ಕರಾವಳಿ ಟಾಪ್ ನ್ಯೂಸ್
– ಸೋಷಿಯಲ್ ಮೀಡಿಯಾ ಲವ್: ಬಾಲಕಿ ಆತ್ಮಹತ್ಯೆ!
– ಮಂಗಳೂರು: ಬೊಲೆರೊ ಕಾರಿಗೆ ಬೆಂಕಿ, ವಾಹನ ಸಂಪೂರ್ಣ ಭಸ್ಮ!
– ಹೆಬ್ರಿ: ಮರದಿಂದ ಬಿದ್ದು ಪ್ರಗತಿಪರ ಕೃಷಿಕ ಮೃತ್ಯು
– ಮಲ್ಪೆ: ಯುವಕ ನಾಪತ್ತೆ: ಎಲ್ಲಿಗೆ ಹೋದ ಯುವಕ?
NAMMUR EXPRESS NEWS
ಬೆಳ್ತಂಗಡಿ: ಕಾಲೇಜ್ ವಿದ್ಯಾರ್ಥಿನಿ ಮನೆಯಲ್ಲಿ ಇಲಿಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿ ತಾಯಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಯುವಕನೊಬ್ಬ ಕಾರಣ ಎಂದು ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಬಳಿಕ ಯುವಕ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ನಿವಾಸಿ 17 ವರ್ಷದ ಅಪ್ರಾಪ್ತ ವಯಸ್ಸಿನ ಪಿಯುಸಿ ವಿದ್ಯಾರ್ಥಿನಿಯನ್ನು ಚಾರ್ಮಾಡಿ ಗ್ರಾಮದ ಪ್ರವೀಣ್ ಗೌಡ ಎಂಬಾತ ಸಾಮಾಜಿಕ ಜಾಲತಾಣದ ಮುಖಾಂತರ ಪರಿಚಯ ಮಾಡಿಕೊಂಡಿದ್ದ. ಬಳಿಕ ಮದುವೆಯಾಗುವುದಾಗಿ ನಂಬಿಸಿದ್ದ. ವಿದ್ಯಾರ್ಥಿನಿ ತಾಯಿ ಜೊತೆ ನನ್ನನ್ನು ಪ್ರವೀಣ್ ಜೊತೆ ಮದುವೆ ಮಾಡಿಕೊಡಿ ಎಂದು ಹೇಳಿದ್ದಾಳೆ. ಯುವಕ ಆಕೆಯ ಜೊತೆ ಬೇರೆ ಬೇರೆ ಕಡೆಗಳಿಗೆ ಸುತ್ತಾಡಿ ಫೋಟೋ ತೆಗೆಸಿಕೊಂಡಿದ್ದ. ಬಳಿಕ ಏಕಾಏಕಿ ನಾನು ನಿನ್ನನ್ನು ಮದುವೆಯಾಗಲ್ಲ ಎಂದು ಹೇಳಿದ್ದು, ನೊಂದ ವಿದ್ಯಾರ್ಥಿನಿ ನ.20 ರಂದು ರಾತ್ರಿ ಮನೆಯಲ್ಲಿ ಅಂಗಡಿಯಿಂದ ತಂದಿದ್ದ ಇಲಿಪಾಷಣ ಪೇಸ್ಟ್ ಸೇವಿಸಿದ್ದಾಳೆ. ಬಳಿಕ ನ.26 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ವಿದ್ಯಾರ್ಥಿನಿ ತಾಯಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಮರಂಗಾಯಿ ನಿವಾಸಿ ಉಮನಗೌಡ ಮಗನಾದ ಪ್ರವೀಣ್ (22) ವಿರುದ್ಧ ದೂರು ನೀಡಿದ್ದಾರೆ.
* ವಿದ್ಯಾರ್ಥಿನಿ ಮೊಬೈಲ್ ನಲ್ಲಿದ ನಿಗೂಢ ರಹಸ್ಯಗಳೇನು?
ಇನ್ನೂ ವಿದ್ಯಾರ್ಥಿನಿ ಆತ್ಮಹತ್ಯೆ ಬಳಿಕ ಮನೆಮಂದಿ ಆಕೆಯ ಬಳಿಯಿಂದ ಮೊಬೈಲ್ ಪರಿಶೀಲನೆ ಮಾಡಿದ್ದು ಈ ವೇಳೆ ಅನೇಕ ಇಬ್ಬರ ನಡುವೆ ನಡೆದ ಮೆಸೇಜ್, ವಿಡಿಯೋ ಕರೆ ಮಾಡಿದ ಚಾಟ್ ಲಿಸ್ಟ್ , ತಿರುಗಾಡಿದ ಫೋಟೋಗಳು ಹಾಗೂ ಇನ್ನಿತರ ನಿಗೂಢ ರಹಸ್ಯಗಳು ಪತ್ತೆಯಾಗಿದೆ. ವಿದ್ಯಾರ್ಥಿನಿ ಜೊತೆ ಯುವಕ ನ.25 ದವರೆಗೂ ಸಂಪರ್ಕದಲ್ಲಿದ್ದು ಮೆಸೇಜ್ ಮೂಲಕ ಮಾತಾನಾಡಿದ್ದಾರೆ. ಈ ವೇಳೆ ನನಗೆ ನೀನು ಬೇಕು ನನ್ನಿಂದ ನಿನ್ನನ್ನು ಮರೆತುಬಿಡಲು ಸಾಧ್ಯವಾಗುತ್ತಿಲ್ಲ, ನನ್ನನ್ನು ಮದುವೆಯಾಗು ಎಂದು ವಿದ್ಯಾರ್ಥಿನಿ ಗೋಳಾಡಿದ್ದಾಳೆ ಇದೆಲ್ಲ ಮೆಸೇಜ್ ಹಾಗೆಯೇ ಮೊಬೈಲ್ ನಲ್ಲಿದ್ದು, ಇದೀಗ ನನ್ನ ಮಗಳ ಸಾವಿಗೆ ನ್ಯಾಯ ಬೇಕು ಎಂದು ವಿದ್ಯಾರ್ಥಿನಿ ತಾಯಿ ಕಣ್ಣೀರು ಹಾಕುತ್ತಿದ್ದಾರೆ.
ಬೊಲೆರೊ ಕಾರಿಗೆ ಬೆಂಕಿ, ವಾಹನ ಸಂಪೂರ್ಣ ಭಸ್ಮ
ಮಂಗಳೂರು: ನಗರದ ಫಳ್ನೀರ್ ಬಳಿ ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದ್ದ ವಾಹನವೊಂದು ಬೆಂಕಿಗಾಹುತಿಯಾದ ಘಟನೆ ನ. 28ರಂದು ರಾತ್ರಿ ನಡೆದಿರುವುದು ವರದಿಯಾಗಿದೆ. ಫಳ್ನೀರ್ ಬಳಿಯ ಚಿನ್ನಾಭರಣಗಳ ಅಂಗಡಿಯ ಮುಂದೆ ನಿಲ್ಲಿಸಲಾಗಿದ್ದ ಮಹೇಂದ್ರ ಬೊಲೆರೊ ವಾಹನ ಬೆಂಕಿಗೆ ಸುಟ್ಟು ಕರಕಲಾಗಿದೆ. ತಕ್ಷಣ ಅಗ್ನಿ ಶಾಮಕ ದಳ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು. ಕೆಲವು ದಿನಗಳ ಹಿಂದೆಯಷ್ಟೇ ಸರಿ ಸುಮಾರು ಮೂರು ಕಾರು ಜಿಲ್ಲೆಯಲ್ಲಿ ಬೆಂಕಿಗೆ ಆಹುತಿಯಾಗಿತ್ತು.
* ಹೆಬ್ರಿ: ಮರದಿಂದ ಬಿದ್ದು ಪ್ರಗತಿಪರ ಕೃಷಿಕ ಮೃತ್ಯು
ಹೆಬ್ರಿ: ಪ್ರಗತಿಪರ ಕೃಷಿಕ ಜ್ಞಾನೇಶ್ವರ ಹೆಬ್ಟಾರ್(62) ಅವರು ನ. 27ರಂದು ಮರದಿಂದ ಬಿದ್ದು ಮೃತಪಟ್ಟ ಘಟನೆ ಕಬ್ಬಿನಾಲೆ ಹೊನ್ನ ಕೊಪ್ಪಲದಲ್ಲಿ ನಡೆದಿದೆ. ಕೃಷಿ ಚಟುವಟಿಕೆಗೆ ಸಂಬಂಧಿಸಿ ಮರದ ಗೆಲ್ಲು ಕಡಿಯುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಮಧ್ಯಾಹ್ನ ಹೊತ್ತು ಕೃಷಿ ಕೆಲಸಕ್ಕೆ ಹೋದ ತನ್ನ ಪತಿ ಮನೆಗೆ ಊಟಕ್ಕೆ ಬಾರದಿರುವುದನ್ನು ಗಮನಿಸಿ ಪತ್ನಿ ಹಾಗೂ ಮಗಳು ಹುಡುಕುತ್ತಾ ಹೋದಾಗ ಮರದಡಿ ಬಿದ್ದಿದ್ದರು.ಮುನಿಯಾಲು ಸರಕಾರಿ ಪದವಿ ಪೂರ್ವ ಕಾಲೇಜಿನ ಎಸ್ ಡಿಎಂಸಿ ಅಧ್ಯಕ್ಷರಾಗಿ, ಕಬ್ಬಿನಾಲೆ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ವಿವಿಧ ಸಂಘ, ಸಂಸ್ಥೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು. ಮೃತರು ಪತ್ನಿ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
* ಮಲ್ಪೆ: ಯುವಕ ನಾಪತ್ತೆ
ಉಡುಪಿ: ಮಲ್ಪೆಯ ಬೋಟ್ನಲ್ಲಿ ಮೀನು ಖಾಲಿ ಮಾಡುವ ಕೆಲಸ ಮಾಡಿಕೊಂಡಿದ್ದ ಕೊಪ್ಪಳ ಜಿಲ್ಲೆಯ ಕನಕಪ್ಪ(20) ಎಂಬವರು ನ.23ರಂದು ಸಂಜೆ ಊರಿಗೆ ಹೋಗುವುವುದಾಗಿ ಹೇಳಿ ಮಲ್ಪೆಯ ಬಾಡಿಗೆ ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.