಲ
NAMMUR EXPRESS NEWS
ಬೆಂಗಳೂರು : ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಮೇ 10ರಂದು ಚುನಾವಣೆ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿಯಾಗಿದೆ. ಚುನಾವಣೆ ಪ್ರಚಾರ ಜೊತೆಗೆ ಚುನಾವಣೆ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಅಧಿಕಾರಿಗಳು ಹಾಗೂ ಚುನಾವಣಾ ಆಯೋಗ ಸಿದ್ಧತೆ ಪಡೆಸಿಕೊಂಡಿದೆ.
ಪ್ರತಿ ತಾಲೂಕು ಮಟ್ಟದಲ್ಲಿ ಅಧಿಕಾರಿಗಳನ್ನು ನೇಮಕಾತಿ ಮಾಡಲಾಗಿದೆ. ಜೊತೆಗೆ ಹಳ್ಳಿ ಹಳ್ಳಿಗಳಲ್ಲೂ ಕೂಡ ಸರ್ಕಾರಿ ನೌಕರರನ್ನು ಚುನಾವಣೆ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಚೆಕ್ ಪೋಸ್ಟ್ ಗಳನ್ನು ನಿರ್ಮಾಣ ಮಾಡಲಾಗಿದೆ. ಮತದಾನದ ಪ್ರಕ್ರಿಯೆಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಆದರೆ ಸರ್ಕಾರಿ ಕಚೇರಿಗಳಲ್ಲಿ ಮಾಹಿತಿಯ ಕೊರತೆ ಎದ್ದು ಕಾಣುತ್ತಿದೆ.
ಜನರಿಗೆ ಮನೆಗಳಲ್ಲಿ ಖಾಸಗಿ ಕಾರ್ಯಕ್ರಮಗಳನ್ನು ನಡೆಸಲು, ಸಭೆ ಸಮಾರಂಭಗಳು ಹಾಗೂ ಇತರೆ ದೈನಂದಿನ ಚಟುವಟಿಕೆಗಳಲ್ಲಿ ಚುನಾವಣಾ ನೀತಿ ಸಂಹಿತೆ ನಿಯಮಗಳ ಅಳವಡಿಕೆ ಬಗ್ಗೆ ಅನೇಕ ಗೊಂದಲಗಳು ನಿರ್ಮಾಣವಾಗಿದೆ. ಇದು ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕಂಡು ಬರುತ್ತಿದ್ದು, ಜನತೆ ಇದರಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಹೀಗಾಗಿ ತಕ್ಷಣ ಚುನಾವಣಾ ಆಯೋಗ ಸ್ಥಳೀಯ ತಾಲೂಕು ಆಡಳಿತಗಳು ಗ್ರಾಮ ಪಂಚಾಯಿತಿಗಳಿಗೆ ನಿಯಮಗಳ ಪಟ್ಟಿಯನ್ನು ಕಳುಹಿಸಿಕೊಡಬೇಕು ಎಂಬ ಮನವಿಯನ್ನು ಜನರು ಮಾಡಿದ್ದಾರೆ.
ಗೊಂದಲ ಗೊಂದಲ!: ಸಾರ್ವಜನಿಕರಿಗೆ ಯಾವ ಕಾರ್ಯಕ್ರಮ ಹೇಗೆ ಮಾಡಬೇಕು? ಎಷ್ಟು ಜನ ಸೇರಿಸಬೇಕು? ಯಾವ ಯಾವ ನಿಯಮಗಳಿವೆ, ಜೊತೆಗೆ ಪ್ರಚಾರಕ್ಕೆ ಸಂಬಂಧಪಟ್ಟ ಹಾಗೆ ಕೆಲವು ಕಾರ್ಯಕರ್ತರಲ್ಲೂ ಗೊಂದಲ ಇದೆ. ಹೀಗಾಗಿ ಸ್ಪಷ್ಟವಾಗಿ ಸ್ಥಳೀಯ ಆಡಳಿತದ ಮಟ್ಟದಲ್ಲಿ ಮಾಹಿತಿಯನ್ನು ತಲುಪಿಸಬೇಕು ಎಂಬ ಒತ್ತಡ ಜನರಿಂದ ಕೇಳಿ ಬಂದಿದೆ. ಇಲ್ಲವಾದಲ್ಲಿ ಚುನಾವಣೆ ನೆಪದಲ್ಲಿ ಒಂದುವರೆ ತಿಂಗಳುಗಳ ಕಾಲ ಜನರಿಗೆ ಬೇರೆ ಬೇರೆ ಸಮಸ್ಯೆಗಳು ಉಂಟಾಗುತ್ತಿದೆ. ಇದರಿಂದ ಜನ ಜೀವನಕ್ಕೆ ತೊಂದರೆಯಾಗುತ್ತಿದೆ. ಚುನಾವಣಾ ಆಯೋಗ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಜೊತೆಗೆ ಇದಕ್ಕೆ ಸಂಬಂಧಪಟ್ಟ ಹಾಗೆ ಎಲ್ಲ ನಿಯಮಗಳನ್ನು ಸ್ಪಷ್ಟವಾಗಿ ಸ್ಥಳೀಯ ಆಡಳಿತಗಳಿಗೆ ರವಾನಿಸಬೇಕು ಯಾವ ಯಾವ ಕಾರ್ಯಕ್ರಮಗಳಿಗೆ ವಿನಾಯಿತಿ ಇದೆ, ಯಾವ ಯಾವ ನಿಯಮಗಳು ಜಾರಿಯಾಗಿವೆ ಎಂಬುದು ಸ್ಪಷ್ಟಪಡಿಸಬೇಕು.
ಚುನಾವಣೆ ಕರ್ತವ್ಯ ಮಾಡುವವರಿಗೂ ಗೊತ್ತಿಲ್ಲ!?
ಚುನಾವಣೆ ಕರ್ತವ್ಯಕ್ಕೆ ನಿಗದಿಪಡಿಸಿರುವ ಕೆಲವು ಅಧಿಕಾರಿಗಳು, ಸಿಬ್ಬಂದಿಗಳಿಗೂ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ.
ಪ್ರಚಾರ, ಕರಪತ್ರ ಪ್ರಿಂಟ್, ಖಾಸಗಿ ಕಾರ್ಯಕ್ರಮದ ಬಗ್ಗೆ ಗೊಂದಲಗಳಿವೆ ಎಂದು ಹೆಸರು ಹೇಳಲು ಇಚ್ಚಿಸದ ನೌಕರರೊಬ್ಬರು ತಿಳಿಸಿದ್ದಾರೆ.