ಕರಾವಳಿ ಟಾಪ್ ನ್ಯೂಸ್
– ತುಂಬೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳ್ಳತನ
– ಕಣ್ಣೂರು: ಮನೆಯಿಂದ 1 ಕೋಟಿ 73 ಲಕ್ಷದ ಚಿನ್ನಾಭರಣ, 1 ಕೋಟಿ ನಗದು ಕಳವು
– ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಮರಕ್ಕೆ ಡಿಕ್ಕಿ: ಓರ್ವ ಮೃತ್ಯು!
– ಮಂಗಳೂರು: ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
NAMMUR EXPRESS NEWS
ಬಂಟ್ವಾಳ: ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಖ್ಯಾತ ಮೂವರು ಕಳ್ಳರ ತಂಡವನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾಸರಗೋಡಿನ ಚೆರ್ವತ್ತೂರು ಗ್ರಾಮದ ಪಿಲಾವಲಪ್ಪು, ಕೋತಂಕರ ನಿವಾಸಿ ಬಶೀರ್ ಕೆ ಪಿ. ಯಾನೆ ಆಕ್ರಿ ಬಶೀರ್ (44), ಕೇರಳದ ಕೊಲ್ಲಂ ಜಿಲ್ಲೆಯ ಆಲಪ್ಪಾಡ್ ನ ಪ್ರಕಾಶ್ ಬಾಬು ಯಾನೆ ಮಹಮ್ಮದ್ ನಿಯಾಜ್(46) ಹಾಗೂ ಬಂಟ್ವಾಳ ತಾಲೂಕಿನ ಪುದು ಗ್ರಾಮ ನಿವಾಸಿ ಎಫ್.ಜೆ.ಮಹಮ್ಮದ್ ಇಸ್ಮಾಯಿಲ್ ಬಂಧಿತರು. ಜಿಲ್ಲಾ ಪೊಲೀಸರ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಇರಾದಲ್ಲಿ ಈ ಮೂವರು ಖದೀಮರನ್ನು ಬಂಧಿಸಿದೆ. ಬಂಧಿತರಿಂದ 1.25 ಲಕ್ಷ ರೂ. ಮೌಲ್ಯದ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರ ಪೈಕಿ ಬಶೀರ್ ಕೆ.ಪಿ. ಎಂಬಾತ ಕುಖ್ಯಾತ ಕಳ್ಳನಾಗಿದ್ದು, ಈತನ ವಿರುದ್ದ ಬೇರೆ ಬೇರೆ ಠಾಣೆಗಳಲ್ಲಿ ಸುಮಾರು 13 ಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿ ಪ್ರಕಾಶ್ ಬಾಬು ಯಾನೆ ಮಹಮ್ಮದ್ ನಿಯಾಝ್ ಎಂಬಾತನ ವಿರುದ್ಧ 3 ಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿಗಳು ನ. 4ರಂದು ದೇವಸ್ಥಾನದ ಮುಂಬಾಗಿಲ ಮೂಲಕ ಒಳ ನುಗ್ಗಿ ಕಳ್ಳತನ ನಡೆಸಿ ಸಿಸಿ ಕ್ಯಾಮರಾದ ಡಿವಿಆರ್ನ್ನು ಕೂಡ ಹೊತ್ತೂಯ್ದಿದ್ದರು. ಅದಕ್ಕೆ ಮುನ್ನಾದಿನ ಫರಂಗಿಪೇಟೆ ಸುಜೀರಿನ ಶ್ರೀ ರವಳನಾಥ ಮಂದಿರದಲ್ಲೂ ಕಳ್ಳತನ ನಡೆದಿದ್ದು, ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ಇಳಿದಿದೆ.
* ಕಣ್ಣೂರು: ಮನೆಯಿಂದ 1 ಕೋಟಿ 73 ಲಕ್ಷದ ಚಿನ್ನಾಭರಣ, 1 ಕೋಟಿ ನಗದು ಕಳವು
ಕಣ್ಣೂರು: ವ್ಯಾಪಾರಿಯ ಮನೆಯಿಂದ ಬರೋಬ್ಬರಿ ಒಂದು ಕೋಟಿ 73 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ಒಂದು ಕೋಟಿ ರೂಪಾಯಿ ಕಳ್ಳತನಗೈದ ಘಟನೆ ನಡೆದಿದೆ. ಮದುವೆ ಕಾರ್ಯಕ್ರಮ ಹಿನ್ನಲೆ ತಮಿಳುನಾಡಿಗೆ ಹೋಗಿದ್ದಾಗ ಕಳ್ಳರು ಕೈಚಳಕ ತೋರಿದ್ದಾರೆ. ತಳಿಪರಂಬ ಮನ್ನ ಕೆಎಸ್ಇಬಿ ಬಳಿಯ ಅಶ್ರಫ್ ಟ್ರೇಡರ್ಸ್ ಮಾಲಕ ವಳಪಟ್ಟಣದ ಕೆ.ಪಿ. ಅಶ್ರಫ್ರ ಮನೆಯಿಂದ ಕಳವು ನಡೆದಿದೆ. ಅಶ್ರಫ್ ಹಾಗೂ ಕುಟುಂಬ ನವಂಬರ್ 19ರಂದು ಮಧುರೈಯಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ನ.24ರ ರಾತ್ರಿ 10.30ರ ವೇಳೆ ಮನೆಗೆ ಮರಳಿ ಬಂದಾಗ ಕಳವು ನಡೆದ ವಿಷಯ ಬೆಳಕಿಗೆ ಬಂದಿದೆ.
ಮನೆಯ ಹಿಂಭಾಗದ ಕಿಟಕಿ ಮುರಿದು ಕಳ್ಳರು ಒಳಗೆ ಪ್ರವೇಶಿಸಿದ್ದಾರೆ. ಮನೆಯ ಒಳಗೆ ಹಾಗೂ ಆವರಣದಲ್ಲಿದ್ದ ಸಿಸಿ ಕ್ಯಾಮರಾಗಳನ್ನು ಹಾನಿಗೊಳಿಸಿ ಕೃತ್ಯ ಎಸಗಲಾಗಿದೆ. ಹಣ ಹಾಗೂ ಚಿನ್ನಾಭರಣಗಳನ್ನು ಬೆಡ್ರೂಂನ ಕಪಾಟಿನಲ್ಲಿರಿಸಲಾಗಿತ್ತು. ಅವುಗಳನ್ನೆಲ್ಲಾ ಕಳ್ಳರು ದೋಚಿದ್ದಾರೆ. ವಿಷಯ ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಶೀಲನೆ ಆರಂಭಿಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಕಳೆದ ಕೆಲವು ದಿನಗಳಿಂದ ವಿವಿಧೆಡೆಗಳಲ್ಲಿ ವ್ಯಾಪಕ ಕಳವು ನಡೆದಿದೆ. ಇದರಿಂದ ಜನರು ತೀವ್ರ ಆತಂಕಕ್ಕೊಳಗಾಗಿರುವಾಗಲೇ ಬೆನ್ನಲ್ಲೇ ವ್ಯಾಪಾರಿಯ ಮನೆಯಿಂದ ಭಾರೀ ಪ್ರಮಾಣದ ನಗ-ನಗದು ದೋಚಿದ ಘಟನೆ ನಡೆದಿದೆ.
ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಮರಕ್ಕೆ ಡಿಕ್ಕಿ: ಓರ್ವ ಮೃತ್ಯು
ಮಂಗಳೂರು: ಕೊಣಾಜೆಯ ಪುಳಿಂಚಾಡಿ ಇಳಿಜಾರು ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ಮರಕ್ಕೆ ಢಿಕ್ಕಿ ಹೊಡೆದು ಓರ್ವ ಸಾವನಪ್ಪಿ, ಇಬ್ಬರು ಗಾಯಗೊಂಡ ಘಟನೆ ನ. 24 ರಂದು ಭಾನುವಾರ ಸಂಜೆ ನಡೆದಿದೆ.
ಮೃತರು ಕುಂಬಳೆ ಮಂಜತ್ತಡ್ಕ ನಿವಾಸಿ ನಾರಾಯಣ ಗಟ್ಟಿ (50) ಮೃತರು ಎಂದು ಗುರುತಿಸಲಾಗಿದೆ. ಸಂಬಂಧಿಕರೊಬ್ಬರ ಆರೋಗ್ಯ ವಿಚಾರಿಸಲೆಂದು ಕೊಣಾಜೆ ಪುಳಿಂಚಾಡಿಯ ಕಲ್ಕಾರ್ ಎಂಬಲ್ಲಿಗೆ ನಾರಾಯಣ ಗಟ್ಟಿ ಅವರು ರಿಕ್ಷಾದಲ್ಲಿ ತೆರಳಿದ್ದರು. ಅಲ್ಲಿ ಇಳಿಜಾರು ಪ್ರದೇಶದಲ್ಲಿ ರಿಕ್ಷಾ ಇಳಿಯುತ್ತಿದ್ದಂತೆ ಬ್ರೇಕ್ ವೈಫಲ್ಯಕ್ಕೀಡಾಗಿ ಮರವೊಂದಕ್ಕೆ ಢಿಕ್ಕಿ ಹೊಡೆದಿದೆ.
ಈ ವೇಳೆ ಗಂಭೀರ ಗಾಯಗೊಂಡ ನಾರಾಯಣ ಗಟ್ಟಿ ಅವರು ಮೃತಪಟ್ಟಿದ್ದು, ಘಟನೆಯಲ್ಲಿ ರಿಕ್ಷಾದೊಳಗಿದ್ದ ಸಂಬಂಧಿ ಮಹಿಳೆ, ಅವರ ಪುತ್ರ ಹಾಗೂ ಇನ್ನೋರ್ವರಿಗೆ ಗಾಯಗಳಾಗಿವೆ. ನಾರಾಯಣ ಗಟ್ಟಿ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಉಳ್ಳಾಲ: ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
ಉಳ್ಳಾಲ: ಉಳ್ಳಾಲ ಇಲ್ಲಿನ ಸೋಮೇಶ್ವರದ ರುದ್ರಬಂಡೆಯಿಂದ ವಿದ್ಯಾರ್ಥಿನಿಯೋರ್ವಳು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಮಂಗಳೂರಿನ ಕಾರ್ಸ್ಟ್ರೀಟ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, ಉಳ್ಳಾಲದ ಮಾಡೂರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು.
ನ. 24 ರಂದು ಈಕೆ ಸೋಮೇಶ್ವರದ ರುದ್ರಬಂಡೆಯ ಮೇಲಿನಿಂದ ಸಮುದ್ರಕ್ಕೆ ಹಾರಿದ್ದಾಳೆ. ತಕ್ಷಣ ಅಲ್ಲಿಯೇ ಇದ್ದ ಸ್ಥಳೀಯ ವೀನುಗಾರರೋರ್ವರು ಸಮುದ್ರಕ್ಕೆ ಹಾರಿ ಆಕೆಯನ್ನ ರಕ್ಷಿಸಿದ್ದಾರೆ. ಬಳಿಕ ಟಯರ್ ಟ್ಯೂಬ್ ಮೂಲಕ ಬಂದ ಮತ್ತೋರ್ವ ಮೀನುಗಾರ ಆಕೆಯನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.