ಅತಿಥಿ ಉಪನ್ಯಾಸಕರಿಗೆ ಗೌರವಧನವೂ ಇಲ್ಲ, ಕೆಲಸವೂ ಇಲ್ಲ..!
– ಪಿಯು ಅತಿಥಿ ಉಪನ್ಯಾಸಕರಿಗೆ 3 ತಿಂಗಳಿಂದ ಬಾರದ ಸಂಬಳ
– ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಉಪನ್ಯಾಸಕರು
NAMMUR EXPRESS NEWS
ಬೆಂಗಳೂರು: ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕೆಲಸ ಮಾಡಿರುವ ಅತಿಥಿ ಉಪನ್ಯಾಸಕರ ಬದುಕು ಇದೀಗ ಅಡಕತ್ತರಿಯಲ್ಲಿ ಸಿಲುಕಿದೆ.
ಕಳೆದ ಜನವರಿಯಿಂದ ಮಾರ್ಚ್ವರೆಗಿನ ಗೌರವಧನ ಬಿಡುಗಡೆಯಾಗಿಲ್ಲ. ಅಲ್ಲದೇ, ನೂರಾರು ಅತಿಥಿ ಉಪನ್ಯಾಸಕರನ್ನು ಪ್ರಸಕ್ತ ಶೈಕ್ಷಣಿಕ ವರ್ಷದ ನೇಮಕಾತಿಯಲ್ಲಿ ಪರಿಗಣಿಸದೇ ಕೈಬಿಡಲಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಾದ್ಯಂತ ನೇಮಕಗೊಂಡಿದ್ದ 4,000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರನ್ನು ಮೂರು ತಿಂಗಳ ಸಂಬಳ ನೀಡದೇ ಮಾರ್ಚ್ ತಿಂಗಳಲ್ಲಿ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಕಷ್ಟ ಪಟ್ಟು ಓದಿ ಉಪನ್ಯಾಸಕರಾಗುವ ಕನಸು ಹೊತ್ತ ಸಾವಿರಾರು ಮಂದಿ ಉಪನ್ಯಾಸಕರು ಈಗ ಬೀದಿಗೆ ಬಿದ್ದಿದ್ದಾರೆ.
ಏನಿದು ಪ್ರಕರಣ?: ಜೂನ್ 3ರಂದು ಹೊಸದಾಗಿ 4,055 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ, ಆಯಾ ಹುದ್ದೆಗಳಿಗೆ ಮೆರಿಟ್ ಪರಿಗಣಿಸಿದ್ದು, ಬೋಧನಾ ಅನುಭವ ಇರುವ ಹಿರಿತನವಿರುವ ಉಪನ್ಯಾಸಕರನ್ನು ಕೈಬಿಟ್ಟಿದೆ.
ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ!
“5 ರಿಂದ 12 ವರ್ಷ ಸೇವೆ ಸಲ್ಲಿಸಿರುವ 1,000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ರಾಜ್ಯದಲ್ಲಿ ಇದ್ದಾರೆ. ಅವರನ್ನು ಕೈಬಿಟ್ಟು ಹೊಸಬರನ್ನು ನೇಮಕ ಮಾಡಿರುವುದರಿಂದ ಬೋಧನಾ ಅನುಭವ ಇರುವ ಹಲವರು ಕೆಲಸ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಕೃಷಿ, ವ್ಯಾಪಾರದಲ್ಲಿ ತೊಡಗಿಕೊಂಡಿದ್ದಲ್ಲದೇ, ಖಾಸಗಿ ಕಂಪನಿಗಳಲ್ಲಿ ಭದ್ರತಾ ಸಿಬ್ಬಂದಿಯಾಗಿ ದುಡಿಯುತ್ತಿದ್ದಾರೆ’ ಎಂದು ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಯ ರಾಜ್ಯ ಕಾರ್ಯದರ್ಶಿ ರಾಜೇಶ್ ಭಟ್ ಹೇಳಿದ್ದಾರೆ.
ಸೇವಾ ಮಾನದಂಡ ಇಲ್ಲ
‘ಅತಿಥಿ ಉಪನ್ಯಾಸಕರನ್ನು ನೇಮಕ ಮಾಡುವಾಗ ಅರ್ಹತೆ ಹಾಗೂ ಬೋಧನಾ ಅನುಭವವನ್ನು ಮಾನದಂಡವಾಗಿ ಪರಿಗಣಿಸುವುದು ನ್ಯಾಯ ಸಮ್ಮತ ಪ್ರಕ್ರಿಯೆ. ಆದರೆ, ಪ್ರಸಕ್ತ ಸಾಲಿನ ನೇಮಕಾತಿಯಲ್ಲಿ
ಅರ್ಹತೆಯನ್ನಷ್ಟೇ ಪರಿಗಣಿಸುತ್ತಿರುವುದು ಅಘಾತ ತಂದಿದೆ’ ಎಂದು ನೊಂದ ಉಪನ್ಯಾಸಕರು ನೋವು ತೋಡಿಕೊಂಡಿದ್ದಾರೆ.
ನ್ಯಾಯಯುತವಾಗಿ ನಮ್ಮನ್ನು ವಾರಕ್ಕೆ 10 ಗಂಟೆ
ದುಡಿಸಿಕೊಳ್ಳಬೇಕು. ಆದರೆ, ಕೆಲವೊಮ್ಮೆ 20 ಗಂಟೆಯವರೆಗೂದುಡಿಸಿಕೊಳ್ಳುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ಕೆಲಸ ಬಿಟ್ಟು ಹೋಗಿ
ಎಂದು ಧಮಕಿ ಹಾಕುತ್ತಾರೆ. ಈಗಿನ ಅಗತ್ಯಕ್ಕೆ ತಕ್ಕಂತೆ 8,000ಉಪನ್ಯಾಸಕರು ಬೇಕು. ಆದರೆ, ಕೇವಲ 4,055 ಹುದ್ದೆಗಳ ಭರ್ತಿಗೆ ಆದೇಶ ಹೊರಡಿಸಲಾಗಿದೆ. ಇದರಿಂದಾಗಿ ಅತಿಥಿ ಉಪನ್ಯಾಸಕರಿಗೆ ಹೆಚ್ಚಿನ ಹೊರಬೀಳುತ್ತದೆ’ ಎಂದು ಹೇಳಿದ್ದಾರೆ.
ಕರಾವಳಿಯಲ್ಲೂ ಕೆಲಸ ಕಳೆದುಕೊಂಡರು!
ಮಂಗಳೂರಿನಲ್ಲಿ ಕೆಲಸ ಕಳೆದುಕೊಂಡಿರುವ ಕೆಲವು ಉಪನ್ಯಾಸಕರು ಎಂಆರ್ಪಿಎಲ್ ಕಾರ್ಖಾನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಜೀವನ ನಿರ್ವಹಣೆಗೆ ಕೆಲವರು ಮೊಬೈಲ್ ಮಾರಾಟ, ದುರಸ್ತಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಇನ್ನು ಕೆಲವರು ಕೃಷಿ ಹಾಗೂ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. ಕೋವಿಡ್ ಸಮಯದಲ್ಲಂತೂ ಕೂಲಿ ಕೆಲಸವನ್ನೂ ಮಾಡಿದ್ದಾರೆ.
ಗೌರವ ಧನ ಹೆಚ್ಚಳಕ್ಕೆ ಪಟ್ಟು
‘ಅತಿಥಿ ಉಪನ್ಯಾಸಕರಿಗೆ ಈಗ ನೀಡುತ್ತಿರುವ ಮಾಸಿಕ 12,000 ಗೌರವಧನ ಸಾಕಾಗುತ್ತಿಲ್ಲ. ಮುಂದಿನ ಬಜೆಟ್ನಲ್ಲಿ ಗೌರವಧನವನ್ನು ಕನಿಷ್ಠ 25,000 ನಿಗದಿಪಡಿಸಬೇಕು. ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಸಂಘಟನೆಯ ಜಂಟಿ ಕಾರ್ಯದರ್ಶಿ ನಾಗರತ್ನ ತಿಳಿಸಿದ್ದಾರೆ.
ಬಾಕಿ ಇರುವ ಮೂರು ತಿಂಗಳ ಗೌರವಧನವನ್ನು ಕೂಡಲೇ ನೀಡಬೇಕು ಹಾಗೂ ಸೇವಾ ಹಿರಿತನವನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.