ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಅಡ್ಡಿ ಇಲ್ಲ
– ಬಡ, ಜನ ಪರ ಸರ್ಕಾರ ನಿರಾತಂಕವಾಗಿ ಅವಧಿ ಪೂರೈಸಲಿದೆ: ಶ್ರೇಯಸ್ ಪಟೇಲ್
– ಹಾಸನ ತಾಲೂಕಿನ ಗೊರೂರಿನ ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಣೆ
NAMMUR EXPRESS NEWS
ಹಾಸನ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಡ್ಡಿ, ಆತಂಕ ಇಲ್ಲದೆ ಮುಂದುವರಿಯಲಿದೆ ಎಂದು ಸಂಸದ ಶ್ರೇಯಸ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾಸನ ತಾಲೂಕಿನ ಗೊರೂರಿನ ಹೇಮಾವತಿ ಜಲಾಶಯಕ್ಕಿಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಶಾಸಕರು, ಅಧಿಕಾರಿಗಳೊಂದಿಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ನಮ್ಮದು ಜನಪರ, ಬಡವರ ಪರ ಇರುವ ಸರ್ಕಾರ, ಈ ಸರ್ಕಾರಕ್ಕೆ ಯಾವುದೇ ಸಮಸ್ಯೆ ಎದುರಾಗದು, ಅಜರಾಮರ ಅನ್ನೋ ಹಾಗೆ ನಿರಾತಂಕವಾಗಿ ಅವಧಿ ಪೂರೈಸಲಿದೆ ಎಂದು ನುಡಿದರು.
ಜಿಲ್ಲೆಯ ಹಾಗೂ ನಾಡಿನ ಸಮಸ್ತ ಜನರ ಆಶೀರ್ವಾದ ನಮ್ಮ ಸರ್ಕಾರದ ಮೇಲೆ ಹೀಗೆಯೇ ಇರಲಿ ಎಂದು ಮನವಿ ಮಾಡಿದರು.
ಸಚಿವ ರಾಜಣ್ಣ ಬಗ್ಗೆ ಮೆಚ್ಚುಗೆ
ರಾಜಣ್ಣ ಅವರು ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಬಂದ ಮೇಲೆ ಸಾಕಷ್ಟು ಅಭಿವೃದ್ಧಿ ಕೆಲಸ ಆಗುತ್ತಿವೆ. ಹಾಸನ ಜಿಲ್ಲೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಜಿಲ್ಲೆಯ ಎಲ್ಲಾ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿ, ಹಾಸನ ಉಪ ವಿಭಾಗಾಧಿಕಾರಿ ಹಾಗೂ ನಾಲ್ವರು ತಹಸೀಲ್ದಾರರು, ಈ ವರ್ಷದ ಉತ್ತಮ ಕಂದಾಯ ಅಧಿಕಾರಿ ಪ್ರಶಸ್ತಿಗೆ ಭಾಜರಾಗಿರುವುದೇ ಕಣ್ಣ ಮುಂದಿನ ಉದಾಹರಣೆ ಎಂದರು.
ಪ್ರಶಸ್ತಿಗೆ ಭಾಜನರಾಗಿರುವ ನಮ್ಮ ಅಧಿಕಾರಿಗಳಿಗೆ ಮತ್ತೊಮ್ಮೆ ಅಭಿನಂದನೆ ಸಲ್ಲಿಸುವೆ ಎಂದರು. ಹೀಗೆಯೇ ಮುಂದಿನ ದಿನಗಳಲ್ಲೂ ಜಿಲ್ಲೆಯ ಅಭಿವೃದ್ಧಿ ಜೊತೆಗೆ ಬಡವರ ಏಳಿಗೆಗಾಗಿ ಕೆಲಸ ಮಾಡಿ ಎಂದು ಮನವಿ ಮಾಡಿದರು.
ಋಣಾನುಬಂಧವೋ ಏನೋ ಹೇಮಾವತಿ ಜಲಾಶಯಕ್ಕೆ ರಾಜಣ್ಣ ಅವರೇ ಬಾಗಿನ ಸಲ್ಲಿಸಬೇಕು ಎಂದು ಇತ್ತು. ಅದು ಇಂದು ನೆರವೇರಿದೆ. ಈ ಕಾರ್ಯದಲ್ಲಿ ತಡ ಆಗಿರಬಹುದು. ಅದೇನೇ ಇದ್ದರೂ, ಮಂಗಳ ಕಾರ್ಯ ಇಂದು ಹೇಮಾವತಿ ತಾಯಿಗೆ ನೆರವೇರಿದೆ. ಇದೇ ಪ್ರತಿ ವರ್ಷವೂ ಹೇಮಾವತಿ ಜಲಾಶಯ ಭರ್ತಿ ಆಗಬೇಕು. ಅದರಿಂದ ಹಾಸನ ಜಿಲ್ಲೆ ಸೇರಿದಂತೆ ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಗಳ ಜನ-ಜಾನುವಾರುಗಳಿಗೂ ಅನುಕೂಲ ಆಗಬೇಕು ಎಂದು ಆಶಿಸಿದರು. ಹೇಮಾವತಿ ಈ ಭಾಗದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿದ್ದು, ಇದರಿಂದ ಮೂರ್ನಾಲ್ಕು ಜಿಲ್ಲೆಗಳಿಗೆ ಅನುಕೂಲವಾಗುತ್ತಿದೆ ಎಂದು ತಿಳಿಸಿದರು