ಲೀಟರ್ ಹಾಲಿನ ದರ 5 ರೂ ಏರಿಕೆ?
– ಕೆಎಂಎಫ್ ನೂತನ ದರ ಶೀಘ್ರದಲ್ಲಿ ಜಾರಿಗೆ?
– ಏನಿದು ಹೊಸ ದರ ಚರ್ಚೆ? ಇಲ್ಲಿದೆ ಮಾಹಿತಿ
NAMMUR EXPRESS NEWS
ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಭೀಮಾ ನಾಯ್ಕ ಅವರು ನಂದಿನಿ ಹಾಲಿನ ದರವನ್ನು 5 ರೂ.ಗೆ ಹೆಚ್ಚಿಸುವ ನಿರೀಕ್ಷೆ ಇದೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಹಾಲಿನ ದರ ಹೆಚ್ಚಳಕ್ಕೆ ಒತ್ತಾಯಿಸಿದ್ದೇವೆ ಎಂದಿದ್ದಾರೆ.
ಹಾಲಿನ ದರ ಹೆಚ್ಚಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುತ್ತೇವೆ. ಎಲ್ಲಾ ಹಾಲು ಒಕ್ಕೂಟಗಳು 5 ರೂ. ದರ ಏರಿಕೆಗೆ ಆಗ್ರಹಿಸಿದ್ದಾರೆ. ಬೆಲೆ ಏರಿಕೆ ಮಾಡುವುದಲ್ಲದೆ ಗುಣಮಟ್ಟದ ಹಾಲು, ಮೊಸರು, ತುಪ್ಪವನ್ನು ಗ್ರಾಹಕರಿಗೆ ನೀಡಲು ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.
ಇದೇ ವೇಳೆ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಬೆಂಗಳೂರಿನಲ್ಲಿ ಮಾತನಾಡಿ, ಹಾಲು ಉತ್ಪಾದಕರಿಗೆ ನೀಡುವ ಮೊತ್ತವನ್ನು ಹೆಚ್ಚಿಸುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ರೈತರಿಂದ ಖರೀದಿಸುವ ಹಾಲಿನ ದರ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ. ನಮ್ಮ ರಾಜ್ಯದಲ್ಲೂ ಉತ್ತಮ ಹೈನುಗಾರಿಕೆ ಇದೆ. ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವತ್ತ ಗಮನ ಹರಿಸುತ್ತೇವೆ. ಮುಖ್ಯಮಂತ್ರಿ ಜತೆ ಚರ್ಚಿಸಿ ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ.
ಕೆಎಂಎಫ್ ಅಧ್ಯಕ್ಷರಾಗಿದ್ದ ಬಾಲಚಂದ್ರ ಜಾರಕಿಹೊಳಿ ಅವರ ಅಧಿಕಾರಾವಧಿ ಮುಗಿದ ಬಳಿಕ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ಈ ಸ್ಥಾನಕ್ಕೆ ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಭೀಮಾ ನಾಯ್ಕ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಇತ್ತೀಚೆಗಷ್ಟೇ ರೈತರಿಗೆ ನೀಡುತ್ತಿದ್ದ ಹಾಲಿನ ಪ್ರೋತ್ಸಾಹಧನ ಕಡಿತಗೊಳಿಸಲು ಒಕ್ಕೂಟ ಮುಂದಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಹಾಲಿನ ಸಬ್ಸಿಡಿ ಮುಂದುವರಿಸಲು ನಿರ್ಧರಿಸಲಾಗಿದೆ.
HOW TO APPLY : NEET-UG COUNSELLING 2023