ಗಾಂಧಿ ಜಯಂತಿಯಂದೇ ಮಹಾಲಯ ಅಮಾವಾಸ್ಯೆ!
* ಮಾಂಸ, ಮದ್ಯ ಮಾರಾಟ ನಿಷೇಧ: ಜನರಿಗೆ ಗೊಂದಲ
* ಮಾಂಸ ಮಾರಾಟಕ್ಕೆ ಅನುಮತಿ ನೀಡುವಂತೆ ವಿನಂತಿ!
NAMMUR EXPRESS NEWS
ಬೆಂಗಳೂರು: ಮಹಾಲಯ ಅಮಾವಾಸ್ಯೆ ಪಿತೃಪಕ್ಷ ಪೂಜೆ ದಿನ ಈ ಬಾರಿ ಅಕ್ಟೋಬರ್ 2 ರಂದು ಬಂದಿದೆ. ಆ ದಿನ ಮಾಂಸ ಹಾಗೂ ಮದ್ಯ ಮಾರಾಟ ನಿಷೇಧವಿರಲಿದ್ದು, ಹಿರಿಯರ ಪೂಜೆ ಮಾಡುವವರಿಗೆ ಚಿಂತೆ ಆರಂಭವಾಗಿದೆ.
ಈ ಹಿನ್ನೆಲೆ ಗಾಂಧಿ ಜಯಂತಿಯಂದೇ ಮಹಾಲಯ ಅಮಾವಾಸ್ಯೆ (ಪಿತೃ ಪಕ್ಷ) ಹಬ್ಬ ನಿಗದಿಯಾಗಿರುವುದರಿಂದ ಮಾಂಸ ಮಾರಾಟಕ್ಕೆ ಅನುಮತಿ ನೀಡಬೇಕು ಎಂದು ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.
ಆ ದಿನ ದೈವಾಧೀನರಾಗಿರುವವರಿಗೆ ಮಾಂಸ ಖಾದ್ಯಗಳನ್ನು ಎಡೆ ಇಟ್ಟು ಪೂಜಿಸಲಾಗುತ್ತದೆ. ಇದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಹಾಗಾಗಿ, ಗಾಂಧಿ ಜಯಂತಿ ದಿನದಂದು ಮಾಂಸ ಮಾರಾಟ ನಿಷೇಧಿಸಿ ಹೊರಡಿಸಿರುವ ಆದೇಶ ಹಿಂಪಡೆಯುವಂತೆ ಸಿಎಂ, ನಗರಾಭಿವೃದ್ಧಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.
ಗಾಂಧಿ ಜಯಂತಿ ದಿನ ಏಕೆ ಮಾಂಸ, ಮದ್ಯ ಬಂದ್?
ಅಹಿಂಸಾ ದಿನ ಆಚರಣೆ ಹಿನ್ನೆಲೆ ಪ್ರತಿ ವರ್ಷ ಅಕ್ಟೋಬರ್ 2 ರಂದು ಮಾಂಸ ಹಾಗೂ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಆ ದಿನ ಪೂರ್ತಿ ದೇಶದಾದ್ಯಂತ ಮಾಂಸ ಮದ್ಯ ಮಾರಾಟ ಇರುವುದಿಲ್ಲ. ಈ ಬಗ್ಗೆ ಸ್ಥಳೀಯ ಆಡಳಿತ ಸಂಸ್ಥೆಗಳು ಆದೇಶ ಹೊರಡಿಸುತ್ತವೆ.