ಕರಾವಳಿ ಟಾಪ್ ನ್ಯೂಸ್
– ಮಲ್ಪೆಯ ಮೀನುಗಾರಿಕೆ ಬೋಟ್ ಮುಳುಗಡೆ!
– ಸುರತ್ಕಲ್ ನಲ್ಲಿ ಡೀಸೆಲ್ ಕಳ್ಳರು ಅರೆಸ್ಟ್!
– ಬಂಟ್ವಾಳ : ಕಲ್ಲಡ್ಕದಲ್ಲಿ ಚರಂಡಿಗೆ ಬಿದ್ದ ಟ್ಯಾಂಕರ್ ಸಂಚಾರ ಅಸ್ತವ್ಯಸ್ತ
– ಉಡುಪಿ: ಮಾನಸಿಕ ಖಿನ್ನತೆಯಿಂದ,ಮಹಾರಾಷ್ಟ್ರ ಎಫೆಕ್ಸ್ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ!
– ಉಚ್ಚಿಲ: ರಾ. ಹೆದ್ದಾರಿಯಲ್ಲಿ ಮುಂದುವರಿದ ಅಪಘಾತ, ಪಾದಚಾರಿ ಬಲಿ
NAMMUR EXPRESS NEWS
ಉಡುಪಿ: ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ದೋಣಿ ಕಾರವಾರ ಸಮೀಪ ಮುಳುಗಿ ಅಪಾರ ನಷ್ಟ ಉಂಟಾಗಿದೆ. ಮಲ್ಪೆಯ ಸೀ ಹಂಟರ್ ಹೆಸರಿನ ದೋಣಿಯ ತಳಭಾಗದ ಕಬ್ಬಿಣದ ವೆಲ್ಡಿಂಗ್ ಬಿಟ್ಟುಹೋದ ಪರಿಣಾಮ ನೀರು ತುಂಬಿಕೊಂಡು ಮುಳುಗಿದೆ. ಬೋಟ್ನಲ್ಲಿದ್ದ 8 ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.
ಮಲ್ಪೆಯಿಂದ ಮಹಾರಾಷ್ಟ್ರದ ಕಡೆ ಈ ಬೋಟ್ ಚಲಿಸುತಿತ್ತು. ಕಾರವಾರದಿಂದ 9 ನಾಟಿಕನ್ ಮೈಲು ದೂರದ ಲೈಟ್ಹೌಸ್ ಬಳಿ ಬೋಟ್ ತಳಭಾಗದ ಕಬ್ಬಿಣದ ಭಾಗದಲ್ಲಿ ವೆಲ್ಡಿಂಗ್ ಬಿಟ್ಟುಹೋಗಿದೆ. ವೆಲ್ಡಿಂಗ್ ಬಿಟ್ಟುಹೋದ ಪರಿಣಾಮ ಬೋಟ್ ಇಂಜಿನ್ ಭಾಗಕ್ಕೆ ನೀರು ತುಂಬಿದೆ. ತಕ್ಷಣ ಸ್ಥಳೀಯ ಮೀನುಗಾರರು ಎಂಟು ಜನ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ಮುಳುಗುವ ಹಂತದಲ್ಲಿದ್ದ ದೋಣಿಯನ್ನು ದಡಕ್ಕೆ ತರಲು ಪ್ರಯತ್ನ ಪಟ್ಟರೂ, ಮಾರ್ಗ ಮಧ್ಯದಲ್ಲೇ ಬೋಟ್ ಮುಳುಗಡೆಯಾಗಿದೆ. ಬೋಟ್ ಮುಳುಗಡೆಯಿಂದ 1 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
– ಸುರತ್ಕಲ್ ನಲ್ಲಿ ಡೀಸೆಲ್ ಕಳ್ಳರು ಅರೆಸ್ಟ್!
ಸುರತ್ಕಲ್ : ಮಂಗಳೂರಿನ ಹೊರವಲಯದ ಬಾಳ ಗ್ರಾಮದ ಬಳಿ ಇರುವ ಟ್ಯಾಂಕರ್ಯಾರ್ಡ್ನಲ್ಲಿ ನಿಲ್ಲಿಸಿರುವ ಟ್ಯಾಂಕರ್ಗಳಿಂದ ಡೀಸೆಲ್ ಕದಿಯುವ ಗ್ಯಾಂಗ್ ಒಂದನ್ನು ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕುಳಾಯಿಗುಡ್ಡೆ ನಿವಾಸಿ ಸಂತೋಷ್(42), ಕಾಟಿಪಳ್ಳ ನಿವಾಸಿ ಐರನ್ ರಿತೇಶ್ ಮಿನೇಜ್(36), ಬೆಳ್ತಂಗಡಿ ನಿವಾಸಿ ನಾರಾಯಣ್(23), ಉಡುಪಿಯ ಹೆಜಮಾಡಿ ನಿವಾಸಿ ರವಿ ಜನಾರ್ದನ ಪುತ್ರನ್ (59) ಎಂದು ಗುರುತಿಸಲಾಗಿದೆ. ಟ್ಯಾಂಕರ್ಗಳಿಂದ ಈ ಗ್ಯಾಂಗ್ ಡೀಸೆಲ್ ಕಳವು ಮಾಡುತ್ತಿದ್ದು, ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಡೀಸೆಲ್ ಕಳವುಗೈದು ದಾಸ್ತಾನು ಇರಿಸಿದ್ದ ಶೆಡ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ದಾಸ್ತಾನು ಇರಿಸಿಟ್ಟಿದ್ದ 1685 ಲೀಟರ್ ಡಿಸೇಲ್ ಮತ್ತು 20 ಲೀಟರ್ ಪೆಟ್ರೋಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
– ಬಂಟ್ವಾಳ : ಕಲ್ಲಡ್ಕದಲ್ಲಿ ಚರಂಡಿಗೆ ಬಿದ್ದ ಟ್ಯಾಂಕರ್ ಸಂಚಾರ ಅಸ್ತವ್ಯಸ್ತ
ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ಡೀಸೆಲ್ ಲೋಡ್ ಟ್ಯಾಂಕರ್ ವೊಂದು ಪಲ್ಟಿಯಾಗಿ ಡೀಸೆಲ್ ಸೋರಿಕೆಯಾದ ಘಟನೆ ನಡೆದಿದೆ. ಘಟನೆಯಲ್ಲಿ ಚಾಲಕ ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ. ಈ ಘಟನೆಯ ಪರಿಣಾಮ ಗಂಟೆಗಳಿಗೂ ಅಧಿಕ ಹೊತ್ತು ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು. ಬಂಟ್ವಾಳ ಸಂಚಾರ ಪೊಲೀಸರು ಸ್ಥಳಕ್ಕಾಗಮಿಸಿ, ಕ್ರೇನ್ ಬಳಸಿ ಟ್ಯಾಂಕರ್ ಅನ್ನು ಬದಿಗೆ ಸರಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮಂಗಳೂರಿನಿಂದ ಚೆನ್ನೈಗೆ ಡೀಸೆಲ್ ತುಂಬಿಸಿಕೊಂಡು ಹೋಗುತ್ತಿದ್ದ ಚಾಲಕ ಕಲ್ಲಡ್ಕ ಸರ್ವೀಸ್ ರೋಡ್ ನಲ್ಲಿ ವಿರುದ್ದ ದಿಕ್ಕಿನಲ್ಲಿ ಸಂಚರಿಸಿ ಎಡವಟ್ಟು ಮಾಡಿಕೊಂಡು ಕೊನೆಗೆ ಚರಂಡಿಗೆ ಪಲ್ಟಿಯಾಗಿದೆ. ಪಲ್ಟಿಯಾದ ಕೂಡಲೇ ಟ್ಯಾಂಕರ್ ನಲ್ಲಿ ಸಣ್ಣ ತೂತಾಗಿದ್ದು, ಅ ಮೂಲಕ ಡಿಸೇಲ್ ಸೋರಿಕೆ ಕಂಡುಬಂದಿದೆ. ಹಾಗಾಗಿ ಕೆಲಹೊತ್ತು ಕಲ್ಲಡ್ಕ ಪರಿಸರದಲ್ಲಿ ಆತಂಕದ ವಾತವರಣ ನಿರ್ಮಾಣವಾಗಿತ್ತು. ಜೊತೆಗೆ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆ ಈ ಪ್ರದೇಶದಲ್ಲಿ ಮೊದಲೇ ವಾಹನಗಳು ಸಂಚಾರ ಮಾಡುವುದು ಸಂಕಷ್ಟದ ಸ್ಥಿತಿಯಲ್ಲಿ. ಇದೀಗ ಲಾರಿ ಪಲ್ಟಿಯಾದ ಕಾರಣ ಸುಮಾರು ಒಂದು ಗಂಟೆಗಳ ಕಾಲ ವಾಹನಗಳು ಅಲ್ಲೇ ಬಾಕಿಯಾಗಿದ್ಧವು. ಬಳಿಕ ಸ್ಥಳದಲ್ಲಿದ್ದ ಟ್ರಾಫಿಕ್ ಎಸ್.ಐ ಸುತೇಶ್, ಕ್ರೇನ್ ತರಿಸಿ ಲಾರಿಯನ್ನು ಬದಿಗೆ ಸರಿಸಿದ ನಂತರ ಟ್ರಾಫಿಕ್ ಕ್ಲೀಯರ್ ಆಗಿದೆ.
– ಉಡುಪಿ: ಮಾನಸಿಕ ಖಿನ್ನತೆಯಿಂದ,ಮಹಾರಾಷ್ಟ್ರ ಎಫೆಕ್ಸ್ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ!
ಉಡುಪಿ: ಉಡುಪಿ ನಗರದ ಆದರ್ಶ್ ಆಸ್ಪತ್ರೆಯ ಬಳಿ ಇರುವ, ವಸತಿ ಸಂಕೀರ್ಣದ ನಾಲ್ಕನೇ ಮಹಡಿಯಲ್ಲಿ ವಾಸವಾಗಿದ್ದ ಗೋಪಾಲ ಕೃಷ್ಣ ಪ್ರಭು ನೇಣುಬಿಗಿದು ಆತ್ಮಹತ್ಯೆಗೈದಿರುವ ಘಟನೆ ನಡೆದಿದೆ. ಮೃತ ವ್ಯಕ್ತಿ ಮಹಾರಾಷ್ಟ್ರ ಎಫೆಕ್ಸ್ ಬ್ಯಾಂಕ್ ಉದ್ಯೋಗಿಯಾಗಿದ್ದರು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಇವರು, ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಬೆಳಿಗ್ಗೆ ಬಾಗಿಲು ತೆರೆಯದೆರುವುದನ್ನು ಗಮನಿಸಿದಾಗ ನೇಣು ಬಗೆದುಕೊಂಡಿರುವುದು ಗೊತ್ತಾಗಿದೆ.
ತಕ್ಷಣವೇ ಉಡುಪಿ ನಗರ ಪೊಲೀಸರಿಗೆ ಮಾಹಿತಿ ನೀಡಿ , ಶವವನ್ನು ಕೆಳಕ್ಕೆ ಇಳಿಸಲಾಗಿದೆ . ಉಡುಪಿ ನಗರ ಪೊಲೀಸರು ಶವದ ಮಹಜರು ಕಾರ್ಯ ನಡೆಸಿದ್ದಾರೆ.
– ಉಚ್ಚಿಲ: ರಾ. ಹೆದ್ದಾರಿಯಲ್ಲಿ ಮುಂದುವರಿದ ಅಪಘಾತ, ಪಾದಚಾರಿ ಬಲಿ
ಪಡುಬಿದ್ರಿ : ಅಪರಿಚಿತ ವಾಹನ ಪಾದಾಚಾರಿಯೋರ್ವರಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಉಚ್ಚಿಲದಲ್ಲಿ ಸಂಭವಿಸಿದೆ. ಮೃತರನ್ನು ಹಾವೇರಿ ಮೂಲದ ಮಂಜುನಾಥ್ (48) ಎಂದು ತಿಳಿಯಲಾಗಿದೆ. ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ದಿನನಿತ್ಯ ಎಂಬಂತೆ ಅಪಘಾತಗಳು ನಡೆಯುತ್ತಿದೆ. ತಿಂಗಳ ಅಂತರದಲ್ಲೇ ಆರು ಮಂದಿ ಅಪಘಾತದಿಂದ ಮೃತಪಟ್ಟಿದ್ದು, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿಯೇ ಅಪಘಾತಗಳು ನಡೆಯುತ್ತಿದೆ ಪಾದಚಾರಿಗಳು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚಾರಿಸುವಂತಾಗಿದೆ ಎಂದು ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.