ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದ ಮಿಕಗಳು!
– ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ
– ಅಧಿಕಾರಿಯೊಬ್ಬರ ಮನೆಯಲ್ಲಿ ಆಮೆಗಳು ಪತ್ತೆ!
NAMMUR EXPRESS NEWS
ಬೆಂಗಳೂರು : ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ರಾಮನಗರ, ಬೆಳಗಾವಿ, ಕಲಬುರಗಿ, ಕೋಲಾರ, ಬಾಗಲಕೋಟೆ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಬೆಂಗಳೂರಿನ ಕೆ.ಆರ್.ಪುರಂ ತಹಶೀಲ್ದಾರ್ ಅಜಿತ್ ರೈ ಅವರ ಮನೆ ಸೇರಿದಂತೆ ಒಟ್ಟು 10 ಕಡೆಗಳಲ್ಲಿ ದಾಳಿ ನಡೆದಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಅಜಿತ್ ರೈ ಕೆ.ಆರ್.ಪುರಂಗೆ ವರ್ಗಾವಣೆಯಾಗಿ ಬಂದಿದ್ದು, ಅವರ ಮೇಲೆ ಅಕ್ರಮ ಆಸ್ತಿಗಳಿಕೆಯ ಆರೋಪವಿದೆ. ಬೆಳಗಾವಿನ ರಾಮತೀರ್ಥ ನಗರದಲ್ಲಿರುವ ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಶೇಖರ್ ಬಹುರೂಪಿ ಅವರ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಸದ್ಯ ಶೇಖರ್ ಬಹುರೂಪಿ ಅವರು ವಿಜಯನಗರ ಜಿಲ್ಲೆಯ ಹರಪನಹಳ್ಳಿ ಕಾರ್ಯನಿರ್ವಹಿಸುತ್ತಿದ್ದು, ಅಥಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆಯಲ್ಲಿ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಅಮಾನತ್ತುಗೊಂಡಿದ್ದರು.
ಇನ್ನು ತುಮಕೂರು ಜಿಲ್ಲೆಯ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರವಿ ಹಾಗೂ ಅವರ ನಿವಾಸ ಮತ್ತು ಫಾರಂ ಹೌಸ್ ಮೇಲೆಯೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರವಿ ಅವರು ಈ ಹಿಂದೆ ಹಾಸನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇತ್ತೀಚಿಗಷ್ಟೆ ಅವರು ತುಮಕೂರಿಗೆ ವರ್ಗಾವಣೆಗೊಂಡಿದ್ದರು. ರಾಮನಗರದಲ್ಲಿ ಇರುವ ಫಾರಂ ಹೌಸ್ ಹಾಗೂ ತುಮಕೂರಿನ ಶಂಕರಪುರದಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ರಾಯಚೂರಿನ ನಗರ ಮತ್ತು ಗ್ರಾಮೀಣ ಯೋಜನಾ ಘಟಕದ ಸಹಾಯಕ ನಿರ್ದೇಶಕ ಶರಣಪ್ಪ ಮಡಿವಾಳ ಅವರ ಮನೆಯ ಮೇಲೆ ದಾಳಿ ನಡೆಸಿದೆ.
ಕಲಬುರಗಿಯ ನಾಗನಹಳ್ಳಿ – ಖಣದಾಳ ರಸ್ತೆಯಲ್ಲಿರುವ ಫಾರ್ಮ್ ಹೌಸ್ ಹಾಗೂ ಸಿಂಧನೂರು ಪಟ್ಟಣದಲ್ಲಿರುವ ಮನೆ ಹಾಗೂ ಕಚೇರಿಯ ಮೇಲೆ ದಾಳಿ ನಡೆದಿದೆ. ಕೋಲಾರದಲ್ಲಿನ ಕೆಆರ್ಡಿಎಲ್ ಎಇಇ ಕೋದಂಡರಾಮಯ್ಯ ಅವರ ಮನೆಯ ಮೇಲೂ ದಾಳಿ ನಡೆದಿದ್ದು, ಕುವೆಂಪುನಗರದ ಮನೆ ಸೇರಿದಂತೆ ಐದು ಕಡೆ ದಾಳಿ ನಡೆದಿದ್ದು, ಅಕ್ರಮ ಆಸ್ತಿಗಳಿಕೆಯ ಆರೋಪ ಇವರ ಮೇಲಿದೆ. ಇನ್ನು ಬಾಗಲಕೋಟೆಯ ಕೃಷಿ ಜೆಡಿ ಚೇತನಾ ಪಾಟೀಲ್ ಅವರ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಾಗಲಕೋಟೆಯ ವಿದ್ಯಾನಗರದ ಅಕ್ಕಮರಡಿ ಲೇಔಟ್ನಲ್ಲಿರುವ ಚೇತನಾ ಪಾಟೀಲ್ ಅವರ ಮನೆಯ ಮೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಯಲ್ಲಿ ಎರಡು ಆಮೆಗಳು ಪತ್ತೆಯಾಗದೆ.
ಇನ್ನು ಬೀಳಗಿಯ ಸಹಾಯಕ ಕೃಷಿ ನಿರ್ದೇಶಕ ಕೃಷ್ಣ ಶಿರೂರು ಅವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತರು ದಾಳಿ ನಡೆದಿದ್ದು, ಸದ್ಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಈ ದಾಳಿ ಇನ್ನಷ್ಟು ಕಡೆ ನಡೆಯುವ ಸಾಧ್ಯತೆಯಿದೆ. ಈ ಹಿಂದೆ ಮೇ 30 ರಂದು ರಾಜ್ಯದ ಹಲವು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿಯನ್ನು ನಡೆಸಿದ್ದು, ಭ್ರಷ್ಟ ಅಧಿಕಾರಿಗಳ ಹೆಡೆಮುರಿ ಕಟ್ಟಿದ್ದಾರೆ. ಇಂದು ನಡೆದಿರುವ ದಾಳಿಯಲ್ಲಿ ಎಷ್ಟು ಪ್ರಮಾಣದಲ್ಲಿ ಅಕ್ರಮ ಆಸ್ತಿ ಎಷ್ಟು ಎಂದು ತಿಳಿಯಬೇಕಿದೆ.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023