ಕರಾವಳಿ ಟಾಪ್ ನ್ಯೂಸ್
– ಬ್ರಹ್ಮಾವರ ಲಾಕಪ್ ಡೆತ್ ಪ್ರಕರಣ- ಎಸ್ಐ, ಹೆಡ್ ಕಾನ್ಸ್ಟೇಬಲ್ ಅಮಾನತು!
– ಮಣಿಪಾಲ : ಶಾಲಾ ರಿಕ್ಷಾ ಪಲ್ಟಿ : ಮೂವರು ವಿದ್ಯಾರ್ಥಿಗಳಿಗೆ ಗಾಯ!
– ಪುತ್ತೂರು : ಬಾಲಕಿಯರ ಹಾಸ್ಟೆಲ್ ಗೆ ನುಗ್ಗಿದ ಆಗಂತುಕ: ಕ್ರಮ ಕೈಗೊಳ್ಳದ ಪೊಲೀಸರು!
– ಬೆಳ್ತಂಗಡಿ: ಕಬಡ್ಡಿ ಪಟು, ಅನಾರೋಗ್ಯದಿಂದ ಚಿನ್ಮಯಿ ಸಾವು!
NAMMUR EXPRESS NEWS
ಬ್ರಹ್ಮಾವರ: ಬ್ರಹ್ಮಾವರ ಠಾಣೆಯಲ್ಲಿ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿ ಠಾಣಾಧಿಕಾರಿ ಮಧು ಬಿ.ಇ ಮತ್ತು ಪ್ರಭಾರ ಠಾಣಾಧಿಕಾರಿ ಹೆಡ್ಕಾನ್ ಸ್ಟೇಬಲ್ ಸುಜಾತ ಇವರನ್ನು ಉಡುಪಿ ಜಿಲ್ಲಾ ಎಸ್ಪಿ ಅಮಾನತು ಮಾಡಿ ಆದೇಶ ಹೊರಡಿಸಿರುತ್ತಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಡೆದ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಠಾಣೆ ಪೊಲೀಸ್ ಉಪನಿರೀಕ್ಷಕ ಮತ್ತು ಹೆಡ್ಕಾನ್ ಸ್ಟೇಬಲ್ ಅಮಾನತು ಮಾಡಿ ಆದೇಶಿಸಲಾಗಿದೆ. ಆರೋಪಿಗಳನ್ನು ಬಂಧಿಸುವಾಗ ತೆಗೆದುಕೊಳ್ಳಬೇಕಾಗುವ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಪೂರ್ಣವಾಗಿ ಪಾಲಿಸದೆ ಇರುವ ಕುರಿತು ಈ ಕ್ರಮಕೈಗೊಳ್ಳಲಾಗಿದೆಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ. ತನಿಖೆಗೆ ಸಿಐಡಿ ಪೊಲೀಸರ ತಂಡ ಬ್ರಹ್ಮಾವರಕ್ಕೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಲಾಕಪ್ ಡೆತ್ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪ್ರಕರಣದ ತನಿಖೆಗೆ ಸಿಐಡಿ ಪೊಲೀಸರು ಘಟನಾ ಸ್ಥಳಕ್ಕೆ ಮತ್ತು ಠಾಣೆಗೆ ಕೊಟ್ಟಿದ್ದಾರೆ. ಬೆಂಗಳೂರಿನಿಂದ ಉಡುಪಿಗೆ ತಲುಪಿರುವ ಸಿಐಡಿ ಪೊಲೀಸರ ತಂಡವು, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಮಾಹಿತಿ ಸಂಗ್ರಹಿಸುವ ಕಾರ್ಯ ಕೈಗೊಂಡಿದೆ.
ಬಳಿಕ ಬ್ರಹ್ಮಾವರ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮೃತದೇಹ ಪರಿಶೀಲನೆ ನಡೆಸಿ ವೈದ್ಯಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿತು. ಮೃತದೇಹವನ್ನು ಮಣಿಪಾಲ ಕೆಎಂಸಿಯಲ್ಲಿ ನ. 13ರಂದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿ ಕೇರಳದಿಂದ ಮೃತರ ಮನೆಯವರು ಈಗಾಗಲೇ ಬ್ರಹ್ಮಾವರ ತಲುಪಿದ್ದು, ಅಧಿಕೃತ ದೂರು ನೀಡಿದ್ದಾರೆ.
* ಮಣಿಪಾಲ : ಶಾಲಾ ರಿಕ್ಷಾ ಪಲ್ಟಿ : ಮೂವರು ವಿದ್ಯಾರ್ಥಿಗಳಿಗೆ ಗಾಯ!
ಮಣಿಪಾಲ: ಶಾಲಾ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಮೂವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನ. 11 ರಂದು ಕೆಳಪರ್ಕಳದ ಈಶ್ವರ ನಗರದ ನಗರಸಭೆಯ ಪಂಪ್ ಹೌಸ್ ಬಳಿ ಸಂಭವಿಸಿದೆ. ಮಾಧವ ಕೃಪಾ ಶಾಲೆಯಿಂದ 8 ಮಂದಿ ಮಕ್ಕಳನ್ನು ಸಂಜೆ ಆಟೋ ರಿಕ್ಷಾದಲ್ಲಿ ಮನೆಗೆ ಕರೆದುಕೊಂಡು ಮಣಿಪಾಲದಿಂದ ಪರ್ಕಳದ ಕಡೆ ಹೋಗುತ್ತಿದ್ದ ವೇಳೆ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.
ಇದರಿಂದ ರಿಕ್ಷಾದಲ್ಲಿದ್ದ ಮೂವರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ರಿಕ್ಷಾ ಚಾಲಕ ಸಣ್ಣಪುಟ್ಟ ಗಾಯಗೊಂಡಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಮಣಿಪಾಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಣಿಪಾಲ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರಾದ ಸಣ್ಣಕಿಬೆಟ್ಟು ಮಂಜು ನಾಯ್ಕ್ ಹಾಗೂ ದಿನೇಶ್ ಪೂಜಾರಿ ಈಶ್ವರನಗರ ಇವರು ಅಪಘಾತವಾದ ಆಟೋ ರಿಕ್ಷಾದಲ್ಲಿದ್ದ ಮಕ್ಕಳನ್ನು ಸುರಕ್ಷಿತಾವಾಗಿ ಹೆತ್ತವರ ಮಡಿಲು ಸೇರಿಸಿ ಸಾರ್ವಜನಿಕರ ಪ್ರೀತಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
* ಪುತ್ತೂರು : ಬಾಲಕಿಯರ ಹಾಸ್ಟೆಲ್ ಗೆ ನುಗ್ಗಿದ ಆಗಂತುಕ: ಕ್ರಮ ಕೈಗೊಳ್ಳದ ಪೊಲೀಸರು!
ಪುತ್ತೂರು: ಬಾಲಕಿಯರ ಹಾಸ್ಟೆಲ್ ಒಳಗೆ ಆಗಂತುಕ ಓರ್ವ ನುಗ್ಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಪಡೀಲ್ ನಲ್ಲಿರುವ ಹಾಸ್ಟೆಲ್ ನಲ್ಲಿ ನಡೆದಿದ್ದು, ದೂರು ನೀಡಿದ್ದರೂ ಪರಿಸ್ಥಿತಿಯ ಗಂಭೀರತೆ ಅರಿಯದೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನವೆoಬರ್ 6 ರಂದು ಈ ಘಟನೆ ನಡೆದಿದ್ದು ಬಾಲಕಿಯರೇ ಇರುವ ಹಾಸ್ಟೆಲ್ ಗೆ ಅಪರಿಚಿತ ವ್ಯಕ್ತಿಯೋರ್ವ ನುಗ್ಗಿದ್ದು, ಹಾಸ್ಟೆಲ್ನ ಸಿಸಿ ಕ್ಯಾಮಾರಾದಲ್ಲಿ ಆಗಂತುಕನ ಚಲನವಲನ ದಾಖಲಾಗಿದೆ. ಮಧ್ಯ ರಾತ್ರಿ ಸುಮಾರು 2.30 ರಿಂದ 3.30 ರ ವರೆಗೆ ಈ ಆಗಂತುಕ ಹಾಸ್ಟೆಲ್ ಒಳಗೇ ಇದ್ದ ಎನ್ನಲಾಗಿದೆ. ಹಾಸ್ಟೆಲ್ ವಾರ್ಡನ್ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದ್ರೆ ಇದರ ಗಂಭೀರತೆ ಅರಿಯದ ಪುತ್ತೂರು ಮಹಿಳಾ ಠಾಣೆ ಪೋಲೀಸರು ಪ್ರಕರಣ ದಾಖಲಿಸಲು ಉದಾಸೀನತೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ.
* ಬೆಳ್ತಂಗಡಿ: ಕಬಡ್ಡಿ ಪಟು, ಅನಾರೋಗ್ಯದಿಂದ ಚಿನ್ಮಯಿ ಸಾವು!
ಬೆಳ್ತಂಗಡಿ: ಅನಾರೋಗ್ಯದಿಂದ ವಿದ್ಯಾರ್ಥಿ ಚಿನ್ಮಯಿ ಮೃತಪಟ್ಟ ಘಟನೆ ನಡೆದಿದೆ.ಚಿನ್ಮಯಿ ಎರಡು ದಿನದ ಹಿಂದೆ ಮೈಸೂರಿನಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಎನ್ನಲಾಗಿದೆ.
ಮೃತರು ತಂದೆ ತಾಯಿ ಹಾಗೂ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ.