-20 ಲಕ್ಷ ಉದ್ಯೋಗ ಸೃಷ್ಟಿ
-5 ಸಾವಿರ ಕೋಟಿ ಹೂಡಿಕೆ
ಬೆಂಗಳೂರು: ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ, ಮುಂದಿನ ಐದು ವರ್ಷದಲ್ಲಿ ಐದು ಸಾವಿರ ಕೋಟಿ ಹೂಡಿಕೆ ಮೂಲಕ 20 ಲಕ್ಷ ಉದ್ಯೋಗ ಸೃಷ್ಟಿಸುವ ಹೊಸ ಕೈಗಾರಿಕಾ ನೀತಿಯನ್ನು ಬಿಡುಗಡೆ ಮಾಡಲಾಗಿದೆ
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೈಗಾರಿಕಾ ನೀತಿ 2020-25 ಕೈಪಿಡಿಯನ್ನು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಬಿಡುಗಡೆ ಮಾಡಿ ಮಾತನಾಡಿದರು.
”ಹೊಸ ಕೈಗಾರಿಕಾ ನೀತಿಯ ಉತ್ತೇಜನಾ ಕ್ರಮ ಹಾಗೂ ರಿಯಾಯಿತಿ ಪ್ಯಾಕೇಜ್ 2020ರ ಆಗಸ್ವ್ 13ರಿಂದಲೇ ಅನ್ವಯವಾಗುತ್ತದೆ..
”ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಬೆಂಗಳೂರಿನಿಂದ ಹೊರಗೆ ಕೈಗಾರಿಕೆಗಳನ್ನು ಎರಡು ಮತ್ತು ಮೂರನೇ ದರ್ಜೆಯ ನಗರಕ್ಕೆ ವಿಸ್ತರಿಸುವುದು ನಮ್ಮ ಉದ್ದೇಶ. ಹೂಡಿಕೆಗೆ ರಿಯಾಯಿತಿ ಒದಗಿಸಲು ರಾಜ್ಯದ ಜಿಲ್ಲೆಗಳನ್ನು ಮೂರು ವಲಯಗಳನ್ನಾಗಿ ವಿಂಗಡಿಸಲಾಗಿದೆ.
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳನ್ನು ವಲಯ 3ರಲ್ಲಿ ವರ್ಗೀಕರಿಸಲಾಗಿದೆ. ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್, ಹುಬ್ಬಳ್ಳಿ ಧಾರವಾಡದಲ್ಲಿ ಎಫ್ಎಂಸಿಜಿ ಕ್ಲಸ್ಟರ್, ಯಾದಗಿರಿಯಲ್ಲಿ ಫಾರ್ಮಾ ಕ್ಲಸ್ಟರ್ ಅಭಿವೃದ್ಧಿಪಡಿಸಲಾಗಿದೆ. ಜತೆಗೆ ರಾಜ್ಯಾದ್ಯಂತ 5-6 ಕೈಗಾರಿಕಾ ಟೌನ್ಶಿಪ್ ಅಭಿವೃದ್ಧಿಪಡಿಸಲಾಗುತ್ತದೆ,”ಎಂದು ಹೇಳಿದರು.
‘ಎಲ್ಲ ಹೊಸ ಕೈಗಾರಿಕಾ ಸ್ಥಾಪನೆಯಲ್ಲಿ ಬಂಡವಾಳ ಹೂಡಿಕೆ ಯೋಜನೆಗಳ ಒಟ್ಟಾರೆ ಆಧಾರದ ಮೇಲೆ ಕನಿಷ್ಠ ಒಟ್ಟಾರೆ ಶೇ.70 ಮತ್ತು ಗ್ರೂಪ್ ‘ಡಿ’ಯಲ್ಲಿ ಶೇ.100ರಷ್ಟು ಕನ್ನಡಿಗರಿಗೆ ಉದ್ಯೋಗ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ,”ಎಂದರು. ಅಂದಾಜು 88,500 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ,”ಎಂದು ತಿಳಿಸಿದರು.