- ಜಾಗತಿಕ ಆರ್ಥಿಕ ಹಿನ್ನೆಡೆ ಎಫೆಕ್ಟ್
- ಶುರುವಾಗಿದೆಯಾ ಉದ್ಯೋಗ ಕಸಿತ ಪರ್ವ?
NAMMUR EXPRESS NEWS
ಬೆಂಗಳೂರು : ಜಾಗತಿಕ ಆರ್ಥಿಕ ಹಿನ್ನೆಡೆಯಿಂದ ಅನೇಕ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿವೆ. ಖ್ಯಾತ ಟೆಕ್ ಕಂಪನಿ ಮೈಕ್ರೋಸಾಫ್ಟ್ ಒಂದು ಸಾವಿರ ಮಂದಿ ಉದ್ಯೋಗಿಗಳನ್ನು ವಜಾ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಆಯಕ್ಸಿಯೋಸ್ ತಾಣ ವರದಿ ಮಾಡಿದೆ.
ಎಕ್ಸ್ ಬಾಕ್ಸ್, ಎಡ್ಜ್ ಸೇರಿದಂತೆ ಅನೇಕ ತಂಡಗಳಿಂದ, ಜಗತ್ತಿನ ವಿವಿದೆಡೆ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಇದರೊಂದಿಗೆ ಕಂಪನಿಯ ಒಟ್ಟು ಉದ್ಯೋಗಿಗಳ ಪೈಕಿ ಶೇಕಡ 1 ರಷ್ಟು ಮಂದಿಯನ್ನು ವಜಾ ಮಾಡಿದಂತಾಗಿದೆ ಎಂದು ವರದಿ ಉಲ್ಲೇಖಿಸಿದೆ. ಈ ಹಿಂದಿನ ವರದಿಗಳ ಪ್ರಕಾರ, 2,21,000 ಉದ್ಯೋಗಿಗಳು ಮೈಕ್ರೋಸಾಫ್ಟ್ ನಲ್ಲಿ ಕಾರ್ಯನಿರ್ವಹಿಸಿದ್ದಾರೆ ಎನ್ನಲಾಗಿತ್ತು. ಅಮೇರಿಕಾದ ಹಲವು ಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವ ಮತ್ತು ನೇಮಕಾತಿ ವಿಳಂಬದ ಮೊರೆ ಹೋಗಿವೆ. ಇದೀಗ ಮೈಕ್ರೋಸಾಫ್ಟ್ ಸಹ ಉಳಿದ ಕಂಪನಿಗಳ ಸಾಲಿಗೆ ಸೇರಿದೆ. ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮವಾಗಿ ಮೆಟಾ ಪ್ಲಾಟ್ ಫಾರ್ಮ್ ಇಂಕ್, ಟ್ವಿಟರ್ ಇಂಕ್, ಸ್ನ್ಯಾಪ್ ಇಂಕ್ ಗಳು ಉದ್ಯೋಗ ಕಡಿತ ಮಾಡಿವೆಯಲ್ಲದೆ, ನೇಮಕಾತಿ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿವೆ. ಕೆಲವೇ ಸಂಖ್ಯೆಯ ಉದ್ಯೋಗಿಗಳನ್ನು ಕೆಲಸದಿಂದ ತೆರವುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಮೈಕ್ರೋಸಾಫ್ಟ್ ಜುಲೈ ತಿಂಗಳಲ್ಲಿ ಹೇಳಿತ್ತು. ನಾವು ಕಡಿಮೆ ಸಂಖ್ಯೆಯ ಉದ್ಯೋಗಿಗಳನ್ನಷ್ಟೇ ವಜಗೊಳಿಸಿದ್ದೇವೆ. ಇತರ ಕಂಪನಿಗಳಂತೆ ನಾವು ಸಹ ನಮ್ಮ ವ್ಯಾಪಾರದ ಆದ್ಯತೆಗಳನ್ನು ಸದಾ ಮೌಲ್ಯಮಾನ ಮಾಡುತ್ತಿರುತ್ತೇವೆ. ಅದರಂತೆ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಕಂಪನಿ ಹೇಳಿತ್ತು.