- ಶ್ರೀ ನಡೆದು ಬಂದ ಹಾದಿ.. ಸಮಾಜ ಸೇವೆಯಿಂದ ಚಿತ್ರದುರ್ಗ ಜೈಲಿಗೆ
NAMMUR EXPRESS NEWS
ಚಿತ್ರದುರ್ಗ: ಚಿತ್ರದುರ್ಗದ ಪೊಲೀಸರು, ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಮುರುಘಾ ಶ್ರೀಗಳನ್ನು ಬಂಧಿಸಿದ್ದಾರೆ. ಜೊತೆಗೆ ನ್ಯಾಯಾಲಯ ಸ್ವಾಮೀಜಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಈ ನಡುವೆ ಚಿತ್ರದುರ್ಗದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಭಾರೀ ಪೊಲೀಸ್ ಪಹರೆ ಹಾಕಲಾಗಿದೆ.
ಗುರುವಾರ ರಾತ್ರಿ ಚಿತ್ರದುರ್ಗದ ಮಠದಲ್ಲೇ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಒಡನಾಡಿ ಸಂಸ್ಥೆಯಿಂದ ಮಠದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ 7 ದಿನದ ಬಳಿಕ ಮುರುಘಾ ಶ್ರೀಗಳನ್ನು ಬಂಧಿಸಲಾಗಿದೆ.
ರಾತ್ರಿಯೇ ಕೋರ್ಟ್ ಹಾಜರು!: ಮುರುಘಾ ಶರಣರನ್ನು ಬಂಧಿಸಿ ಮಧ್ಯರಾತ್ರಿಯೇ ಚಿತ್ರದುರ್ಗದ 1ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಧೀಶರಾದ ಕೋಮಲಾ ಅವರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸುವಂತೆ ಆದೇಶ ನೀಡಿದ ಬಳಿಕ ಮುರುಘಾ ಶರಣರನ್ನು ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ರಾಜ್ಯದ ಪ್ರಮುಖ ಮಠದಲ್ಲಿ ಒಂದು!
ಚಿತ್ರದುರ್ಗದಲ್ಲಿರುವ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠವು ಕರ್ನಾಟಕದ ಪ್ರಸಿದ್ಧ ಮಠ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಮಠಕ್ಕೆ ಭಕ್ತರಿದ್ದಾರೆ. ಲಿಂಗಾಯತ ಪರಂಪರೆಯ ಮಠವಾದರೂ ವಿವಿಧ ಜಾತಿ ಮತ್ತು ಧರ್ಮಗಳಲ್ಲಿಯೂ ಪ್ರಭಾವ ಹೊಂದಿದೆ. ಸಮಾಜ ಸುಧಾರಣೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಬಹುಕಾಲದಿಂದ ಸಕ್ರಿಯವಾಗಿದ್ದು, ಕರ್ನಾಟಕದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ಕೊಟ್ಟಿದೆ. 17ನೇ ಶತಮಾನದಲ್ಲಿ ಚಿತ್ರದುರ್ಗದ ಪಾಳಯಗಾರ ಬಿಚ್ಚುಗತ್ತಿ ಭರಮಣ್ಣ ನಾಯಕನ ಆಳ್ವಿಕೆಯ ಅವಧಿಯಲ್ಲಿ ರಾಜಾಶ್ರಯ ಪಡೆದ ಮಠಕ್ಕೆ ನಂತರದ ದಿನಗಳಲ್ಲಿ ಪ್ರತಿ ಆಡಳಿತಗಾರರು ಗೌರವ ಸಲ್ಲಿಸಿದರು.
ಸ್ವಾತಂತ್ರ್ಯ ನಂತರದ ಕರ್ನಾಟಕ ರಾಜಕಾರಣದಲ್ಲಿ ಯಾವುದೇ ಪಕ್ಷವನ್ನು ಅಧಿಕಾರಕ್ಕೆ ತರುವ ಅಥವಾ ಇಳಿಸುವ ಸಾಮರ್ಥ್ಯವನ್ನು ಎನಿಸಿದ ವೀರಶೈವ ಲಿಂಗಾಯತ ಸಮುದಾಯ ಹಲವು ಬಾರಿ ಪ್ರದರ್ಶಿಸಿದೆ. ಇದೇ ಸಮುದಾಯಕ್ಕೆ ಸೇರಿದ ಮಠವನ್ನು ನಿರ್ಲಕ್ಷಿಸಲು ಅಥವಾ ಮೂಲೆಗುಂಪು ಮಾಡಲು ಯಾವೊಂದು ಪಕ್ಷವೂ ಧೈರ್ಯ ಮಾಡಲಿಲ್ಲ. ಆದರೆ ಮಠವು ರಾಜಕಾರಣಕ್ಕಿಂತಲೂ ಹೆಚ್ಚಾಗಿ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರಿಂದ ಸಹಜವಾಗಿಯೇ ಭಕ್ತಿಯೊಂದಿಗೆ ಜನರು ಗೌರವ, ಪ್ರೀತಿಗಳೂ ದೊರೆತವು.
ಸ್ವಾಮೀಜಿ ಈಗ ಕೈದಿ ನಂ 2261!
ಪೊಕ್ಸೋ ಪ್ರಕರಣದಲ್ಲಿ ಆರೋಪಿಯಾಗಿ ಸ್ವಾಮಿಜಿ ಈಗ ಚಿತ್ರದುರ್ಗ ಜೈಲಿನ ವಿಚಾರಣಾಧೀನ ಕೈದಿ ನಂ 2261.
ಮುರುಘಾ ಮಠದ ಹಾಲಿ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಈವರೆಗೆ ಆರೋಪಗಳು ಇರಲಿಲ್ಲ. ಸ್ವಾಮೀಜಿ ಆಪ್ತರಾಗಿದ್ದ ಬಸವರಾಜನ್ ಈ ಹಿಂದೆಯೂ ಹಲವು ಆರೋಪಗಳನ್ನು ಮಾಡಿದ್ದರಾದರೂ, ಪರಿಸ್ಥಿತಿ ವಿಕೋಪಕ್ಕೆ ಹೋಗಿರಲಿಲ್ಲ. ಆದರೆ ಇದೀಗ ಮಠದ ಆಶ್ರಯದಲ್ಲಿದ್ದ ಮಕ್ಕಳೇ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡುವುದರೊಂದಿಗೆ ಅವರ ಘನತೆಗೆ ಧಕ್ಕೆ ಬಂದಿದೆ. ಇಂತಹ ಆರೋಪ ಎದುರಿಸುವ ರಾಜ್ಯದ ಹಲವೆಡೆ ಭಕ್ತರು ಒತ್ತಾಯಿಸುತ್ತಿದ್ದಾರೆ.
ಮಠದಲ್ಲೇ ಶಿಷ್ಯರಾಗಿ ಪೀಠ ಅಲಂಕರಿಸಿದರು!
ಚಿತ್ರದುರ್ಗ ತಾಲೂಕಿನ ಗೊಡಬನಾಳ್ ಗ್ರಾಮದಲ್ಲಿ ನವೆಂಬರ್ 4, 1958ರಂದು ಗುರುಮೂರ್ತೆಪ್ಪ – ಮುರುಗೆಮ್ಮ ದಂಪತಿಯ ಮಗನಾಗಿ ಶಿವಮೂರ್ತಿ ಮುರುಘಾ ಶರಣರು ಜನಿಸಿದರು. ಇವರ ಪೋಷಕರು ಮುರುಘಾ ಮಠದ ಭಕ್ತರಾಗಿದ್ದರು. ಬಾಲ್ಯದಲ್ಲೇ ಶಿಕ್ಷಣಕ್ಕಾಗಿ ಮಠದ ಆಶ್ರಯ ದೊರೆಯಿತು. ಮುರುಘಾಮಠದ ಅಂದಿನ ಪೀಠಾಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿಗೆ ಇವರ ನಡವಳಿಕೆ ಮತ್ತು ಬುದ್ಧಿವಂತಿಕೆ ಇಷ್ಟವಾಯಿತು. ಹೀಗಾಗಿ ಮಠದ ಅಧಿಕಾರ ವಲಯದಲ್ಲಿ ಶಿವಮೂರ್ತಿ ಮುರುಘಾ ಶರಣರು ಹಂತಹಂತವಾಗಿ ಮೇಲೇರುತ್ತಾ ಬಂದರು. 1978ರಲ್ಲಿ ಶಿರಸಿ ರುದ್ರದೇವರ ಮಠದ ಮರಿದೇವರು, 1982ರಲ್ಲಿ ಶಿರಸಿ ರುದ್ರದೇವರ ಮಠದ ಪಟ್ಟಾಧಿಕಾರಿ, 1984ರಲ್ಲಿ ಹಾವೇರಿ ಮಠದ ಪೀಠಾದ್ಯಕ್ಷರಾದರು. ಚಿತ್ರದುರ್ಗ ಮುರುಘಾಮಠದ ಪೀಠಾಧ್ಯಕ್ಷರಾಗಿ ಜನವರಿ 31, 1991ರಲ್ಲಿ ಅಧಿಕಾರ ಸ್ವೀಕರಿಸಿದರು.
ತಳ ಸಮುದಾಯದವರಿಗೂ ನ್ಯಾಯ ಕೊಟ್ಟವರು!
ಕರ್ನಾಟಕದ ಹಲವು ಸಮುದಾಯಗಳಿಗೆ ಗುರುಪೀಠಗಳನ್ನು ಆರಂಭಿಸುವ ಮೂಲಕ ಸಾಮಾಜಿಕ ಕ್ರಾಂತಿಗೆ ಶಿವಮೂರ್ತಿ ಮುರುಘಾ ಶರಣರು ಮುನ್ನುಡಿ ಬರೆದರು. ತಮ್ಮನ್ನು ತಾವು ಜಗದ್ಗುರುಗಳು ಎಂದು ಕರೆಸಿಕೊಳ್ಳಲಿಲ್ಲ. ಶರಣ ಸಂಸ್ಕೃತಿಯ ಪ್ರತೀಕವಾಗಿ ತಮ್ಮನ್ನು ತಾವು ‘ಶರಣ’ ಎಂದೇ ಕರೆದುಕೊಂಡರು. ಬೆಳ್ಳಿಸಿಂಹಾಸನ ಹಾಗೂ ಅಡ್ಡಪಲ್ಲಕ್ಕಿಗಳನ್ನು ತಿರಸ್ಕರಿಸಿ ‘ನಾನು ಸಾಮಾನ್ಯರಲ್ಲಿ ಸಾಮಾನ್ಯ, ಬಸವ ಧರ್ಮದ ಅನುಯಾಯಿ’ ಎಂದು ಘೋಷಿಸಿಕೊಂಡರು. ಜಾತಿ ಭೇದ ಮಾಡದೆ ಸಮಾಜದ ಎಲ್ಲಾ ವರ್ಗದ ಜನರನ್ನು ಮಠದೊಳಗೆ ಕರೆತಂದರು. ಹಲವು ಸಮುದಾಯಗಳಿಗೆ ರಾಜಕೀಯ ಶಕ್ತಿಯನ್ನೂ ತುಂಬಿದರು. ಇವರ ಆಡಳಿತ ಅವಧಿಯಲ್ಲಿ ಮುರುಘಾ ಮಠದ ಪ್ರಭಾವ ಮತ್ತು ಚಟುವಟಿಕೆಗಳು ದೊಡ್ಡಮಟ್ಟದಲ್ಲಿ ಬೆಳೆದವು. ಈ ಬೆಳವಣಿಗೆಯ ಹಿಂದೆ ಬಸವರಾಜನ್ ಅವರ ಪರಿಶ್ರಮ ಮತ್ತು ಆಲೋಚನೆಗಳೂ ಕೆಲಸ ಮಾಡಿದ್ದವು. ಇನ್ನು ದಲಿತ ಕೇರಿಗಳಿಗೆ ತಾವೇ ಹೋದರು.
ಮಠದೊಳಗಿನ ರಾಜಕೀಯವೇ ಕಾರಣವಾಯ್ತಾ..?!
ಬಹುಕಾಲದ ಒಡನಾಡಿಗಳಾಗಿದ್ದ ಬಸವರಾಜನ್ ಹಾಗೂ ಶಿವಮೂರ್ತಿ ಮುರುಘಾ ಶರಣರ ನಡುವೆ 2007ರಲ್ಲಿ ಮೊದಲ ಬಾರಿಗೆ ಭಿನ್ನಾಭಿಪ್ರಾಯ ತಾರಕಕ್ಕೇರಿತ್ತು. ಮಠದ ಹಣ, ಆಸ್ತಿ ಕಬಳಿಕೆ, ವೆಚ್ಚಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಒಬ್ಬರು ಇನ್ನೊಬ್ಬರ ಮಾತು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ತೀವ್ರ ಅಸಮಾಧಾನದಿಂದ 2007ರಲ್ಲಿ ಬಸವರಾಜನ್ ಮಠದಿಂದ ಹೊರ ನಡೆದಿದ್ದರು.
2008ರಲ್ಲಿ ಬಸವರಾಜನ್ ಚಿತ್ರದುರ್ಗ ಕ್ಷೇತ್ರದಿಂದ ಜೆಡಿಎಸ್ ಶಾಸಕರಾಗಿ ಆಯ್ಕೆಯಾದರು. ನಂತರ ಕಳೆದ ಮಾರ್ಚ್ 7ರಂದು ಬಸವರಾಜನ್ ದಿಢೀರ್ ಮಠಕ್ಕೆ ಮರುಪ್ರವೇಶ ಮಾಡಿದ್ದುಮತ್ತೆ ಅವರಿಗೆ ಮಠದ ಆಡಳಿತಾಧಿಕಾರಿ ಹುದ್ದೆ ನೀಡಲಾಯಿತು. ಇಬ್ಬರೂ ಒಗ್ಗೂಡಿ ಮಠದ ಅಭಿವೃದ್ಧಿಗೆ ಶ್ರಮಿಸುವುದಾಗಿ ಘೋಷಿಸಿದರು. ಎಸ್ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಹುದ್ದೆಯನ್ನೂ ಬಸವರಾಜನ್ ಅವರಿಗೆ ನೀಡಲಾಗಿತ್ತು. ಮತ್ತೆ ಇಬ್ಬರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಮಠದ ಹಾಸ್ಟೆಲ್ನಿಂದ ನಾಪತ್ತೆಯಾದ ಬಾಲಕಿಯರನ್ನು ಬಸವರಾಜನ್ ಬೆಂಗಳೂರಿನಿಂದ ಕರೆತಂದಿದ್ದರು. ಸ್ವಾಮೀಜಿ ವಿರುದ್ಧ ಬಾಲಕಿಯರು ಆರೋಪ ಮಾಡಲು, ಅವರನ್ನು ಮೈಸೂರಿಗೆ ಒಡನಾಡಿ ಸಂಸ್ಥೆಗೆ ತಲುಪಿಸಲು ಬಸವರಾಜನ್ ಅವರೇ ಕಾರಣ ಎನ್ನಲಾಗುತ್ತಿದೆ.
ನಿತ್ಯಾನಂದ ಸೇರಿ ಅನೇಕರು ಜೈಲು ಸೇರಿದ್ದರು!
ರಾಜ್ಯದಲ್ಲಿ ಈ ಹಿಂದೆ ಅತ್ಯಾಚಾರ ಆರೋಪಗಳು ಅನೇಕ ಸ್ವಾಮೀಜಿಗಳ ಬಂದಿದ್ದು ಕೆಲವರು ಜೈಲು ಕೂಡ ಸೇರಿದ್ದರು. ಬಿಡದಿ ಮಠದ ನಿತ್ಯಾನಂದ ವಿರುದ್ಧ ಮಠದ ಭಕ್ತೆಯೇ ದೂರು ನೀಡಿ ಜೈಲು ಸೇರಿದ್ದರು. ಇನ್ನು ರಾಘವೇಶ್ವರ ಶ್ರೀಗಳ ವಿರುದ್ಧವೂ ದೂರು ದಾಖಲಾಗಿತ್ತು.