ಹೊಸದುರ್ಗ ಪುರಸಭೆಯಲ್ಲಿ ಅರಳಿದ ಕಮಲ!
– ಅಧ್ಯಕ್ಷರಾಗಿ ರಾಜೇಶ್ವರಿ ಆನಂದ್, ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ಗಜೇಂದ್ರ ಅವಿರೋಧ ಆಯ್ಕೆ
– ನೂತನ ಸಾರಥಿಗಳಿಗೆ ನಾಯಕರು, ಕಾರ್ಯಕರ್ತರ ಅಭಿನಂದನೆ
NAMMUR EXPRESS NEWS
ಹೊಸದುರ್ಗ: ಪರಿಶಿಷ್ಟ( ST) ಪಂಗಡಕ್ಕೆ ಮೀಸಲಿದ್ದ ಹೊಸದುರ್ಗ ಪುರಸಭೆಯ ಅಧ್ಯಕ್ಷ ಸ್ಥಾನ ಮತ್ತು ಬಿ ಸಿ ಎಂ ಎ ಮಹಿಳೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂ(ಎ) ಮಹಿಳೆಗೆ ಮೀಸಲಾಗಿತ್ತು. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ 19ನೇ ವಾರ್ಡಿನ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿ ಸದಸ್ಯೆ ರಾಜೇಶ್ವರಿ ಆನಂದ್, ಉಪಾಧ್ಯಕ್ಷ ಸ್ಥಾನಕ್ಕೆ 3ನೇ ವಾರ್ಡ್ ಸದಸ್ಯೆ ಗೀತಾ ಗಜೇಂದ್ರ ಅವಿರೋಧವಾಗಿ ಆಯ್ಕೆಯಾದರು.
ಗುರುವಾರ ಪುರಸಭೆ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ 19 ನೇ ವಾರ್ಡ್ ಸದಸ್ಯೆ ರಾಜೇಶ್ವರಿ ಆನಂದ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 3 ವಾರ್ಡ್ ಸದಸ್ಯೆ ಗೀತಾ ಗಜೇಂದ್ರ ನಾಮಪತ್ರ ಸಲ್ಲಿಸಿದ್ದರು. ಇವರಿಬ್ಬರನ್ನುಳಿದು ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸಿರಲಿಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ 4 ಸದಸ್ಯರು ಕೂಡ ಗೈರಾಗಿದ್ದರು. ಬಿಜೆಪಿ ಮತ್ತು ಪಕ್ಷೇತರರು ಸೇರಿ 19 ಸದಸ್ಯರು ಹಾಜರಿದ್ದರು. ಇದ ಂದರ್ಭದಲ್ಲಿ ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ತಿರುಪತಿ ಪಾಟೀಲ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ ಎಂದು ಅಧಿಕೃತವಾಗಿ ಘೋಷಿಸಿದರು.
ಪುರಸಭೆ ಮುಂಭಾಗದಲ್ಲಿ ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ಬಲಾಬಲ ಏನಿತ್ತು?
23 ಸದಸ್ಯರ ಬಲ ಹೊಂದಿರುವ ಹೊಸದುರ್ಗ ಪಟ್ಟಣದ ಪುರಸಭೆಯಲ್ಲಿ ಬಿಜೆಪಿ ಸದಸ್ಯರು 14, ಪಕ್ಷೇತರರು 5, ಕಾಂಗ್ರೆಸ್ 4 ಸದಸ್ಯರ ಬಲ ಹೊಂದಿದೆ. 14 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಮೊದಲ ಅವಧಿಯ ವೇಳೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈ ಸಂದರ್ಭದಲ್ಲಿ ಅಧ್ಯಕ್ಷರಾಗಿ ಎಂ.ಶ್ರೀನಿವಾಸ್ ಹಾಗೂ ಉಪಾಧ್ಯಕ್ಷರಾಗಿ ಜ್ಯೋತಿ ಕೆಂಚಪ್ಪ ಜವಾಬ್ದಾರಿ ನಿರ್ವಹಿಸಿದ್ದರು. ಭಾರತೀಯ ಜನತಾ ಪಕ್ಷ 2ನೇ ಅವಧಿಗೂ ಅಧಿಕಾರದ ಗದ್ದುಗೆ ಏರುವ ಮೂಲಕ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ವೇಳೆ ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಲಿಂಗಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಮಂಡಲ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್, ಪ್ರಧಾನ ಕಾರ್ಯದರ್ಶಿ ಜಗದೀಶ್ ರಾಮಯ್ಯ, ಮುಖಂಡರಾದ ದೊಡ್ಡಘಟ್ಟ ಲಕ್ಷ್ಮಣ್, ಹೆಗ್ಗೆರೆ ಶಂಕ್ರಪ್ಪ ಮತ್ತು ದಿಲ್ಸೆ ದಿಲೀಪ್ ಗುರುಸ್ವಾಮಿ ಸೇರಿದಂತೆ ಹಲವು ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
5 ಮಂದಿ ಪಕ್ಷೇತರರ ಸಾಥ್
ಬಿೆಪಿ ಪಕ್ಷದ 14 ಜನ ಸದಸ್ಯರೊಂದಿಗೆ 5 ಪಕ್ಷೇತರ ಸದಸ್ಯರು ಬೆಂಬಲ ನೀಡಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ. ಪುರಸಭೆಯ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಪ್ರಗತಿಗೆ ಶ್ರಮಿಸಿ. ಪಟ್ಟಣದ ಅಭಿವೃದ್ಧಿಗೆ ನನ್ನ ಕಡೆಯಿಂದ ಆಗಬೇಕಿರುವ ಪ್ರಗತಿ ಕಾರ್ಯಗಳನ್ನು ಮಾಡಿಕೊಡುವೆ. ಅಗತ್ಯವಿದ್ದಾಗ ಪುರಸಭೆಯಲ್ಲಿ ನಡೆಯುವ ಸಭೆಗೆ ನಾನು ಬರುವೆ. ಹೊಸದುರ್ಗ ಪಟ್ಟಣವನ್ನು ಎಲ್ಲರೂ ಸೇರಿ ಸುಂದರ ನಗರವನ್ನಾಗಿ ಅಭಿವೃದ್ಧಿಪಡಿಸೋಣ ಎಂದು ಸಂಸದ ಗೋವಿಂದ ಎಂ.ಕಾರಜೋಳ
ಹೇಳಿದ್ದಾರೆ.