ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡಿದ ಸದ್ಗುರು ಆಯುರ್ವೇದ ಸಂಸ್ಥೆ
– ಹೊಸದುರ್ಗ ತಾಲ್ಲೂಕಿನ ಹಾಗಲಕೆರೆ ಶಾಲಾ ಮಕ್ಕಳಿಗೆ ಸಮವಸ್ತ್ರ
– ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳೋಣ: ಡಿ.ಎಸ್. ಪ್ರದೀಪ್
NAMMUR EXPRESS NEWS
ಹೊಸದುರ್ಗ: ಹೊಸದುರ್ಗ ತಾಲ್ಲೂಕಿನ ಮತ್ತೋಡು ಹೋಬಳಿಯ ಹಾಗಲಕೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಸದ್ಗುರು ಆಯುರ್ವೇದ ಸಂಸ್ಥೆ ವತಿಯಿಂದ ಬುಧವಾರ ಉಚಿತವಾಗಿ ಸಮವಸ್ತ್ರವನ್ನು ಕೊಡುಗೆಯಾಗಿ ನೀಡಲಾಯಿತು.
ಇದೇ ಸಂದರ್ಭದಲ್ಲಿ ಸದ್ಗುರು ಆಯುರ್ವೇದ ಸಂಸ್ಥೆಯ ಮಾಲೀಕ ಡಿ.ಎಸ್. ಪ್ರದೀಪ್ ಮಾತನಾಡಿ, ಸೇವೆ ಮಾಡುವ ಕೈಗಳು, ಮಾತನಾಡುವ ತುಟಿಗಳು ಶ್ರೇಷ್ಠ. ಸೇವೆ ಮಾಡುವ ಮನೋಭಾವನೆಯನ್ನು ಭಾರತೀಯರಾದ ನಾವು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ಅಂಬೇಡ್ಕರ್, ಗಾಂಧೀಜಿ ಇನ್ನಿತರ ಮಹಾತ್ಮರು ಹೇಳಿದಂತೆ ಆಧುನಿಕ ಜತ್ತಿನಲ್ಲಿ ಪ್ರಗತಿ ಕಾಣಲು ಶಿಕ್ಷಣವೇ ದೊಡ್ಡ ಅಸ್ತ್ರ. ನಾವು ಓದುವ ರಾಮಾಯಣ, ಮಹಾಭಾರತ ಹಾಗೂ ಇತರ ಗ್ರಂಥಗಳು ನಮ್ಮಲ್ಲಿ ಸಂಸ್ಕಾರ ಬೆಳೆಸಬೇಕು. ಆಗ ಓದಿದ್ದಕ್ಕೂ ಸಾರ್ಥಕವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿದರು.
ಕೆಲವು ಗ್ರಾಮಗಳಲ್ಲಿ ತಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡುವ ಗ್ರಾಮದ ಶಾಲೆಯ ಅಭಿವೃದ್ಧಿಯ ಕಡೆಗೆ ಗಮನ ನೀಡದೆ ಇರುವುದು ಬೇಸರ ತರಿಸಿದೆ. ದೇವಾಲಯಗಳು, ಮಂದಿರಗಳು ನಮಗೆ ಮನಸ್ಸಿಗೆ ನೆಮ್ಮದಿ ನೀಡಿದರೆ, ಶಾಲೆಗಳು ಮಕ್ಕಳಲ್ಲಿ ಜ್ಞಾನವನ್ನು ಬೆಳೆಸುತ್ತವೆ. ಧಾರ್ಮಿಕ ಕಾರ್ಯಗಳಿಗೆ ಮಹತ್ವ ನೀಡಿದಂತೆ, ಶೈಕ್ಷಣಿಕ ಕಾರ್ಯಗಳಿಗೆ ಕೈ ಜೋಡಿಸಿ ಎಂದು ಪೋಷಕರಲ್ಲಿ ಮನವಿ ಮಾಡಿದರು.
ಆಧುನಿಕ ಜಗತ್ತಿನಲ್ಲಿ ಶಿಕ್ಷಣದಿಂದ ಪರಿವರ್ತನೆ ಸಾಧ್ಯ. ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯೆ ಇಲ್ಲವಾದರೆ, ಬದುಕು ಬಹಳ ಕಷ್ಟಕರವಾಗುತ್ತದೆ. ಪೋಷಕರು ಹೆಚ್ಚಿನದಾಗಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ. ನಿಮ್ಮ ಶಾಲೆಗೆ ಬೇಕಾದಂತಹ ಮೂಲಭೂತ ಸೌಕರ್ಯಗಳನ್ನು ನಮ್ಮ ಸದ್ಗುರು ಆಯುರ್ವೇದ ಸಂಸ್ಥೆ ನೀಡಲು ಸಿದ್ಧವಿದೆ ಎಂದು ಭರವಸೆ ನೀಡಿದರು.
ಈ ವೇಳೆ ಗ್ರಾಮದ ಮುಖಂಡರಾದ ರಂಗನಾಥ್, ಮಹಾಲಿಂಗಪ್ಪ, ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಗುರುಸಿದ್ದಯ್ಯ ಮತ್ತು ಮುಖ್ಯ ಶಿಕ್ಷಕರಾದ ರಂಗನಾಥ್ ಸೇರಿದಂತೆ ಸದಸ್ಯರು, ಶಾಲಾ ಶಿಕ್ಷಕರು, ಸಿಬ್ಬಂದಿಗಳು ಮತ್ತು ಗ್ರಾಮಸ್ಥರಿದ್ದರು.