- ಭೂತಾನ್ ಅಡಕೆ ಆಮದು ಬಗ್ಗೆ ಆತಂಕ ಬೇಡ
NAMMUR EXPRESS NEWS
ಶಿವಮೊಗ್ಗ: ಸದ್ಯಕ್ಕೆ ಪೊಲೀಸ್ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ವಯೋಮಿತಿ ಹೆಚ್ಚಳ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪೊಲೀಸ್ ಮತ್ತು ಮಿಲಿಟರಿ ಬೇರೆ ಇಲಾಖೆ ಥರ ಅಲ್ಲ. ದೈಹಿಕವಾಗಿ ಪ್ರಬಲವಾಗಿರಬೇಕು. ಸಣ್ಣ ವಯಸ್ಸಿನಲ್ಲಿ ನೇಮಕ ಮಾಡಿಕೊಂಡರೆ ಅವರಿಂದ ತುಂಬಾ ಉಪಯೋಗ ಇದೆ. ಈ ದೃಷ್ಟಿಯಿಂದ ಎರಡು ವರ್ಷ ಹೆಚ್ಚು ಮಾಡಬೇಕು ಎಂಬ ಚರ್ಚೆ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ಸದ್ಯಕ್ಕೆ ವಯೋಮಿತಿ ಹೆಚ್ಚಳದ ಬಗ್ಗೆ ಹೇಳಲ್ಲ ಎಂದರು.
ಪಿಎಸ್ಐ ಪ್ರಕರಣ ಕೋರ್ಟ್ನಲ್ಲಿದೆ. ಇದೇ ನೋಟಿಫಿಕೇಶನ್ ಒಳಗೆ ಆದರೆ, ವಯೋಮಿತಿ ಸಡಿಲಿಕೆ ಅಗತ್ಯ ಇಲ್ಲ. ಹಾಗಾಗದೇ ರದ್ದಾಗಿ, ಹೊಸದಾಗಿ ಪರೀಕ್ಷೆ ಆಗಬೇಕೆಂದರೆ ಆಗ ವಯೋಮಿತಿ ನಿಗದಿ ಪಡಿಸುತ್ತೇವೆ ಎಂದು ತಿಳಿಸಿದರು.
ಭೂತಾನ್ ಅಡಕೆ ಆಮದು ಬಗ್ಗೆ ಆತಂಕ ಬೇಡ: ಬೇರೆ ಬೇರೆ ದೃಷ್ಟಿಯಿಂದ ಭೂತಾನ್ ನಮ್ಮ ದೇಶಕ್ಕೆ ಅಗತ್ಯವಿದೆ. ಈ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಒಪ್ಪಂದಗಳಾಗಿವೆ. ಸರ್ಕಾರ ಬದಲಾದ ಕೂಡಲೇ ಒಪ್ಪಂದವನ್ನು ಮುರಿಯಲು ಸಾಧ್ಯವಿಲ್ಲ. ನಮ್ಮಲ್ಲಿ ಬೆಳೆದಂತಹವುಗಳನ್ನು ಅಲ್ಲಿಗೆ, ಅಲ್ಲಿ ಬೆಳೆದಂತವುಗಳನ್ನು ಇಲ್ಲಿಗೆ ಆಮದು ರಫ್ತು ಮಾಡಿಕೊಳ್ಳಬಹುದು ಎನ್ನುವ ಪ್ರೀಟ್ರೇಡ್ ಒಪ್ಪಂದ ಆಗಿದೆ. ಈ ಹಿನ್ನೆಲೆಯಲ್ಲಿ ಭೂತಾನ್ನವರು ನಮ್ಮ ಅಡಕೆಯನ್ನು ನೀವು ಆಮದು ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಭಾರತ ಮೂರು ಪಟ್ಟು ಒಣ ಅಡಕೆ ಮತ್ತು ಅಡಕೆ ಉತ್ಪನ್ನಗಳನ್ನು ಭೂತಾನ್ಗೆ ರಫ್ತು ಮಾಡುತ್ತಿದ್ದೇವೆ. ಭೂತಾನ್ ಭಾರತದ ಅಡಕೆಗೆ ಉತ್ತಮ ಗ್ರಾಹಕ ದೇಶ. ಹಾಗಾಗಿ ಭೂತಾನ್ನಿಂದ ಬರುವ ಅಡಕೆ ಆಮದು ಬಗ್ಗೆ ಆತಂಕ ಬೇಡ. ಇದರಿಂದ ಏನು ತೊಂದರೆ ಆಗುವುದಿಲ್ಲ ಎಂದರು.