- ಸಚಿವ ಸಂಪುಟದಲ್ಲಿ ಹಣಕಾಸು ಹೊಂದಿಕೆ ಸರ್ಕಸ್
- ಉಚಿತ ಭಾಗ್ಯಗಳಿಗೆ ಹಣ ಎಲ್ಲಿಂದ ಬರುತ್ತೆ?
- ಏನೇನು ನಿಯಮ…. ಯಾವಾಗ ಜಾರಿ.. ಇಲ್ಲಿದೆ ಡೀಟೇಲ್ಸ್
NAMMUR EXPRESS NEWS
ಬೆಂಗಳೂರು: ನೂತನ ಸರಕಾರದಿಂದ ರಾಜ್ಯದ ಜನತೆ ಕಾತುರದಿಂದ ನಿರೀಕ್ಷಿಸುತ್ತಿರುವ ‘ಗ್ಯಾರಂಟಿ’ ಯೋಜನೆಗಳ ಜಾರಿ ಸಂಬಂಧ ಜೂ.2ರ ಶುಕ್ರವಾರ ಮಹತ್ವದ ತೀರ್ಮಾನ ಹೊರಬೀಳಲಿದೆ. ಹೀಗಾಗಿ ಇಡೀ ರಾಜ್ಯದ ಗಮನ ಈಗ ಈ ಸಭೆ ಮೇಲೆ ನೆಟ್ಟಿದೆ.
ಭಾರೀ ಚರ್ಚೆ, 200 ಯೂನಿಟ್ ಉಚಿತ ವಿದ್ಯುತ್ ಪೂರೈಸುವ ‘ಗೃಹ ಜ್ಯೋತಿ’, ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ ನೀಡುವ ‘ಅನ್ನಭಾಗ್ಯ’ ಹಾಗೂ ಮಹಿಳೆಯರಿಗೆ ಸರಕಾರಿ ಬಸ್ಗಳಲ್ಲಿಉಚಿತ ಪ್ರಯಾಣದ ‘ಶಕ್ತಿ’ ಈ ಮೂರು ಯೋಜನೆಗಳ ಅನುಷ್ಠಾನಕ್ಕೆ ಷರತ್ತು ಮತ್ತು ಮಾನದಂಡ ಸಹಿತದ ತೀರ್ಮಾನ ಸಚಿವ ಸಂಪುಟ ಸಭೆ ಬಳಿಕ ಪ್ರಕಟವಾಗಲಿದೆ. ಈ ನಿರ್ಧಾರ ಇಡೀ ರಾಜ್ಯದ ಗಮನ ಸೆಳೆದಿದೆ.
ಪಂಚ ಗ್ಯಾರಂಟಿಯಲ್ಲಿ ಪ್ರಮುಖವಾದ ‘ಗೃಹ ಲಕ್ಷ್ಮಿ’ ಯೋಜನೆಯಡಿ ಮಾಸಿಕ 2,000 ರೂ. ಪಡೆಯಲು ಮನೆಯ ಒಡತಿಯರು ಇನ್ನೂ ಎರಡು-ಮೂರು ತಿಂಗಳು ಕಾಯಲೇಬೇಕು. ಆಗಸ್ಟ್ನ ವರಮಹಾಲಕ್ಷ್ಮಿ ವ್ರತ ಅಥವಾ ಸೆಪ್ಟೆಂಬರ್ನಲ್ಲಿ ಬರುವ ಗೌರಿ ಹಬ್ಬದಂದು ಬಾಗಿನ ರೂಪದಲ್ಲಿ’ಗೃಹ ಲಕ್ಷ್ಮಿ’ ಮಹಿಳೆಯರ ಕೈಸೇರಲಿದೆ. ಉದ್ಯೋಗ ಸಿಗದ ಯುವಜನರ ದತ್ತಾಂಶ ಸಂಗ್ರಹಕ್ಕೆ ಕಾಲಾವಕಾಶದ ಅಗತ್ಯವಿರುವ ಕಾರಣಕ್ಕೆ ‘ಯುವ ನಿಧಿ’ ಯೋಜನೆಯೂ ಬಹುತೇಕ ಮೂರು ತಿಂಗಳ ಬಳಿಕವೇ ಜಾರಿಯಾಗಲಿದೆ ಎನ್ನಲಾಗಿದೆ.
ಅಂತಿಮವಾಗಿ, ಜುಲೈನಲ್ಲಿ ಹೊಸದಾಗಿ ಮಂಡನೆ ಮಾಡಲಿರುವ ಬಜೆಟ್ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಿಕೊಳ್ಳುವ ಆಶಾವಾದದೊಂದಿಗೆ ಮೂರು ಯೋಜನೆಗಳ ಜಾರಿಗೆ ಸಭೆ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಗ್ಯಾರಂಟಿ ಜಾರಿಗೆ ಮಾಸ್ಟರ್ ಪ್ಲಾನ್ ಮಾಡಲಾಗುತ್ತಿದೆ.
ಏನೇನು ನಿಯಮ ಸಾಧ್ಯತೆ?
ಗೃಹಜ್ಯೋತಿ: 200 ಯೂನಿಟ್ ವರೆಗಿನ ವಿದ್ಯುತ್ ಉಚಿತ. ಗ್ರಾಹಕರು ಬಿಲ್ ನ ಮೊತ್ತವನ್ನು ಪಾವತಿಸಬೇಕು. ತಿಂಗಳಾಂತ್ಯದಲ್ಲಿ ಅವರ ಬ್ಯಾಂಕ್ ಖಾತೆಗಳಿಗೆ ನೇರ ಹಣ ವರ್ಗಾವಣೆ (ಡಿಬಿಟಿ ಮಾದರಿ ) ಯಡಿ ಮರುಪಾವತಿ ಇತ್ತೀಚಿನ ತಿಂಗಳುಗಳಲ್ಲಿ ಒಬ್ಬ ಗ್ರಾಹಕ ಸರಾಸರಿ ಎಷ್ಟು ಯೂನಿಟ್ ಬಳಕೆ ಮಾಡಿದ್ದಾರೆ ಎಂಬುದರ ಪರಿಗಣನೆ ಮಾಡಲಾಗುತ್ತದೆ ಎನ್ನಲಾಗಿದೆ.
ಶಕ್ತಿ: ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ. ರಾಜ್ಯ ವ್ಯಾಪ್ತಿ ಹಾಗೂ 60 ಕಿ. ಮೀ ಪರಿಮಿತಿಯೊಳಗೆ ಅವಕಾಶ ಕೊಟ್ಟರೆ ಎಷ್ಟು ವೆಚ್ಚ ಆಗಲಿದೆ ಎಂಬ ವಿವರ ನೀಡಲು ಸೂಚನೆ. ಹವಾ ನಿಯಂತ್ರಿತ (ಎಸಿ) ಹಾಗೂ ಐಷಾರಾಮಿ ಬಸ್ ಗಳಿಗೆ ಅನ್ವಯವಾಗುವುದಿಲ್ಲ. ಫಲಾನುಭವಿಗಳ ಆಧಾರ ಸಂಖ್ಯೆ ಆಧರಿಸಿ ಪಾಸ್ ನೀಡುವ ಆಲೋಚನೆ ಮಾಡಲಾಗಿದೆ.
ಗೃಹಲಕ್ಷ್ಮಿ : ಸುಮಾರು 57 ಲಕ್ಷಕ್ಕೂ ಹೆಚ್ಚು ಮಹಿಳೆಯರು ವಿವಿಧ ರೀತಿಯ ಪಿಂಚಣಿಗಳನ್ನು ಪಡೆಯುತ್ತಿದ್ದಾರೆ. ಇಂತಹ ಮಹಿಳೆಯರ ಪಿಂಚಣಿಯನ್ನು ಗೃಹಲಕ್ಷ್ಮಿ ಯೋಜನೆ ಅಡಿ ವಿಲೀನಗೊಳಿಸಿ. ತಿಂಗಳಿಗೆ ₹2 ಸಾವಿರ ಸಿಗುವಂತೆ ಮಾಡುವುದು. ಪಿಂಚಣಿ ಸಿಗದ ಮನೆಯ ಯಜಮಾನಿಗೆ ಘೋಷಣೆ ಅನ್ವಯ ಮೊತ್ತ ಸಿಗಲಿದೆ. ಕುಟುಂಬದಲ್ಲಿ ಒಬ್ಬರಿಂದ ನಾಲ್ವರಿದ್ದರೆ ಯಜಮಾನಿಯಾರೆಂದು ಕುಟುಂಬಸ್ಥರೇ ನಿರ್ಣಯಿಸಬೇಕು. ಸೇರಿ ಹಲವು ನಿರ್ಧಾರ ಮಾಡಲಾಗಿದೆ.
ಅನ್ನಭಾಗ್ಯ : ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಅರ್ಹ ಕುಟುಂಬಗಳಿಗೆ ಘೋಷಣೆಯಂತೆ ಅಕ್ಕಿಯನ್ನು ವಿತರಿಸುವುದು. ಅನರ್ಹ ಕುಟುಂಬಗಳನ್ನು ಪತ್ತೆ ಹಚ್ಚಿ ಪಟ್ಟಿಯಿಂದ ತೆಗೆಯುವ ಮೂಲಕ, ಹೊಸದಾಗಿ ಸೇರ್ಪಡೆಯಾಗಬಹುದಾದ ಅರ್ಹರಿಗೆ ಬೇಕಾದ ಅಕ್ಕಿಯನ್ನು ಹೊಂದಿಸುವುದು. ಅಕ್ಕಿ, ಗೋಧಿ, ರಾಗಿ, ಜೋಳ ಹೀಗೆ ಫಲಾನುಭವಿಗಳ ಬೇಡಿಕೆ ಆಧರಿಸಿ ಪಡಿತರ ನಿರ್ಣಯ ರಾಜ್ಯದ ಉತ್ಪಾದನೆ ಸಾಕಾಗುತ್ತದೆಯೇ ಅಥವಾ ಅನ್ಯ ರಾಜ್ಯಗಳಿಂದ ಖರೀದಿ ಮಾಡಬೇಕೇ ಎಂಬ ಬಗ್ಗೆ ವರದಿ ಸಲ್ಲಿಸಲು ನಿರ್ದೇಶನ