ಕರಾವಳಿ ಟಾಪ್ ನ್ಯೂಸ್
– ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ಭಾರೀ ಮೋಸ: ಅರೆಸ್ಟ್
– ಪೆರ್ಲ: ಭಾರೀ ಬೆಂಕಿ ದುರಂತ; ಐದು ಅಂಗಡಿ ಭಸ್ಮ
– ಉಡುಪಿ: ಪ್ರವಾಸಿ ಬೋಟ್ ಪಲ್ಟಿ: ರೈಡರ್ ಸಮುದ್ರಪಾಲು
– ಕುಂದಾಪುರ: ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
NAMMUR EXPRESS NEWS
ಮಂಗಳೂರು: ಲೋಕಾಯುಕ್ತ ಅಧಿಕಾರಿ ಹೆಸರು ಹೇಳಿಕೊಂಡು ವಂಚನೆಗೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಕದಿರಿ ತಾಲೂಕಿನ ನಲ್ಲಗುಟ್ಲಪಲ್ಲಿ ನಿವಾಸಿ ಧನಂಜಯ ರೆಡ್ಡಿ ತೋಟ ಬಂಧಿತ ಆರೋಪಿ. 2024ರ ಏಪ್ರಿಲ್ 6ರಂದು ಸೋಮೇಶ್ವರ ಪುರಸಭೆಯಲ್ಲಿ ರೆವಿನ್ಯೂ ಆಫೀಸರ್ ರವರಾದ ಪುರುಷೋತ್ತಮ ರವರ ಮೊಬೈಲ್ ನಂಬ್ರದ ವಾಟ್ಸ್ ಆಪ್ ಕಾಲ್ ಮಾಡಿದ ಆರೋಪಿಯು ತಾನು ಲೋಕಾಯುಕ್ತದಿಂದ ಮಾತನಾಡುತ್ತಿರುವುದು ನಿಮ್ಮ ಮೇಲೆ ಅಲಿಗೇಶನ್ ಬಂದಿದೆ. ನಮ್ಮ ಟೆಕ್ನಿಕಲ್ ಆಫೀಸರ್ ನಿಮ್ಮ ಆಫೀಸಿಗೆ ಬರುವ ಮೊದಲು ಅದನ್ನು ಸರಿ ಮಾಡುವುದಾದರೆ ಮಾಡುವ ಎಂದು ಹೇಳಿ, ಹಣ ನೀಡುವಂತೆ ತಿಳಿಸಿ, ಇಲ್ಲವಾದರೆ ತೊಂದರೆ ಮಾಡುವುದಾಗಿ ಹೇಳಿದ್ದಾನೆ. ಬಳಿಕ ಕರೆ ಮಾಡಿದ ಆರೋಪಿಯ ಮೊಬೈಲ್ ನಂಬ್ರವನ್ನು ಟೂಕಾಲರ್ ನಲ್ಲಿ ಪರೀಶೀಲಿಸಿದಾಗ ಡಿ. ಪ್ರಭಾಕರ. ಲೋಕಾಯುಕ್ತ. ಪಿ.ಐ ಎಂದು ತೋರಿಸಿತ್ತು. ಈ ಬಗ್ಗೆ ಪುರುಷೋತ್ತಮರವರು ಕರ್ನಾಟಕ ಲೋಕಾಯುಕ್ತ ಮಂಗಳೂರು ಇಲ್ಲಿನ ಅಧಿಕಾರಿಗಳಲ್ಲಿ ಪೋನ್ ಮೂಲಕ ವಿಷಯ ತಿಳಿಸಿದಾಗ ಅಂತಹ ಹೆಸರಿನ ಯಾವುದೇ ಅಧಿಕಾರಿ/ಸಿಬ್ಬಂದಿಗಳು ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಪುರುಷೋತ್ತಮ ರವರ ಕಛೇರಿಯ ಹಿರಿಯ ಆರೋಗ್ಯ ನಿರೀಕ್ಷಕರಾದ ಲಿಲ್ಲಿ ನಾಯರ್ ಮತ್ತು ಹಿರಿಯ ಆರೋಗ್ಯ ನಿರೀಕ್ಷಕರಾದ ಕೃಷ್ಣ. ಆರ್. ರವರಿಗೆ ಕೂಡಾ ಇದೇ ರೀತಿ ಕರೆ ಮಾಡಿ ಬೆದರಿಕೆ ಒಡ್ಡಿರುತ್ತಾರೆ. ಕರೆ ಮಾಡಿದ ವ್ಯಕ್ತಿಯು ಪುರುಷೋತ್ತಮ ರವರ ಹಣವನ್ನು ಮೋಸದಿಂದ ಪಡೆದುಕೊಳ್ಳುವ ಉದ್ದೇಶದಿಂದ ಕರ್ನಾಟಕ ಲೋಕಾಯುಕ್ತ ಎಂದು ನಟಿಸಿ ನಂಬಿಸಿ ಸುಳ್ಳು ಹೇಳಿರುವುದಲ್ಲದೆ, ಹಣಕ್ಕಾಗಿ ಬೆದರಿಕೆ ಒಡ್ಡಿದ್ದಾನೆ. ಜೊತೆಗೆ ಆ ವ್ಯಕ್ತಿ ಪುರುಷೋತ್ತಮ ಅವರ ಕಛೇರಿ ಸಿಬ್ಬಂದಿ ಅಧಿಕಾರಿಗಳಿಗೆ ಹಣಕ್ಕಾಗಿ ಬೆದರಿಕೆ ಒಡ್ಡಿರುತ್ತಾನೆ ಎಂಬಿತ್ಯಾದಿಯಾಗಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.ಈ ಪ್ರಕರಣದ ಆರೋಪಿಯ ಪತ್ತೆಯ ಬಗ್ಗೆ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ ವಾಲ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಉಪ ಪೊಲೀಸ್ ಆಯುಕ್ತರಾದ ಸಿದ್ದಾರ್ಥ ಗೋಯಲ್ ಐಪಿಎಸ್ ಮತ್ತು ರವಿಶಂಕರ್ ರವರ ನಿರ್ದೇಶನದಲ್ಲಿ ದಕ್ಷಿಣ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯ ಎಸ್ ನಾಯಕ್ ರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು ಉಳ್ಳಾಲ ಪೊಲೀಸ್ ಠಾಣೆ ರವರ ಸಲಹೆಯಂತೆ ಉಳ್ಳಾಲ ಪೊಲೀಸ್ ಠಾಣಾ ಪಿಎಸ್ಐ ಸಂತೋಷ್ ಕುಮಾರ್ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಹೆಚ್ ಸಿ 386 ರಂಜಿತ್ ಕುಮಾರ್, ಸಿಪಿಸಿ-933 ಆನಂದ ಬಾಡಗಿ, ಸಿಪಿಸಿ 2386 ಮಂಜುನಾಥ ರವರು ಆರೋಪಿಯನ್ನು ತಾಂತ್ರೀಕ ಸಹಾಯದಿಂದ ಪತ್ತೆಮಾಡಿ, ಆರೋಪಿ ದಸ್ತಗಿರಿ ಮಾಡಿ ಕ್ರಮ ಕೈಗೊಳ್ಳಲಾಗಿದೆ.
ಪೆರ್ಲ: ಭಾರೀ ಬೆಂಕಿ ದುರಂತ; ಐದು ಅಂಗಡಿ ಭಸ್ಮ
ಪೆರ್ಲ: ಇಲ್ಲಿನ ಪೇಟೆಯಲ್ಲಿ ಡಿ. 21ರಂದು ತಡರಾತ್ರಿ 9 ಅಂಗಡಿಗಳಿಗೆ ಬೆಂಕಿ ಸ್ಪರ್ಶವಾಗಿದ್ದು, ಐದು ಅಂಗಡಿಗಳು ಸಂಪೂರ್ಣವಾಗಿ ಉರಿದು ನಾಶವಾಗಿವೆ. ಬದಿಯಡ್ಕ- ಪುತ್ತೂರು ರಸ್ತೆಯ ಎಡಭಾಗದಲ್ಲಿರುವ ಪೈ ಬಿಲ್ಡಿಂಗ್ ಎಂಬ ಕಮರ್ಶಿಯಲ್ ಕಾಂಪ್ಲೆಕ್ಸ್ನಲ್ಲಿ ದುರಂತ ಸಂಭವಿಸಿದೆ. ಒಟ್ಟು ಸುಮಾರು 1.83 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ.
ಮಧ್ಯರಾತ್ರಿ 12.15ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಬೆಂಕಿಯನ್ನು ಆರಿಸಲು ಪ್ರಯತ್ನಿಸಿದ್ದು, ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಶೇಣಿ ನಿವಾಸಿ ನಾರಾಯಣ ಪೂಜಾರಿ ಮಾಲಿಕತ್ವದಲ್ಲಿರುವ ಪೂಜಾ ಫ್ಯಾನ್ಸಿ, ಪೆರ್ಲ ನಿವಾಸಿ ಮೋನು ಅವರ ತರಕಾರಿ ಅಂಗಡಿ, ಜಯದೇವ ಬಾಳಿಗ ಅವರ ಗೌತಮ್ ಕೋಲ್ಡ್ ಹೌಸ್, ಮೊಹಮ್ಮದ್ ಅವರ ಸಾದತ್ ಜನರಲ್ ಸ್ಟೋರ್, ಅಮೆಕ್ಕಳ ನಿವಾಸಿ ಪ್ರವೀಣ್ ಪೈ ಮಾಲಕತ್ವದ ಪ್ರವೀಣ್ ಆಟೋಮೋಬೈಲ್ಸ್, ಸಂಜೀವ ಅವರ ಕಬ್ಬಿನ ಹಾಲಿನ ಅಂಗಡಿಗೆ ಹೆಚ್ಚಿನ ಹಾನಿಯಾಗಿದೆ. ಕಾಸರಗೋಡು ಹಾಗೂ ಉಪ್ಪಳ ದಿಂದ ಆಗಮಿಸಿದ ಅಗ್ನಿಶಾಮಕ ದಳದವರು, ಬದಿಯಡ್ಕ ಪೊಲೀಸ್ ಅಧಿಕಾರಿಗಳು ಮತ್ತು ಊರವರ ಸಹಕಾರದೊಂದಿಗೆ ಬೆಂಕಿಯನ್ನು ಆರಿಸಿ ಬೆಂಕಿಯ ಕೆನ್ನಾಲಿಗೆ ಸಮೀಪದ ಕಟ್ಟಡಗಳಿಗೂ ಹಬ್ಬುವುದನ್ನು ತಪ್ಪಿಸಿದ್ದಾರೆ.
* ಉಡುಪಿ: ಪ್ರವಾಸಿ ಬೋಟ್ ಪಲ್ಟಿ: ರೈಡರ್ ಸಮುದ್ರಪಾಲು
ಉಡುಪಿ :ತ್ರಾಸಿ ಬೀಚ್ನಲ್ಲಿ ಬೋಟ್ ಪಲ್ಟಿಯಾಗಿ ರೈಡರ್ ಕಣ್ಮರೆಯಾಗಿರುವ ಘಟನೆ ವರದಿಯಾಗಿದೆ. ಬೋಟ್ನಲ್ಲಿದ್ದ ಪ್ರವಾಸಿಗನನ್ನು ರಕ್ಷಿಸಲಾಗಿದ್ದು, ಕಣ್ಮರೆಯಾಗಿರುವ ರೈಡರ್ಗಾಗಿ ಭಾರೀ ಶೋಧ ಕಾರ್ಯ ನಡೆಸಲಾಗುತ್ತಿದೆ. ಇನ್ನು ನಾಪತ್ತೆಯಾದ ರೈಡರ್ನನ್ನು ರವಿದಾಸ್ ಎಂದು ಗುರುತಿಸಲಾಗಿದೆ. ತ್ರಾಸಿ ಕಡಲ ಕಿನಾರೆಯಲ್ಲಿ ಕಾರ್ಯಾಚರಿಸುತ್ತಿರುವ ಬೆಳುಗಾ ವಾಟರ್ ಸ್ಪೋರ್ಟ್ಸ್ನ ಜೆಟ್ಸ್ಕೀ ಬೋಟ್ನಲ್ಲಿ ಓರ್ವ ಪ್ರವಾಸಿಗನನ್ನು ಕೂರಿಸಿಕೊಂಡು ಸಮುದ್ರದಲ್ಲಿ ವಿಹಾರ ನಡೆಸಲಾಗುತ್ತಿತ್ತು. ಈ ವೇಳೆ ರೈಡರ್ ನಿಯಂತ್ರಣ ತಪ್ಪಿ ಜೆಟ್ಸ್ಕೀ ಮಗುಚಿ ಬಿದ್ದಿತ್ತು. ರೈಡ್ಗೂ ಮೊದಲು ಪ್ರವಾಸಿಗರಿಗೆ ಲೈಫ್ ಜಾಕೆಟ್ ಹಾಕಿ ಸುರಕ್ಷತಾ ಕ್ರಮ ವಹಿಸಿದ್ದರಿಂದ ಆತನನ್ನು ರಕ್ಷಿಸಲಾಗಿದೆ. ಬೆಂಗಳೂರು ಮೂಲದ ಪ್ರವಾಸಿಗ ಪ್ರಶಾಂತ್ ಎಂಬವರು ಟೂರಿಸ್ಟ್ ಬೋಟಿನಲ್ಲಿ ಬೋಟಿಂಗ್ ನಡೆಸುತ್ತಿರುವಾಗ ಬೋಟ್ ಪಲ್ಟಿ ಆದ ಪರಿಣಾಮ ಪ್ರವಾಸಿಗ ಹಾಗೂ ರೈಡರ್ ಇಬ್ಬರೂ ನೀರಿಗೆ ಬಿದ್ದ ಪರಿಣಾಮ ರೈಡರ್ ನಾಪತ್ತೆಯಾಗಿದ್ದಾರೆ. ಲೈಫ್ ಜಾಕೆಟ್ ಧರಿಸಿದ್ದ ಪರಿಣಾಮ ಪ್ರವಾಸಿಗ ಪ್ರಶಾಂತ್ ಬಚಾವ್ ಆಗಿದ್ದಾರೆ. ಮುರುಡೇಶ್ವರ ನಿವಾಸಿಯಾದ ರೋಹಿದಾಸ್ ತ್ರಾಸಿಯಲ್ಲಿಯೇ ವಾಸಿಸುತ್ತಿದ್ದು, ಜೆಟ್ ಸ್ಕೀ ಮತ್ತಿತರ ಬೋಟ್ ರೈಡ್ ಕಾಯಕ ಮಾಡಿಕೊಂಡಿದ್ದರು. ನಾಪತ್ತೆಯಾದ ರವಿದಾಸ್ ನ ಶೋಧ ಕಾರ್ಯ ನಡೆಯುತ್ತಿದ್ದು ಗಂಗೊಳ್ಳಿ ಪೊಲೀಸರು ಹಾಗೂ ಕರಾವಳಿ ಪೊಲೀಸ್ ಪಡೆ ಮತ್ತು ಸ್ಥಳೀಯರು ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಶೈಕ್ಷಣಿಕ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ತೆರಳಿದ್ದಾಗ ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲಾಗಿದ್ದರು.
* ಕುಂದಾಪುರ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
ಕುಂದಾಪುರ: ನಗರದ ವಿಠಲವಾಡಿಗೆ ತೆರಳುವ ಮಾರ್ಗದ ಮನೆಯೊಂದರಲ್ಲಿ ರಾತ್ರಿ ವೇಳೆ ಯಾರೂ ಇಲ್ಲದ ಸಂದರ್ಭ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದ ಘಟನೆ ನಡೆದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಘಟನಾ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಸುಮಾರು 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ವಜ್ರಾಭರಣ ಹಾಗೂ ಬೆಲೆಬಾಳುವ ರೇಷ್ಮೆ ಸೀರೆಗಳನ್ನು ಕದ್ದೊಯ್ದಿದ್ದಾರೆ ಎಂದು ಅಂದಾಜಿಸಲಾಗಿದೆ. ಬೆಳ್ಳಿಯ ವಸ್ತುಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.