ಜಿಪಂ ಚುನಾವಣೆ ಸದ್ಯಕ್ಕೆ ನಡೆಯಲ್ಲ!
- ಸದಸ್ಯರ ಸಂಖ್ಯೆಹೆಚ್ಚಳಕ್ಕೆ ವಿಧೇಯಕ ಮಂಡನೆ
- ತಾಲೂಕು ಪಂಚಾಯತ್ ಚುನಾವಣೆ ಕೂಡ ನಡೆಯಲ್ಲ?
NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರವು ಗ್ರಾಮೀಣ ಜನಸಂಖ್ಯೆಯ ಆಧಾರದ ಮೇಲೆ ಮತ್ತೊಮ್ಮೆ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಸದಸ್ಯರ ಸಂಖ್ಯೆ ಪರಿಷ್ಕರಣೆಗೆ ಮುಂದಾಗಿದೆ. ಹೀಗಾಗಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಸದ್ಯಕ್ಕೆ ನಡೆಯುವ ಸಾಧ್ಯತೆಗಳಿಲ್ಲ.
ಗುರುವಾರ ವಿಧಾನಸಭೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ – 2022 ಮಂಡಿಸಿದೆ.
ಕಳೆದ ಬಜೆಟ್ ಅಧಿವೇಶನದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ – 2022 ಮಂಡಿಸಿ ಅಂಗೀಕಾರ ಪಡೆದಿತ್ತು. ಬಳಿಕ ಈ ತಿದ್ದುಪಡಿ ಕಾಯ್ದೆಯ ಸೆಕ್ಷನ್ 121 ಮತ್ತು ಸೆಕ್ಷನ್ 160 ರ ತಿದ್ದುಪಡಿಗೆ ಸುಗ್ರೀವಾಜ್ಞೆ ತಂದಿತ್ತು. ಈ ಸುಗ್ರೀವಾಜ್ಞೆಗೆ ಕಾಯ್ದೆ ಸ್ವರೂಪ ನೀಡಲು ಮತ್ತೊಮ್ಮೆ ತಿದ್ದುಪಡಿ ವಿಧೇಯಕ ಮಂಡಿಸಿದೆ.
ಈ ಮೂಲಕ ಮತ್ತೆ ಜಿಲ್ಲಾ ಪಂಚಾಯಿತಿ ಸದಸ್ಯರ ಸಂಖ್ಯೆ ಹೆಚ್ಚಾಗಲಿದ್ದು ಇದು ಮುಂದೆ ಕ್ಷೇತ್ರ ಪುನರ್ ವಿಂಗಡನೆ ಮತ್ತು ಮೀಸಲಾತಿ ಪ್ರಕ್ರಿಯೆ ಮೇಲೆ ಪರಿಣಾಮ ಬೀರಲಿದೆ.
ಜಿಪಂ, ತಾಪಂ ಸ್ಥಾನ ಹೆಚ್ಚಳ!
ತಿದ್ದುಪಡಿ ಕಾಯ್ದೆಗೆ ತರುತ್ತಿರುವ ಸುಗ್ರೀವಾಜ್ಞೆಯಲ್ಲಿ 7 ಲಕ್ಷ ಗ್ರಾಮೀಣ ಜನಸಂಖ್ಯೆ ಹೊಂದಿರುವ ಜಿಲ್ಲೆಯಲ್ಲಿ ಕನಿಷ್ಠ 20 ಮಂದಿ ಜಿಲ್ಲಾ ಪಂಚಾಯತ್ ಸದಸ್ಯರಿರಬೇಕು ಎಂಬ ನಿಯಮವನ್ನು 25 ಜಿಲ್ಲಾ ಪಂಚಾಯಿತಿ ಸದಸ್ಯರು ಎಂದು ತಿದ್ದುಪಡಿ ತರಲಾಗಿದೆ. 7 ರಿಂದ 9.5 ಲಕ್ಷ ಜನ ಸಂಖ್ಯೆಗೆ 28 ಜಿಲ್ಲಾ ಪಂಚಾಯತ್ ಸದಸ್ಯರು ಇರಬೇಕು. ಅದೇ ರೀತಿ 2.30 ಲಕ್ಷ ಗ್ರಾಮೀಣ ಜನಸಂಖ್ಯೆಗೆ ಕನಿಷ್ಠ 12 ತಾಲ್ಲೂಕು ಪಂಚಾಯತ್ ಸದಸ್ಯರು ಇರಬೇಕು ಎಂಬ ಅಂಶ ತರಲಾಗಿದೆ.